ಮಡಿಕೇರಿ: ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಹೋಂ ಸ್ಟೆ ಒಂದರಲ್ಲಿ ರೇವ್ ಪಾರ್ಟಿ ನಡೆಸಿ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ 5 ಮಂದಿ ಆರೋಪಿಗಳಿಗೆ ನ್ಯಾಯಾಲಯ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಜ.12 ರಂದು ರೇವ್ ಪಾರ್ಟಿಯಲ್ಲಿ ತೊಡಗಿದ್ದ ಆರೋಪಿಗಳ ಪೈಕಿ ಮುಂಬೈನ ಶಂಕರ್ ಶಾಂತನು(29) ಎಂಬಾತ ಆಕ್ಸಿಸ್ ಬ್ಯಾಂಕಿನ ಮುಂಬೈ ಪಶ್ಚಿಮ ಶಾಖೆಯ ಆಡಳಿತಾಧಿಕಾರಿ ಎಂದು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಖಚಿತಪಡಿಸಿದ್ದಾರೆ.
ಮತ್ತೋರ್ವ ಆರೋಪಿ ಜೂಡ್ ಪೆರೇರ(32) ಎಂಬಾತ ಪೂನಾದ ಎಡಿಒ ಉದ್ದಿಮೆ ಒಂದರಲ್ಲಿ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯಾಗಿದ್ದಾನೆ. 3ನೇ ಆರೋಪಿ ಎಂ.ವಿ. ಈಶ್ವರ್(33) ಬೆಂಗಳೂರಿನ ಮತ್ತಿಕೆರೆಯ ಎ.ಸಿ. ಸರ್ವೀಸ್ ಇಂಜಿನಿಯರ್ ಎಂದು ತಿಳಿದು ಬಂದಿದೆ. 4ನೇ ಆರೋಪಿ ಸಾಯಿರಾಮ್ ರಮೇಶ್(24) ಬೆಂಗಳೂರು ಕೇಂಬ್ರಿಡ್ಜ್ ಬಡಾ ವಣೆಯ ಪೈಂಟರ್ ಆಗಿದ್ದು, 5ನೇ ಆರೋಪಿ ಎಂ. ಅಪ್ಪಣ್ಣ ಹೋಂ ಸ್ಟೆ ಮತ್ತು ಕೃಷಿ ಕಾರ್ಯ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಮೊ.ಸಂ. 06/2019 ಕಲಂ 20(ಬಿ)(11) ಎನ್.ಡಿ.ಪಿ.ಎಸ್. ಕಾಯ್ದೆ ರೀತ್ಯ ಪ್ರಕರಣ ದಾಖಲಿಸಲಾಗಿತ್ತು. ಬಂಧಿತ 5 ಮಂದಿ ಆರೋಪಿಗಳಿಗೆ ವಿರಾಜಪೇಟೆ ಜೆಎಂಎಫ್‍ಸಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.