ಶಿಂಷಾನದಿ ಪುನಶ್ಚೇತನಕ್ಕೆ 126 ಕೋಟಿ ಯೋಜನೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಘೋಷಣೆ
ಮಂಡ್ಯ

ಶಿಂಷಾನದಿ ಪುನಶ್ಚೇತನಕ್ಕೆ 126 ಕೋಟಿ ಯೋಜನೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಘೋಷಣೆ

June 16, 2018

ಮದ್ದೂರು: ತಾಲೂಕಿನ ಶಿಂಷಾನದಿ ಪುನಶ್ಚೇತನಕ್ಕೆ 126 ಕೋಟಿ ರೂ.ಗಳ ಯೋಜನೆಯೊಂದನ್ನು ಸದ್ಯದಲ್ಲೇ ಜಾರಿಗೊಳಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿ, ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಯೋಜನೆಗೆ ಈಗಾಗಲೇ ತಾಂತ್ರಿಕ ಒಪ್ಪಿಗೆ ದೊರಕಿದೆ. ಸಚಿವ ಸಂಪುಟದ ಒಪ್ಪಿಗೆ ದೊರಕುತ್ತಿದ್ದಂತೆ ಶೀಘ್ರದಲ್ಲೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಘೋಷಿಸಿದರು.

ಜಿಲ್ಲೆಯ ಜನತೆ 7 ತಾಲೂಕುಗಳಲ್ಲೂ ಜೆಡಿಎಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ನೀಡಿದ್ದಾರೆ. ಈ ಋಣ ತೀರಿಸಲು ಜಿಲ್ಲೆಯ ಪ್ರತಿಷ್ಠಿತ ಕಾರ್ಖಾನೆ ಮೈಷುಗರ್ ಆಧುನೀಕರಣವನ್ನು ಒಂದೇ ಬಾರಿಗೆ ಮಾಡಲಾಗುವುದು. ಅಲ್ಲದೇ 4ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆಯುವ ಸಾಮಥ್ರ್ಯದ ಹೊಸ ಕಾರ್ಖಾನೆ ತೆರೆಯಲು ಯೋಜಿಸಲಾಗಿದೆ ಎಂದರು.

ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ನೌಕರರಿಗೆ 1ಲಕ್ಷ ಮನೆ ನಿರ್ಮಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ನೌಕರರ ಬಹುದಿನಗಳ ವಸತಿ ಕನಸು ಈಡೇರಲಿದೆ. ರಾಮನಗರದಲ್ಲಿ ಮತ್ತೊಂದು ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆ ತೆರೆಯಲು ಯೋಜಿಸಲಾಗಿದೆ ಎಂದರು.

ಜಿಲ್ಲೆಯ ಎಲ್ಲಾ ನಾಲೆಗಳು ಹಾಗೂ ಸೀಳು ನಾಲೆಗಳ ಆಧುನೀಕರಣಕ್ಕೆ 6ಸಾವಿರ ಕೋಟಿ ರೂ.ಗಳ ಯೋಜನೆ ಸಿದ್ದಗೊಳಿಸಲಾಗಿದೆ. ಕೆಆರ್‍ಎಸ್‍ನಿಂದ ಆಧುನಿಕ ನಾಲೆ ನಿರ್ಮಿಸಿ ಶಿಂಷಾ, ಕಣ್ವ, ಮಂಗಳ ಹಾಗೂ ಆರ್ಕಾವತಿ ನದಿಗಳಿಗೆ ವಾರ್ಷಿಕವಾಗಿ ಕನಿಷ್ಠ 6ಟಿಎಂಸಿ ನೀರು ತುಂಬಿಸಲು ಯೋಜಿಸಿದ್ದು, ಇದರಿಂದ ಈ ವ್ಯಾಪ್ತಿಯ ಎಲ್ಲಾ ಕೆರೆಕಟ್ಟೆಗಳು ತುಂಬಿ ರೈತರಿಗೆ ಅನುಕೂಲವಾಗಲಿದೆ ಎಂದರು.

ಎಂಎಲ್‍ಸಿ ಕೆ.ಟಿ.ಶ್ರೀಕಂಠೆಗೌಡ ಮಾತನಾಡಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿರುವ ಎಲ್ಲಾ ವಾಗ್ದಾನಗಳನ್ನು ಈಡೇರಿಸಲಿದ್ದಾರೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಥಮ ಪ್ರಾಶಸ್ತ್ಯ ನೀಡಲಿದ್ದಾರೆ ಎಂದರು.

ಇದಕ್ಕೂ ಮೊದಲು ಸಚಿವರಾಗಿ ಪಟ್ಟಣಕ್ಕೆ ಆಗಮಿಸಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಡಿ.ಸಿತಮ್ಮಣ್ಣ ಅಭಿಮಾನಿಗಳು ಸ್ವಾಗತ ನೀಡಿದರು.

ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಆವರಣದಲ್ಲಿ ತಾಲೂಕು ಯುವ ಅಧ್ಯಕ್ಷ ಸಿ.ಟಿ.ಶಂಕರ್ ಮತ್ತು ಸಿಪಾಯಿ ಹೋಟೆಲ್ ಮಾಲೀಕ ಶ್ರೀನಿವಾಸ್, ಶಿವದಾಸ್ ಹೋಟೆಲ್ ಮಾಲೀಕ ಸತೀಶ್ ಬೆಂಬಲಿಗರು ತೆರೆದ ವಾಹನದಲ್ಲಿ ಬಂದ ಸಚಿವರನ್ನು ಹಾಗೂ ಗಣ್ಯ ವ್ಯಕ್ತಿಗಳನ್ನು ಜೆಸಿಬಿ ಮೂಲಕ ಹೂವಿನ ಅಭಿಷೇಕ ಮಾಡಿದರು ಹಾಗೂ ಭಾರೀ ಗಾತ್ರದ ಹೂವಿನ ಹಾರ ಹಾಕಿ ಸ್ವಾಗತಿಸಿದರು. ನಂತರ ನೆರೆದಿದ್ದ ಸಾರ್ವಜನಿಕರಿಗೆ ಮೈಸೂರು ಪಾಕ್ ವಿತರಿಸಲಾಯಿತು.

ಈ ವೇಳೆ ಯುವ ಮುಖಂಡ ಡಿ.ಟಿ.ಸಂತೋಷ್, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ಡಾ.ಮಹೇಶ್ ಚಂದ್ ಮಾತನಾಡಿದರು. ಜಿಪಂ ಸದಸ್ಯರಾದ ಬೋರಯ್ಯ, ಮರಿಹೆಗಡೆ, ಸುಕನ್ಯಾ, ರೇಣುಕಾ, ಸುಚಿತ್ರಾ, ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕೆ.ಸ್ವಾಮಿಗೌಡ, ರಾಜ್ಯ ಕಾರ್ಯದರ್ಶಿ ಬಿಳಿಯಪ್ಪ, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ದಾಸೇಗೌಡ, ಯುವ ಅಧ್ಯಕ್ಷ ಸಿ.ಟಿ.ಶಂಕರ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಐ.ಪ್ರವೀಣ್, ಕೂಳಗೆರೆ ಶೇಖರ್, ಎನ್.ಆರ್.ಪ್ರಕಾಶ್, ಪ್ರಕಾಶ್ ಇತರರಿದ್ದರು.

ಲೋಕಸಭಾ ಚುನಾವಣೆ ಸ್ಪರ್ಧೆಗೆ ವರಿಷ್ಠರಿಂದ ಗ್ರೀನ್ ಸಿಗ್ನಲ್: ಡಾ.ಲಕ್ಷ್ಮಿ ಅಶ್ವಿನಿಗೌಡ

ಮದ್ದೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹೈಕಮಾಂಡ್ ಸೂಚನೆ ನೀಡಿದ್ದು, ಅಗತ್ಯ ಸಿದ್ಧತೆ ಕೈಗೊಂಡಿದ್ದೇನೆ ಎಂದು ಡಾ.ಲಕ್ಷ್ಮಿ ಅಶ್ವಿನಿಗೌಡ ತಿಳಿಸಿದರು.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಾಗಲೇ ಸೂಚನೆ ನೀಡಿದ್ಧಾರೆ. ಅದರಂತೆ ಇಷ್ಟರಲ್ಲಿಯೇ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಚುನಾವಣೆಗೆ ಅಗತ್ಯ ಸಿದ್ಧತೆ ನಡೆಸುವುದಾಗಿ ಹೇಳಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದೇ ಎಂಬ ಪ್ರಶ್ನೆಗೆ ಅದು ನನಗೆ ಗೊತ್ತಿಲ್ಲ. ಪಕ್ಷದ ಹಿರಿಯರು ಅದನ್ನು ನಿರ್ಧರಿಸಲಿದ್ದಾರೆ ಎಂದರು.

Translate »