ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರ ಕಿಟ್‍ಗಳು ಗ್ರಾಪಂ ಸದಸ್ಯನ ಮನೆಯಲ್ಲಿ ಪತ್ತೆ
ಕೊಡಗು

ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರ ಕಿಟ್‍ಗಳು ಗ್ರಾಪಂ ಸದಸ್ಯನ ಮನೆಯಲ್ಲಿ ಪತ್ತೆ

September 8, 2018

ಸುಂಟಿಕೊಪ್ಪ: ಮಳೆಹಾನಿ ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರ ಕಿಟ್‍ಗಳನ್ನು ಗ್ರಾಮ ಪಂಚಾಯ್ತಿ ಸದಸ್ಯರೋರ್ವರು ತಮ್ಮ ಸಂಬಂಧಿಯ ಮನೆಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ ಪ್ರಕರಣ ಬಯಲಾಗಿದೆ.

ಸುಂಟಿಕೊಪ್ಪದ ರಾಮಮಂದಿರ ಬಳಿಯ ಮನೆಯೊಂದರಲ್ಲಿ ಗರಂಗದೂರು ಗ್ರಾಮ ಪಂಚಾಯ್ತಿ ಸದಸ್ಯರೋರ್ವರು 40 ಚೀಲ ಪರಿಹಾರ ಕಿಟ್‍ಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದರು.

ಈ ಕುರಿತು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಸೋಮವಾರಪೇಟೆ ತಹಶೀಲ್ದಾರ್ ಮಹೇಶ್ ಮತ್ತು ಕಂದಾಯ ಅಧಿಕಾರಿಗಳು ಪರಿಹಾರದ ಕಿಟ್‍ಗಳನ್ನು ವಶಕ್ಕೆ ಪಡೆದು ಕುಶಾಲನಗರ ಎಪಿಎಂಸಿ ಗೋದಾಮಿಗೆ ಹಸ್ತಾಂತರಿಸಿದರು. ಪಡಿತರ ಕಿಟ್‍ಗಳನ್ನು ದಾಸ್ತಾನಿರಿಸಿದ ಮನೆಯ ಮೇಲೆ ಧಾಳಿಯಾಗುವ ಮಾಹಿತಿ ಅರಿತ ಗರಂದೂರು ಗ್ರಾಮ ಪಂಚಾಯ್ತಿ ಸದಸ್ಯ ಜೀಪಿನಲ್ಲಿ ಅದನ್ನು ಕಾಂಡನಕೊಲ್ಲಿಗೆ ಸಾಗಿಸುವ ಪ್ರಯತ್ನ ನಡೆಸಿರುವುದು ಕಂಡು ಬಂತು. ದಾಳಿ ನಡೆಸಿದ ಸಂದರ್ಭ ಸ್ಥಳಕ್ಕೆ ಬಂದ ಗ್ರಾಮ ಪಂಚಾಯ್ತಿ ಸದಸ್ಯ ಈ ಪರಿಹಾರ ಕಿಟ್‍ಗಳನ್ನು ಕಾಂಡನಕೊಲ್ಲಿಗೆ ವಿತರಿಸ ಬೇಕಿತ್ತು. ಆದರೆ ರಸ್ತೆ ಸರಿಯಿಲ್ಲದ ಕಾರಣ ಮನೆಯಲ್ಲಿ ದಾಸ್ತಾನಿರಿಸಿರುವುದಾಗಿ ಸ್ಪಷ್ಟನೆ ನೀಡಲು ಮುಂದಾದ ಪ್ರಸಂಗವೂ ನಡೆಯಿತು. ಇದಕೊಪ್ಪದ ತಹಶೀಲ್ದಾರ್ ಮಹೇಶ್ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಪರಿಹಾರ ಕಿಟ್‍ಗಳನ್ನು ದಾಸ್ತಾನು ಮಾಡಿರುವುದು ಕಾನೂನು ಬಾಹಿರ ಎಂದು ತಿಳಿಹೇಳಿ ವಸ್ತುಗಳನ್ನು ವಶಕ್ಕೆ ಪಡೆದರು. ಹಾಸನದಿಂದ ಪರಿಹಾರ ಕಿಟ್‍ಗಳು ಸುಂಟಿಕೊಪ್ಪಕ್ಕೆ ಬಂದಿದ್ದು ಅದನ್ನು ವಿಲೇವಾರಿ ಮಾಡದೇ ದಾಸ್ತಾನು ಮಾಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದರು.

Translate »