ಎರಡೇ ಗಂಟೆಯಲ್ಲಿ ಸಾವಿರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ!
ಮೈಸೂರು

ಎರಡೇ ಗಂಟೆಯಲ್ಲಿ ಸಾವಿರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ!

January 30, 2020

ಎನ್‍ಆರ್ ಸಂಚಾರಿ ಪೊಲೀಸರಿಂದ 1.64 ಲಕ್ಷ ದಂಡ ವಸೂಲಿ
ಮೈಸೂರು, ಜ.29(ಆರ್‍ಕೆ)-ಮಿಂಚಿನ ಕಾರ್ಯಾಚರಣೆ ನಡೆಸಿದ ಎನ್‍ಆರ್ ಸಂಚಾರ ಠಾಣೆ ಪೊಲೀಸರು, ಕೇವಲ ಎರಡೇ ಗಂಟೆಯಲ್ಲಿ ಸಾವಿರ ಸಂಚಾರ ನಿಯಮ ಉಲ್ಲಂ ಘನೆ ಪ್ರಕರಣ ದಾಖಲಿಸಿ, 1,64,800 ರೂ. ದಂಡ ವಸೂಲಿ ಮಾಡಿದ್ದಾರೆ. ಮೈಸೂರಿನ ಮಂಡಿ ಮೊಹಲ್ಲಾ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ನಿರ್ದೇಶನದಂತೆ ಎನ್‍ಆರ್ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ದಿವಾಕರ್‍ಗೌಡ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಶೇಷ ಕಾರ್ಯಾ ಚರಣೆ ನಡೆಸಿದರು. ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ 4 ತಂಡದಲ್ಲಿ ಸಂಚಾರ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮತ್ತು ಸವಾರಿ, ಸೀಟ್ ಬೆಲ್ಟ್ ಧರಿಸದಿರುವುದು, ಮೊಬೈಲ್ ಫೋನ್‍ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಹಾಗೂ ದ್ವಿಚಕ್ರ ವಾಹನದಲ್ಲಿ ಮೂವರು ಸವಾರಿ ಸೇರಿದಂತೆ ವಿವಿಧ ರೀತಿಯ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಸಾವಿರ ಪ್ರಕರಣಗಳನ್ನು ದಾಖಲಿಸಲಾಯಿತು. ಸಂಚಾರ ವಿಭಾಗದ ಎಸಿಪಿ ಸಂದೇಶ್‍ಕುಮಾರ್ ಮೇಲ್ವಿಚಾರಣೆಯಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 10 ಮಂದಿ ಸಂಚಾರ ಎಎಸ್‍ಐ, ಪಿಎಸ್‍ಐ ಸೇರಿ 40ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು.

Translate »