ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಗೆ 7 ವರ್ಷ ಜೈಲು ಶಿಕ್ಷೆ
ಮೈಸೂರು

ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಗೆ 7 ವರ್ಷ ಜೈಲು ಶಿಕ್ಷೆ

June 16, 2018

ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಮೈಸೂರಿನ 7ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

ನಂಜನಗೂಡು ತಾಲೂಕು ಹೊರಳ್ಳಿ ಗ್ರಾಮದ ನಿವಾಸಿ ಮಹದೇವಸ್ವಾಮಿ(31)ಗೆ ಶಿಕ್ಷೆ ವಿಧಿಸಲಾಗಿದೆ. ಈತ 2012ರಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದರ ಪರಿಣಾಮ ಆಕೆ ಗರ್ಭವತಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬದನವಾಳು ಠಾಣೆ ಪೊಲೀಸರು, ಮಹದೇವಸ್ವಾಮಿಯನ್ನು ಡಿಎನ್‍ಎ ಪರೀಕ್ಷೆಗೆ ಒಳಪಡಿಸಿದಾಗ ಮಗುವಿನ ತಂದೆ ಈತನೆ ಎಂದು ದೃಢಪಟ್ಟಿತ್ತು. ಬಳಿಕ ಮಹದೇವಸ್ವಾಮಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 7ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಚಂದ್ರಶೇಖರ್, ಮಹದೇವಸ್ವಾಮಿ ವಿರುದ್ದದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 7 ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ ವಿಧಿಸಿ ಇಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಪಿ.ಪಿ.ಮಹಾಂತಪ್ಪ ವಾದ ಮಂಡಿಸಿದ್ದರು.

Translate »