ಕೊಡಗಿನಲ್ಲಿ ಪರಿಹಾರ ಮತ್ತು ಪುನರ್ವಸತಿ: ಮನೆಗೆ ಹಿಂತಿರುಗಿದ ಸಂತ್ರಸ್ತರಿಗೆ ಸ್ವಚ್ಛತೆಯ ಸವಾಲು
ಕೊಡಗು

ಕೊಡಗಿನಲ್ಲಿ ಪರಿಹಾರ ಮತ್ತು ಪುನರ್ವಸತಿ: ಮನೆಗೆ ಹಿಂತಿರುಗಿದ ಸಂತ್ರಸ್ತರಿಗೆ ಸ್ವಚ್ಛತೆಯ ಸವಾಲು

August 28, 2018

ಮಡಿಕೇರಿ: ಕೊಡಗು ಜಿಲ್ಲೆ ಯಲ್ಲಿ ಸುರಿದ ಮರಣ ಮಳೆಯಿಂದ ಪ್ರವಾಹ ಮತ್ತು ಭಾರೀ ಭೂ ಕುಸಿತ ಸಂಭವಿಸಿದ್ದು, ಸಾವಿರಾರು ಮಂದಿ ತಮ್ಮ ಮನೆ, ಮಠ, ಜಾನುವಾರುಗಳನ್ನು ಕಳೆದುಕೊಂಡು ಕೊಡಗಿನ ವಿವಿಧೆಡೆ ಸ್ಥಾಪಿಸಿರುವ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈಗ ಮಳೆಯ ಪ್ರಮಾಣ ಕಡಿಮೆಯಾಗಿದೆ. ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರು ತಂಡೋಪತಂಡವಾಗಿ ನಿಧಾನವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಆದರೇನು ಅವರು ಅನುಭವಿಸುವ ತೊಂದರೆ ಮತ್ತು ಹತಾಶೆ ಗಳು ಮುಂದುವರೆದಿವೆ. ಮನೆಯತ್ತ ಸಾಗಿದವರಿಗೆ ಮತ್ತೊಂದು ರೀತಿಯ ಸಮಸ್ಯೆ ಸವಾಲಾಗಿ ಪರಿಣಮಿಸಿದೆ.

ಪ್ರವಾಹದಿಂದ ಕೆಲವರು ತಮ್ಮ ಮನೆಗಳನ್ನು ಪೂರ್ಣವಾಗಿ ಕಳೆದುಕೊಂಡಿದ್ದಾರೆ. ಇನ್ನು ಕೆಲವರ ಮನೆಗಳು ಪತ್ತೆಯಾಗಿದ್ದರೂ ಅದು ಭಾರಿ ದಿಬ್ಬಗಳು, ಮಣ್ಣು ಮತ್ತು ಕಸ ಕಡ್ಡಿಗಳಿಂದ ಮುಚ್ಚಿಕೊಂಡಿವೆ.

ಸದ್ಯದ ಪರಿಸ್ಥಿತಿಯಲ್ಲಿ ಸುಮಾರು 3,128 ನಿರಾಶ್ರಿತರು ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಸುತ್ತಮುತ್ತ ಸ್ಥಾಪಿಸಲಾಗಿರುವ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲದೆ, ಕೆಲವರು ತಮ್ಮ ಸಂಬಂಧಿಕರ ಮನೆಗಳಲ್ಲಿ ಮತ್ತು ಹೋಂ ಸ್ಟೇಗಳಲ್ಲಿ ಆಶ್ರಯ ಪಡೆದಿದ್ದು, ಅಲ್ಲಿ ಆಹಾರ ಮತ್ತು ಇನ್ನಿತರ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

ಇಳಿಜಾರು ಪ್ರದೇಶಗಳಲ್ಲಿ ಮನೆ ಹೊಂದಿದ್ದವರು ಪ್ರವಾಹದ ಸೆಳೆತಕ್ಕೆ ಸಿಲುಕಿ ಅವರ ಮನೆಗಳು ಕೊಚ್ಚಿ ಹೋಗಿವೆ. ಸಮತಟ್ಟು ಪ್ರದೇಶಗಳಲ್ಲಿ ಮನೆ ಹೊಂದಿದ್ದ ವರ ಮನೆಗಳಲ್ಲಿ ಮಣ್ಣು, ಕಸದ ರಾಶಿಯೇ ಶೇಖರಣೆ ಆಗಿದೆ. ನಿರಾಶ್ರಿತರು ತಮ್ಮ ತಮ್ಮ ಊರು-ಕೇರಿಗಳಿಗೆ ಹೋಗಿ ತಮ್ಮ ಮನೆಗಳನ್ನು ಹುಡುಕಲು ಪ್ರಯತ್ನಿ ಸುತ್ತಿದ್ದಾರೆ. ಆದರೆ ಕೆಲವು ಮನೆಗಳು ಪ್ರವಾಹದಲ್ಲಿ ಉಳಿದಿದ್ದು, ಇಂತಹ ಮನೆಗ ಳವರಿಗೆ ಈಗ ಹೊಸ ಸಮಸ್ಯೆಗಳು ಉದ್ಭವವಾಗಿವೆ. ಮನೆಯ ಒಳಗೆಲ್ಲಾ ಮಣ್ಣು ಮತ್ತು ಕಸದ ರಾಶಿ ತುಂಬಿದೆ. ಅಲ್ಲದೆ, ಹಾವು, ಚೇಳು ಮತ್ತು ಇನ್ನಿತರ ವಿಷ ಜಂತುಗಳೂ ಅಲ್ಲಿ ಆಶ್ರಯ ಪಡೆದುಕೊಂಡಿವೆ.

ಪ್ರವಾಹ ಮತ್ತು ಭೂಕುಸಿತದಿಂದ ಕೆಲವರು ಮನೆಗಳನ್ನು ಕಳೆದುಕೊಂಡಿದ್ದಾರೆ. ಆದರೆ ಕೆಲವರು ಮನೆಗಳು ಪ್ರಕೃತಿ ವಿಕೋಪದಲ್ಲಿ ಉಳಿದರೂ ಅದನ್ನು ಸ್ವಚ್ಛ ಮತ್ತು ದುರಸ್ತಿ ಮಾಡುವುದು ಒಂದು ಸವಾಲಾಗಿ ಪರಿಣಮಿಸಿದೆ. ಮನೆಯ ಸ್ವಚ್ಛ ಗೊಳಿಸಿ, ಅಲ್ಲಿ ವಾಸಿಸಲು ಯೋಗ್ಯವಾಗು ವಂತೆ ಮಾಡುವುದಕ್ಕೆ ಕನಿಷ್ಠ ಒಂದೆರಡು ವಾರಗಳ ಕಾಲ ಬೇಕಾಗುತ್ತದೆ. ಮನೆಯ ಒಳಗೆ ಸ್ವಚ್ಛಗೊಳಿಸಿದರೂ, ಮಣ್ಣು, ಕಸ ಕಡ್ಡಿ ಹಾಗೂ ಕೊಳೆತ ಗಿಡಗಂಟಿಗಳ ವಾಸನೆ ಬಹುದಿನ ಇರುತ್ತದೆ. ಇಂತಹ ಪರಿಸ್ಥಿತಿ ಯಲ್ಲಿ ಮನೆಯನ್ನು ದುರಸ್ತಿ ಮಾಡಿಸಲು ಸಾಕಷ್ಟು ಹಣ ಖರ್ಚಾಗಲಿದ್ದು, ಅದನ್ನು ಭರಿಸಲು ಹರಸಾಹಸ ಪಡುವಂತಾಗಿದೆ.

ಮನೆಯಲ್ಲಿ ವಿಷಕಾರಿ ಹಾವು, ಚೇಳು ಹಾಸಿಗೆ, ಚಾಪೆ ಮತ್ತು ಮಂಚಗಳ ಕೆಳಗೆ ಅಡಗಿರುತ್ತವೆ. ಆದ್ದರಿಂದ ಪ್ರವಾಹ ಸಂತ್ರಸ್ತರು ತಮ್ಮ ಮನೆಗಳಿಗೆ ತೆರಳುವಾಗ ಎಚ್ಚರಿಕೆಯಿಂದ ಇರಬೇಕೆಂದು ಪರಿಹಾರ ಕೇಂದ್ರದ ವ್ಯವಸ್ಥಾಪಕರು ಎಚ್ಚರಿಕೆ ನೀಡಿ ದ್ದಾರೆ. ಜನರು ಮನೆಯಲ್ಲಿರುವ ವಾಷಿಂಗ್ ಮೆಷಿನ್, ಬಟ್ಟೆಯ ರಾಶಿ ಮತ್ತು ಪೀಠೋ ಪಕರಣಗಳ ಕೆಳಗೆ ದೊಡ್ಡ ದೊಣ್ಣೆಯಿಂದ ವಿಷಕಾರಿ ಜಂತುಗಳನ್ನು ಪರಿಶೀಲಿಸಿ, ವಾಸ್ತವ್ಯ ಹೂಡಬೇಕೆಂದು ತಿಳಿಸಿದ್ದಾರೆ.

ಕೊಡಗಿನಲ್ಲಿ ಸುಮಾರು 51 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿತ್ತು. ಆಯಾ ಗ್ರಾಮಗಳ ಪರಿಹಾರ ಶಿಬಿರಗಳಲ್ಲಿನ ಪರಿಣಾಮ ಕಾರಿ ಕಾರ್ಯಾಚರಣೆ ಯಿಂದ ಈಗ 40ಕ್ಕೆ ಇಳಿಮುಖವಾಗಿವೆ. ಕಳೆದ ಕೆಲವು ದಿನಗಳಿಂದ ತಮ್ಮ ತಮ್ಮ ಮನೆಗಳಿಗೆ ತೆರಳಿದ ಕುಟುಂಬ ಗಳಿಗೆ, ಜೀವನ ಯಥಾಸ್ಥಿತಿ ಮರುಕಳಿಸು ವವರೆಗೂ ಅವರ ಪ್ರತಿನಿತ್ಯದ ಅಗತ್ಯತೆಗಳನ್ನು ಪೂರೈ ಸಲು ಕೊಡಗು ಜಿಲ್ಲಾಡಳಿತ ನಿರ್ಧರಿಸಿದೆ. ನಿರಾಶ್ರಿತ ಶಿಬಿರಗಳನ್ನು ಬಿಟ್ಟವರಿಗೆ 50 ಕೆ.ಜಿ. ಅಕ್ಕಿ ಮತ್ತು ಗೋಧಿ, ಬಿಸ್ಕೆಟ್ಸ್ ಪ್ಯಾಕೆಟ್‍ಗಳು, ಸಕ್ಕರೆ, ಟೂತ್ ಪೇಸ್ಟ್ ಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ಕಿಟ್ ರೂಪದಲ್ಲಿ ನೀಡಲಾಗುವುದು.

Translate »