ಕೊಡಗಿನಲ್ಲಿ ಮಳೆಯ ಅವಾಂತರ: ಗಜಪಯಣದ ಮೇಲೆ ಕರಿನೆರಳು
ಮೈಸೂರು

ಕೊಡಗಿನಲ್ಲಿ ಮಳೆಯ ಅವಾಂತರ: ಗಜಪಯಣದ ಮೇಲೆ ಕರಿನೆರಳು

August 20, 2018

ಮೈಸೂರು: ನೆರೆ ಜಿಲ್ಲೆ ಕೊಡಗಿನಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆ ಹಾಗೂ ಭೂ ಕುಸಿತದಿಂದ ಉಂಟಾಗಿರುವ ಅನಾಹುತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಗಜ ಪಯಣದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಸರಳ ಕಾರ್ಯಕ್ರಮದ ಮೂಲಕ ಆನೆಗಳನ್ನು ಕರೆತರುವಂತೆ ಅಥವಾ ಕಾರ್ಯಕ್ರಮದ ದಿನಾಂಕವನ್ನು ಮುಂದೂಡುವ ಸಾಧ್ಯತೆಯಿದೆ.

ಪ್ರತಿ ವರ್ಷದಂತೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳನ್ನು ಹುಣಸೂರು ತಾಲೂಕಿನ ವೀರನಹೊಸಳ್ಳಿ ಹಾಡಿಯ ಆಶ್ರಮ ಶಾಲೆಯ ಆವರಣದಿಂದ ಅದ್ಧೂರಿ ಕಾರ್ಯಕ್ರಮದ ಮೂಲಕ ಗಜಪಡೆಯನ್ನು ಜಿಲ್ಲಾಡಳಿತ ಪೂಜೆ ಸಲ್ಲಿಸಿ ಬರಮಾಡಿ ಕೊಳ್ಳುತ್ತಿತ್ತು. ಈ ಬಾರಿ ಆ.23ರಂದು ಗಜಪಯಣಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಕೊಡಗಿನಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದಿಂದ ಅಲ್ಲಿನ ಜಿಲ್ಲಾಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಸಂಕಷ್ಟದಲ್ಲಿರುವ ಕೊಡಗಿನ ಜನರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಗಜ ಪಯಣವನ್ನು ಅದ್ಧೂರಿಯಾಗಿ ಮಾಡುವುದು ಸರಿಯಲ್ಲ ಎಂಬ ಭಾವನೆ ವ್ಯಕ್ತವಾಗಿದೆ. ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿ ಕೊಂಡಂತಿರುವ ವೀರನಹೊಸಳ್ಳಿಯಲ್ಲಿಯೇ ಗಜಪಯಣಕ್ಕೆ ಚಾಲನೆ ನೀಡುವುದರಿಂದ ಅದ್ಧೂರಿ ಕಾರ್ಯಕ್ರಮ ಕೈ ಬಿಟ್ಟು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಆನೆಗಳನ್ನು ಕರೆತರುವ ಆಲೋಚನೆಯನ್ನು ಜಿಲ್ಲಾಡಳಿತ ಮಾಡುತ್ತಿದೆ.

ಮುಂದೂಡುವ ಸಾಧ್ಯತೆ: ಗಜಪಯಣಕ್ಕೆ ಆ.23 ಅಥವಾ ಆ.29 ರಂದು ಈ ಎರಡು ದಿನಾಂಕ ಸೂಕ್ತ ಎನ್ನಲಾಗಿತ್ತು. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಆ.23ರಂದೇ ಗಜಪಯಣಕ್ಕೆ ದಿನಾಂಕ ಸೂಚಿಸಿದ್ದರು. ಇದಕ್ಕಾಗಿ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡು ಮೊದಲ ತಂಡದಲ್ಲಿ ಗಜಪಡೆಯ ನಾಯಕ ಅರ್ಜುನ ನೇತೃತ್ವದಲ್ಲಿ 6 ಆನೆಗಳನ್ನು ಕರೆತರುವುದಕ್ಕೆ ನಿರ್ಧರಿಸಿತ್ತು. ಆದರೆ ನೆರೆ ಹಾವಳಿಗೆ ತತ್ತರಿಸಿರುವ ಕೊಡಗಿನಲ್ಲಿ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿರುವುದರಿಂದ ಹಾಗೂ ಮಳೆ ಮುಂದುವರೆಯುವುದರಿಂದ ಗಜಪಯಣವನ್ನು ಮುಂದೂಡುವುದಕ್ಕೂ ಚಿಂತನೆ ನಡೆಯುತ್ತಿದೆ. ಈಗಾಗಲೇ ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೆರೆ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸು ತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತವೂ ಪರಿಹಾರ ಹಾಗೂ ರಕ್ಷಣಾ ಕಾರ್ಯಕ್ಕೆ ಕೈಜೋಡಿಸಿದೆ. ಈ ಹಿನ್ನೆಲೆಯಲ್ಲಿ ಆ.29ಕ್ಕೆ ಗಜಪಯಣ ಮುಂದೂಡ ಬಹುದೆಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಉನ್ನತ ಸಮಿತಿಯ ಸಭೆಯೇ ನಡೆದಿಲ್ಲ: ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಇಂದಿಗೂ ಉನ್ನತ ಸಮಿತಿಯ ಸಭೆ ನಡೆದಿಲ್ಲ. ಮೂಲಗಳ ಮಾಹಿತಿಯಂತೆ ಸೋಮವಾರ(ಆ.20) ಸಂಜೆ ಬೆಂಗಳೂರಿನಲ್ಲಿ ಉನ್ನತ ಸಮಿತಿ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಒಳಗೊಂಡಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿರುವ ಉನ್ನತ ಸಮಿತಿಯ ಸಭೆಯಲ್ಲಿ ಗಜಪಯಣ ಅದ್ಧೂರಿಯಾಗಿ ನಡೆಸಬೇಕೋ ಅಥವಾ ಸರಳವಾಗಿ ನಡೆಸಬೇಕೋ ಎಂದು ಚರ್ಚೆಯಾಗುತ್ತದೆ. ಕಳೆದ ಒಂದು ವಾರದ ಹಿಂದೆಯೇ ನಡೆಯಬೇಕಾಗಿದ್ದ ಸಭೆ ಇಂದಿಗೂ ನಡೆಯದೆ ಇರುವುದರಿಂದ ದಸರಾ ಮಹೋತ್ಸವದ ಸಿದ್ಧತಾ ಕಾರ್ಯ ಆರಂಭವಾಗಿಲ್ಲ. ನಾಳೆ ಸಂಜೆಯ ವೇಳೆ ಅದು ಸ್ಪಷ್ಟವಾಗಲಿದೆ ಎಂಬ ಆಶಯ ಅಧಿಕಾರಿಗಳಲ್ಲಿದೆ.

Translate »