ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಶೀಘ್ರ ಡಿಜಿಟಲೀಕರಣ
ಮೈಸೂರು ಗ್ರಾಮಾಂತರ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಶೀಘ್ರ ಡಿಜಿಟಲೀಕರಣ

January 30, 2020

ತಿ.ನರಸೀಪುರ, ಜ.29(ಎಸ್‍ಕೆ)-ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಸಹಕಾರ ನೀಡುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪಿಎಸಿಸಿಎಸ್)ಗಳನ್ನು ಸದ್ಯದಲ್ಲೇ ಡಿಜಿಟಲೀಕರಣಗೊಳಿಸಲಾಗುವುದು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ(ಎಂಸಿಡಿಸಿಸಿ) ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಹೇಳಿದರು.

ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬುಧವಾರ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿದ ಅವರು ಬಳಿಕ ಸಂಘದ ನಿರ್ದೇಶಕರು ಹಾಗೂ ವಿವಿಧ ಸಂಘಗಳ ಸಿಇಓಗಳೊಂದಿಗೆ ಸಮಾಲೋಚನೆ ನಡೆಸಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡಲು ಹಾಗೂ ಆಡಳಿತದಲ್ಲಿ ಸುಧಾರಣೆ ತರಲು ಗಣಕೀಕರಣ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಆಧುನಿಕತೆಗೆ ತಕ್ಕಂತೆ ತಾಂತ್ರಿಕತೆ ಅಳವಡಿಸಿಕೊಂಡು ಮೈಸೂರು ಹಾಗೂ ಚಾಮರಾಜನಗರ ಎರಡು ಜಿಲ್ಲೆಗಳಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದೇವೆ. ಪಟ್ಟಣ ಸೇರಿದಂತೆ ಕಸಬಾ ಹೋಬಳಿ ಗ್ರಾಮೀಣ ರೈತರಿಗೆ ಉತ್ತಮ ಸೇವೆ ನೀಡುತ್ತಿರುವ ಸಹಕಾರ ಸಂಘಕ್ಕೆ ಹೆಚ್ಚಿನ ಸಹಕಾರ ನೀಡಬೇಕೆಂಬ ಕಾಳಜಿ ಇದ್ದು, ಬೈಲಾದ ಪರಿಮಿತಿಯಲ್ಲೇ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ತಿ.ನರಸೀಪುರ ಪಟ್ಟಣದಲ್ಲಿರುವ ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಬೇಟಿ ನೀಡಿದ್ದ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಟಿ.ಹರೀಶ್ ಗೌಡ ಹಾಗೂ ಉಪಾಧ್ಯಕ್ಷ ಸದಾನಂದ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಮಲ್ಲಣ್ಣ, ನಿರ್ದೇಶಕರಾದ ಎನ್.ಶೇಖರ್, ಕೆ.ನಂಜುಂಡಸ್ವಾಮಿ ಇನ್ನಿತರರು ಇದ್ದಾರೆ.

Translate »