ಕೊಡಗಿನ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ
ಮೈಸೂರು

ಕೊಡಗಿನ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ

November 4, 2019

ಗೋಣಿಕೊಪ್ಪ, ನ.೩-ಕೊಡಗಿನಲ್ಲಿ ವಿವಿಧ ರಾಜ್ಯಗಳ ಯುವಕ-ಯುವತಿಯರ ರೇವ್ ಪಾರ್ಟಿ ನಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ವಿರಾಜ ಪೇಟೆ ತಾಲೂಕು ಪೊನ್ನಂಪೇಟೆ ಸಮೀಪದ ನಲ್ಲೂರು ಗ್ರಾಮದ ಹೋಂ ಸ್ಟೇನಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದ ಹೈದರಾಬಾದ್‌ನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವ ರನ್ನು ಪೊಲೀಸರು ಬಂಧಿಸಿದ್ದಾರೆ.

ಪಾರ್ಟಿಯಲ್ಲಿ ಬಳಸುತ್ತಿದ್ದ ಗಾಂಜಾ ಮತ್ತು ಮದ್ಯವನ್ನು ವಶಪಡಿಸಿಕೊಂಡಿ ರುವ ಪೊಲೀಸರು, ಪಾರ್ಟಿ ನಡೆಯುತ್ತಿದ್ದ ವೈಲ್ಡ್ ಹೆವನ್ ಹೋಂ ಸ್ಟೇ ಮಾಲೀಕ ಪುಲ್ಲಂಗಡ ಕೆ.ಮುತ್ತಪ್ಪ ಅಲಿಯಾಸ್ ವಿವೇಕ್ (೨೫), ಹೈದರಾಬಾದ್‌ನ ವಿಜ್ಞಾನ ಭಾರತಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾ ಲಜಿಯ ಎಂ.ಎಸ್. ವಿದ್ಯಾರ್ಥಿ ಎಲ್. ನಿತೀಶ್ (೨೩) ಮತ್ತು ಬಿ.ಟೆಕ್. ವಿದ್ಯಾರ್ಥಿ ಬಿ.ಭರತ್‌ಚಂದ್ರ (೨೨) ಅವರನ್ನು ಬಂಧಿಸಿದ್ದಾರೆ.

ಎಂಎಸ್ ವಿದ್ಯಾರ್ಥಿ ಆಗಿರುವ ನಿತೀಶ್ ಹೋಂ ಸ್ಟೇ ಮಾಲೀಕ ವಿವೇಕ್‌ಗೆ ಪರಿಚಯಸ್ಥನಾಗಿದ್ದು, ಕೊಡಗಿ ನಲ್ಲಿ ಅಂತರರಾಷ್ಟಿಯ ಡಿಜೆಯಿಂದ ರೇವ್ ಪಾರ್ಟಿ ಏರ್ಪಡಿಸಲಾಗಿದೆ ಎಂದು ಇಂಟರ್ ನೆಟ್ ಹಾಗೂ ವಾಟ್ಸಪ್ ಮುಖಾಂತರ ಪ್ರಚಾರ ಮಾಡಿದ್ದಾನೆ ಎಂದು ಹೇಳಲಾಗಿದೆ.

ರೇವ್ ಪಾರ್ಟಿ ಆಯೋಜಿಸುವ ಹವ್ಯಾಸ ಇಟ್ಟುಕೊಂಡಿರುವ ಈತನ ಬಳಿ ಚಂಡೀಘಡ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನ ಯುವಕ-ಯುವತಿಯರು ರೇವ್ ಪಾರ್ಟಿಗೆ ಹಣ ನೀಡಿ ಬುಕ್ ಮಾಡಿ ಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾರಾಂತ್ಯ ದಿನವಾದ ಶನಿವಾರ ೧೦೭ ಯುವಕರು ಹಾಗೂ ೧೪ ಯುವತಿಯರು ಸೇರಿದಂತೆ ಒಟ್ಟು ೧೨೧ ಮಂದಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಮಾದಕ ವಸ್ತು ಹಾಗೂ ಮದ್ಯ ಸೇವಿಸಿ ಅಬ್ಬರದ ಡಿಜೆ ಸಂಗೀತಕ್ಕೆ ಶನಿವಾರ ರಾತ್ರಿ ಕುಣಿದು ಕುಪ್ಪಳಿಸುತ್ತಿದ್ದರು. ಈ ಬಗ್ಗೆ ಜಿಲ್ಲಾ ಎಸ್ಪಿ ಡಾ. ಸುಮನ್ ಡಿ.ಪಿ. ಅವರಿಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅವರ ಆದೇಶದ ಮೇರೆಗೆ ವಿರಾಜಪೇಟೆ ಡಿವೈಎಸ್‌ಪಿ ಸಿ.ಟಿ.ಜಯಕುಮಾರ್ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ಕುಟ್ಟ ಮತ್ತು ಪೊನ್ನಂಪೇಟೆ ಪೊಲೀಸರು ಹೋಂ ಸ್ಟೇ ಮೇಲೆ ದಾಳಿ ನಡೆಸಿದರು.

ಪಾರ್ಟಿಯಲ್ಲಿ ಉಪಯೋಗಿಸುತ್ತಿದ್ದ ೬೫ ಗ್ರಾಂ ಗಾಂಜಾ, ೨೧ ಬಿಯರ್ ಬಾಟಲ್, ೨ ಮೊಬೈಲ್, ಓಂಕಾರ್ ಜನರೇಟರ್ ಸೆಟ್ ವಾಹನ, ೬ ಡಿಜೆ ಸೌಂಡ್ ಸಿಸ್ಟಂ, ಪ್ರಚಾರಕ್ಕಾಗಿ ಅಳವಡಿಸಿದ್ದ ಬ್ಯಾನರ್ ಹಾಗೂ ೮೪ ಸಾವಿರ ನಗದನ್ನು ವಶಪಡಿಸಿಕೊಂಡು ವಿವೇಕ್, ನಿತೀಶ್, ಭರತ್‌ಚಂದ್ರ ಅವರನ್ನು ಬಂಧಿಸಿ, ಅವರ ವಿರುದ್ಧ ಎನ್‌ಡಿಪಿಎಸ್ ಕಾಯಿದೆ, ೩೪ ಅಬಕಾರಿ ಕಾಯಿದೆ ಹಾಗೂ ೧೮೮ ಐಪಿಸಿ ಕಲಂನಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್ ಎಂ.ಮಹೇಶ್, ಎಎಸ್‌ಐ ಕೆ.ವೈ.ಹಮೀದ್, ಸಿಬ್ಬಂದಿಗಳಾದ ಎಂ.ಎನ್.ನಿರಂಜನ್ , ಬಿ.ಎಲ್.ಯೋಗೇಶ್‌ಕುಮಾರ್, ವಿ.ಜಿ.ವೆಂಕಟೇಶ್, ಕೆ.ಆರ್.ವಸಂತ, ಅನಿಲ್ ಕುಮಾರ್, ಎಂ.ಬಿ.ಸುಮತಿ, ಮಮತಾ, ಚಾಲಕ ಶಶಿಕುಮಾರ್, ರಾಜೇಶ್, ಗಿರೀಶ್, ಜೋಸೆಫ್, ಸಾಜಿ, ಜೋಸ್, ನಿಶಾಂತ್, ರಾಜ, ಕುಟ್ಟಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಪೊನ್ನಂಪೇಟೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಡಿ.ಕುಮಾರ್, ಸಿಬ್ಬಂದಿಗಳಾದ ಪ್ರಮೋದ್ ಕುಮಾರ್, ಸಿ.ಯು.ಸಾದಾಲಿ, ಸತೀಶ್, ಎಂ.ಡಿ.ಮನು, ಹರೀಶ್, ಕೆ.ಆರ್.ರಾಜೇಶ್ ಭಾಗವಹಿಸಿದ್ದರು. ಈ ಸಂಬAಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »