ನಿಷ್ಪಕ್ಷಪಾತ ವರದಿ ಮಾಡಿ: ಪತ್ರಕರ್ತರಿಗೆ ಸಿಎಂ ಸಲಹೆ
ಮೈಸೂರು

ನಿಷ್ಪಕ್ಷಪಾತ ವರದಿ ಮಾಡಿ: ಪತ್ರಕರ್ತರಿಗೆ ಸಿಎಂ ಸಲಹೆ

March 2, 2019

ಸುತ್ತೂರು: ಸರ್ಕಾರದ ಆಡಳಿತ ವೈಖರಿ, ನೀತಿ-ನಿರೂಪಣೆ ಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪತ್ರ ಕರ್ತರು ನಿಷ್ಪಕ್ಷಪಾತವಾಗಿ ಕೆಲಸ ಮಾಡ ಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಸಲಹೆ ನೀಡಿದ್ದಾರೆ.

ಮೈಸೂರು ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಇಂದು ಆರಂಭವಾದ ಎರಡು ದಿನಗಳ ಪತ್ರಕರ್ತರ 34ನೇ ರಾಜ್ಯ ಸಮ್ಮೇ ಳನದಲ್ಲಿ ಪಾಲ್ಗೊಂಡು ಮಾತ ನಾಡಿದ ಅವರು, ಮಾಧ್ಯಮಗಳು ಅತ್ಯಂತ ಜವಾ ಬ್ದಾರಿಯುತವಾಗಿ ಕಾರ್ಯ ನಿರ್ವಹಿ ಸುವ ಮೂಲಕ ಸರ್ಕಾರ ಹಮ್ಮಿ ಕೊಳ್ಳುವ ಜನಪರ ಕೆಲಸಗಳನ್ನು ನಾಡಿನ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸಬೇಕು. ಆದರೆ ಸರ್ಕಾರದ ಯೋಜನೆಗಳ ಉದ್ದೇಶ, ಅವುಗಳ ಸಂಪೂರ್ಣ ಮಾಹಿತಿಗಳು ಮಾಧ್ಯಮದಲ್ಲಿ ಬಿಂಬಿತ ವಾಗದೇ ಇರುವುದು ದುರದೃಷ್ಟಕರ. ಪತ್ರ ಕರ್ತರು ನೇರವಂತಿಕೆ, ನಿಷ್ಟೂರತೆ, ವಸ್ತು ನಿಷ್ಠ ಹಾಗೂ ಸತ್ಯನಿಷ್ಠವರದಿಗಳನ್ನು ನೀಡುತ್ತಾ ಮಾಧ್ಯಮದ ಮೌಲ್ಯಗಳನ್ನು ಸದಾ ಕಾಲ ಎತ್ತಿ ಹಿಡಿಯಬೇಕು ಎಂದು ನುಡಿದರು.

ಒಂಭತ್ತು ತಿಂಗಳ ನಮ್ಮ ಆಡಳಿತದಲ್ಲಿ ರೈತರ ಸಾಲ ಮನ್ನಾ, ಸಣ್ಣ ವ್ಯಾಪಾರಿ ಗಳಿಗೆ ಬಡವರ ಬಂಧು ಯೋಜನೆಗಳ ರೂಪಿಸಿ, ರೈತರ, ಶ್ರಮಿಕ ವರ್ಗಗಳ ಅಭಿ ವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ. ಇವು ನನ್ನ ಮತ್ತು ಸಮ್ಮಿಶ್ರ ಸರ್ಕಾರದ ಹೃದಯ ದಿಂದ ರೂಪಿಸಲ್ಪಟ್ಟ ಯೋಜನೆಗಳು. ಅವು ಅರ್ಥಪೂರ್ಣ ಅನುಷ್ಠಾನಗೊಳ್ಳು ವಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯ. ಉತ್ತಮ ಆಡಳಿತ ನೀಡಲು ಪೂರ್ವಗ್ರಹ ವಿಲ್ಲದ ವಿಮರ್ಶೆಯೊಂದು ಆಡಳಿತದ ದಾರಿ ತೋರುತ್ತದೆ. ಅದನ್ನು ನಾವು ನಿಮ್ಮಿಂದ ನಿರೀಕ್ಷಿಸುತ್ತೇವೆ. ಅಪರಾಧ ಸುದ್ದಿಗಳಲ್ಲಿ ಕ್ರೌರ್ಯವನ್ನು ಹೆಚ್ಚಾಗಿ ವೈಭವೀಕರಿಸದೇ ವಸ್ತುನಿಷ್ಠ ವರದಿಯನ್ನು ಜನರ ಮುಂದಿಡಬೇಕು. ಮನರಂಜನೆ ಯೊಂದಿಗೆ ಮಾಹಿತಿ ನೀಡುವ ಕೆಲಸವನ್ನು ಮಾಧ್ಯಮಗಳು ಇಂದು ಮಾಡಬೇಕಿದೆ ಎಂದ ಕುಮಾರಸ್ವಾಮಿಯವರು ಪತ್ರಿಕೋ ದ್ಯಮ ಇಂದು ಬದಲಾಗುತ್ತಿರುವ ಕಾಲಘಟ್ಟ ದಲ್ಲಿ ಅನೇಕ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಸುದ್ದಿ ಮನೆಗಳಲ್ಲಿ ದುಡಿ ಯುವ ಪತ್ರಕರ್ತರು ಆರೋಗ್ಯ, ಆರ್ಥಿಕ ಸಂಕಷ್ಟಗಳಿಗೆ ಸಿಕ್ಕಿ ನಲುಗುವುದನ್ನು ನಾನು ಕಣ್ಣಾರೇ ಕಂಡಿದ್ದೇನೆ. ಪತ್ರಕರ್ತರು ಅನಾರೋಗ್ಯ, ಅಪಘಾತದಂತಹ ದುರಂತಗಳಿಗೀಡಾಗಿ ಅವರ ಕುಟುಂಬದ ದುಃಖ ಕಂಡಾಗ ನನ್ನ ಮನಸ್ಸು ಘಾಸಿ ಗೊಳ್ಳುತ್ತದೆ ಎಂದರು.

ಕಾರ್ಯನಿರತ ಪತ್ರಕರ್ತರ ಕ್ಷೇಮಾಭಿ ವೃದ್ಧಿಗೆ ಪೂರಕ ನೆರವು ನೀಡಲು ರಾಜ್ಯ ಸರ್ಕಾರ ಸದಾ ಸಿದ್ದವಿದೆ. ಈಗಾಗಲೇ ಜಾರಿಯಲ್ಲಿರುವ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಇನ್ನಷ್ಟು ಪರಿಣಾ ಮಕಾರಿಯಾಗಿ ಅನುಷ್ಠಾನಗೊಳಿಸುವುದು ನಮ್ಮ ಸರ್ಕಾರದ ಉದ್ದೇಶ. ಇಂದು ದೇಶದಲ್ಲಿ ಸುಳ್ಳುಗಳೇ ವಿಜೃಂಭಿಸುತ್ತಾ ಸತ್ಯಗಳನ್ನು ಮರೆ ಮಾಚಲಾಗುತ್ತಿದೆ. ನಿಜವಾದ ಸುದ್ದಿ ಯಾವುದು ಎಂಬ ಗೊಂದಲವನ್ನೇ ಜನರಲ್ಲಿ ಹುಟ್ಟುಹಾಕುವ ಷಡ್ಯಂತರಗಳು ನಡೆಯುತ್ತಿವೆ. ಸಾಂಪ್ರದಾ ಯಿಕ ಮಾಧ್ಯಮಗಳ ಜೊತೆಗೆ ಇಂದಿನ ನವ ಮಾಧ್ಯಮಗಳು ಜನರ ವಿಶ್ವಾಸಾರ್ಹ ತೆಯನ್ನೇ ನಾಶ ಮಾಡುವ ಸಂದರ್ಭಗಳು ಆತಂಕವುಂಟು ಮಾಡಿದೆ ಎಂದರು.

ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಶ್ರೀಕ್ಷೇತ್ರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯಲ್ಲಿ ಆರಂಭವಾದ ಸಮ್ಮೇಳನವನ್ನು ಸುತ್ತೂರು ಮಠಾಧೀಶ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶ್ರೀಕ್ಷೇತ್ರದ ಪೀಠಾಧ್ಯಕ್ಷ ಜಗದ್ಗುರು ಶ್ರೀ ನಿರ್ಮಲಾನಂದಸ್ವಾಮೀಜಿ ಉದ್ಘಾಟಿಸಿದರು.

ವಸ್ತುಪ್ರದರ್ಶನ: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಹಿರಿಯ ಪತ್ರಕರ್ತ ರಾಜಶೇಖರ ಕೋಟಿ ಯವರ ಸ್ಮರಣಾರ್ಥ ಏರ್ಪಡಿಸಿರುವ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಂವಿ ಧಾನದ ಅಂಗಗಳಲ್ಲಿ ಮುಖ್ಯ ಕೇಂದ್ರ ಬಿಂದುವಾಗಿ ಕೆಲಸ ಮಾಡುತ್ತಿರುವ ಪತ್ರಿಕಾರಂಗ ತನ್ನದೇ ಆದ ಶಕ್ತಿ ಹೊಂದಿದೆ. ಸಾರ್ವಜನಿಕ ವಲಯದಲ್ಲಿ ತಪ್ಪುಗಳನ್ನು ತಿದ್ದಿ, ಮೋಸ, ವಂಚನೆ, ಭ್ರಷ್ಟರನ್ನು ಬಯಲಿಗೆಳೆದು ಜನರ ಬೆಂಗಾವಲಾಗಿ ಸೈನಿಕರಂತೆ ನಿಂತಿ ರುವ ಪತ್ರಕರ್ತರ ಕೆಲಸ ಶ್ಲಾಘನೀಯ ಎಂದರು.

ವಸ್ತುಪ್ರದರ್ಶನದಲ್ಲಿ 1933ರಷ್ಟು ಹಳೆಯದಾದ ಪತ್ರಿಕಾ ಮುದ್ರಣಯಂತ್ರ, ಜೋಡಣೆ ಮಾಡುತ್ತಿದ್ದ ಮೊಳೆಗಳು, ಬಳಸುತ್ತಿದ್ದ ಕಾಗದ ವಿವಿಧ ಆಕಾರಗಳ ಹಳೆಯ ಪತ್ರಿಕೆಗಳು, ಹಳೆ ಕಾಲದ ಟಿವಿಗಳ ಇತಿಹಾಸ, ಪತ್ರಿಕಾ ಛಾಯಾ ಗ್ರಾಹಕರು ಕ್ಲಿಕ್ಕಿಸಿರುವ ಅಪರೂಪದ ಹಾಗೂ ಮಹ ತ್ವದ ಸುದ್ದಿಚಿತ್ರಗಳು, ‘ಸಾಧಿ’್ವಪತ್ರಿಕೆಯ ಸುದ್ದಿ ಕೋಶ 1944, ಕರ್ನಾಟಕ ಮಾಧ್ಯಮ ಅಕಾಡೆಮಿ ಹೊರತಂದಿರುವ ಪತ್ರಿಕೆಗಳಿಗೆ ಸಂಬಂಧಿಸಿದ ಪುಸ್ತಕಗಳು, ಈ ಹಿಂದೆ ಬಳಸುತ್ತಿದ್ದ ಕ್ಯಾಮರಾಗಳು, ಖ್ಯಾತ ಹಿರಿಯ ಛಾಯಾಗ್ರಾಹಕರಾದ ಟಿ.ಎಸ್.ಸತ್ಯನ್ ಅವರ ಭಾವಚಿತ್ರ ಹಾಗೂ ಅವರು ಕ್ಲಿಕ್ಕಿಸಿ ರುವ ಫೋಟೋಗಳು, ಖ್ಯಾತ ಸಾಹಿತಿ ಆರ್.ಕೆ.ಲಕ್ಷ್ಮಣ್ ಅವರ ಸಾಹಿತ್ಯಗಳು, ವಿವಿಧ ವ್ಯಂಗ್ಯಚಿತ್ರಕಾರರು ರಚಿಸಿರುವ ಅಪರೂಪದ ಹಾಗೂ ಪರಿಣಾಮಕಾರಿ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಪ್ರತಿ ಯೊಬ್ಬ ಹಿರಿಯ ಹಾಗೂ ಕಿರಿಯ ಪತ್ರಕರ್ತರು ರಾಜಶೇಖರಕೋಟಿ ಅವರ ವಸ್ತುಪ್ರದರ್ಶ ನಕ್ಕೆ ಭೇಟಿ ನೀಡಿ, ಹಳೆಯ ಪಾರಂಪರಿಕ ಪತ್ರಿಕೆಗಳು ಹಾಗೂ ಛಾಯಾಚಿತ್ರಗಳನ್ನು ವೀಕ್ಷಿಸಿ ತಂತ್ರಜ್ಞಾನ ಅಭಿವೃದ್ಧಿ ಆಗದಿರುವ ವೇಳೆ ಮುದ್ರಣ ಮಾಧ್ಯಮ ಹೇಗೆ ಕೆಲಸ ಮಾಡುತ್ತಿತ್ತು ಎಂಬ ಮಾಹಿತಿಯನ್ನು ಕುತೂಹಲದಿಂದ ಪಡೆಯುತ್ತಿರುವುದು ವಿಶೇಷವಾಗಿತ್ತು. ಇದೇ ಸ್ಥಳದಲ್ಲಿ ಆಕಾಶ ವಾಣಿ ಬೆಳೆದು ಬಂದ ರೀತಿ, ನಂತರ ತಂತ್ರಜ್ಞಾನಕ್ಕೆ ಹೊಂದಿಕೊಂಡ ಕ್ರಮ ಹಾಗೂ ಈ ಮಾಧ್ಯಮದಿಂದ ಸಾರ್ವಜನಿಕರಿಗೆ ಲಭ್ಯವಾಗುತ್ತಿರುವ ಮಾಹಿತಿಗಳನ್ನು ಒದಗಿಸಲಾಗಿದೆ.
ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗ ಡೂರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ನವ ದೆಹ ಲಿಯ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂ ಟದ ಅಧ್ಯಕ್ಷ ಬಿ.ವಿ.ಮಲ್ಲಿಕಾ ರ್ಜುನಯ್ಯ, ಎಂಸಿಡಿ ಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಶಾಸಕರಾದ ಅಡಗೂರು ಹೆಚ್.ವಿಶ್ವನಾಥ್, ಡಾ.ಯತೀಂದ್ರ ಸಿದ್ದರಾಮಯ್ಯ, ಜೆ.ಸಿ.ಮಾಧುಸ್ವಾಮಿ, ಜೆ.ಡಿ.ಎಸ್. ವಕ್ತಾರ ರಮೇಶ್ ಬಾಬು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಂತರ ನಡೆದ ಗೋಷ್ಠಿಯಲ್ಲಿ ‘ಮಾಧ್ಯಮ ಮತ್ತು ರಾಜಕಾರಣ’ ವಿಷಯ ಕುರಿತು ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಹೆಚ್. ವಿಶ್ವನಾಥ್, ಅಡಗೂರು ಜೆಡಿಎಸ್ ವಕ್ತಾರ ರಮೇಶ್ ಬಾಬು ಅವರು, ಮಾತ ನಾಡಿದರೆ, ‘ಸಮೂಹ ಮಾಧ್ಯಮ-ನೀತಿ ಸಂಹಿತೆ’ ವಿಷಯ ಕುರಿತು ವಾರ್ತಾ ಮತ್ತು ಪ್ರಚಾರ ಸಚಿವಾಲಯದ ಉಪ ನಿರ್ದೇ ಶಕಿ ಡಾ.ಪಿ.ಸಿ.ಪೂರ್ಣಿಮಾ, ದಿಗ್ವಿಜಯ ನ್ಯೂಸ್ ಸಂಪಾದಕರಾದ ಸುಭಾಷ್ ಹೂಗಾರ್ ಹಾಗೂ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ವಿಷಯ ಮಂಡಿಸಿದರು.
ಸಂಜೆ ಶ್ರೀಕ್ಷೇತ್ರ ಸುತ್ತೂರಿನಲ್ಲಿ ಪತ್ರಕರ್ತ ರಿಗೆ ಸಾಂಸ್ಕøತಿಕ ಕಾರ್ಯಕ್ರಮವನ್ನು ಏರ್ಪ ಡಿಸಲಾಗಿತ್ತು. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ತುಮಕೂರು, ಬೆಂಗಳೂರು, ರಾಮನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಸುಮಾರು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಪತ್ರಕರ್ತರ ಬೇಡಿಕೆಗಳಿಗೆ ಸ್ಪಂದನೆ: ಸಿಎಂ ಹೆಚ್‍ಡಿಕೆ ಭರವಸೆ
ಸುತ್ತೂರು: ರಾಜ್ಯದ ಪತ್ರಕರ್ತರ ಬೇಡಿಕೆಗಳು ಹಾಗೂ ಆಶೋತ್ತರಗಳಿಗೆ ಸರ್ಕಾರ ಪೂರಕ ವಾಗಿ ಸ್ಪಂದಿಸಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದಿಲ್ಲಿ ಭರವಸೆ ನೀಡಿದ್ದಾರೆ.

ಸುತ್ತೂರು ಶ್ರೀಕ್ಷೇತ್ರದಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ 34ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರಿಂದ ಮನವಿ ಸ್ವೀಕ ರಿಸಿ ಮಾತನಾಡಿದ ಅವರು, ಕೆಲವು ಜಿಲ್ಲೆಗಳಲ್ಲಿ ಪತ್ರಕರ್ತರ ಭವನಗಳ ನಿರ್ಮಾಣಕ್ಕೆ ಅನುವು, ಪತ್ರಿಕೆಗಳ ಜಾಹೀರಾತು ದರ ಹೆಚ್ಚಳ, ಸಣ್ಣ ಪತ್ರಿಕೆಗಳಿಗೆ ಜಾಹೀರಾತು ನೀಡುವ ಮೂಲಕ ಆರ್ಥಿಕ ನೆರವು, ಬೆಂಗಳೂರು ಪ್ರೆಸ್‍ಕ್ಲಬ್ ನಿರ್ಮಾಣಕ್ಕೆ ನೀಡಿ ರುವ 5 ಕೋಟಿ ರೂ. ಅನುದಾನವನ್ನು 10 ಕೋಟಿ ರೂ.ಗಳಿಗೆ ಹೆಚ್ಚಿಸುವುದು. ನಿವೃತ್ತಿ ವೇತನ, ಕ್ಷೇಮಾಭಿ ವೃದ್ಧಿ ನಿಧಿಗೆ ಅನುದಾನ ನೀಡುವ ಬಗ್ಗೆ ಸರ್ಕಾರ ಪೂರಕವಾಗಿ ಸ್ಪಂದಿಸಲಿದೆ ಎಂದು ನುಡಿದರು.

ಪತ್ರಕರ್ತರ ಮೇಲಿನ ಹಲ್ಲೆ ನಿಯಂತ್ರಿಸಿ, ಸೂಕ್ತ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ. ಗ್ರಾಮಾಂತರ ಪತ್ರಕರ್ತರಿಗೆ ಉಚಿತ ಬಸ್‍ಪಾಸ್ ನೀಡುವುದು ಹಾಗೂ ಹೆದ್ದಾರಿ ಗಳಲ್ಲಿ ಟೋಲ್ ರಹಿತ ವ್ಯವಸ್ಥೆ ಸೇರಿದಂತೆ ಇನ್ನಿತರ ಬೇಡಿಕೆಗಳ ಬಗ್ಗೆ ಅಧಿಕಾರಿ ಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದ ಕುಮಾರ ಸ್ವಾಮಿಯವರು ತಾವು ಹಾಗೂ ತಮ್ಮ ಸಮ್ಮಿಶ್ರ ಸರ್ಕಾರ ಪತ್ರಕರ್ತರ ಅಭ್ಯುದಯಕ್ಕೆ ಹಾಗೂ ಒಳಿತಿಗೆ ಸದಾ ನಿಮ್ಮೊಂದಿಗೆ ಇರಲಿದೆ ಎಂದು ಇದೇ ಸಂದರ್ಭ ಭರವಸೆ ನೀಡಿದರು.

ಶತಾಯುಷಿಗಳಿಗೆ ಸನ್ಮಾನ: ಇಂದು ನಡೆದ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಶತಾಯುಷಿಗಳಾದ ಖ್ಯಾತ ಹಿರಿಯ ಪತ್ರಕರ್ತ, ನಾಡೋಜ ಡಾ.ಪಾಟೀಲ ಪುಟ್ಟಪ್ಪ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ವಿಶ್ರಾಂತ ಪತ್ರಕರ್ತರಾದ ಹೆಚ್.ಎಸ್. ದೊರೆಸ್ವಾಮಿ ಅವರನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಆತ್ಮೀಯವಾಗಿ ಸನ್ಮಾನಿಸಿದರು.

ಪತ್ರಕರ್ತರು ಮೈಮರೆತು ತಪ್ಪು ಮಾಹಿತಿ ನೀಡಿದರೆ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧೀಶ ಜಗದ್ಗುರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಇಂದಿಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲೆಯ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ಪತ್ರಕರ್ತರ 34ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ವಸ್ತುನಿಷ್ಠ, ನಿಖರ ಹಾಗೂ ನಂಬಬಹುದಾದ ಸುದ್ದಿಯನ್ನು ನೀಡಬೇಕು. ಏಕೆಂದರೆ ಮಾಧ್ಯಮವನ್ನು ಜನರು ಬಲವಾಗಿ ನಂಬುತ್ತಾರೆ ಎಂದರು.

ಒಂದು ವೇಳೆ ಮೈಮರೆತು ತಪ್ಪು ಮಾಹಿತಿಯನ್ನು ನೀಡಿದರೆ, ಅದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಜನರು ತೊಂದರೆ ಅನುಭವಿಸು ವಂತಾಗಲಿದ್ದು, ಅದಕ್ಕೆ ಪತ್ರಕರ್ತರೇ ಕಾರಣರಾಗುತ್ತಾರೆ ಎಂದು ಶ್ರೀಗಳು ನುಡಿದರು.

ಅಂತಹ ಪರಿಣಾಮಕ್ಕೆ ರಾಮಾಯಣದ ಸಂಗತಿಯೊಂದನ್ನು ಉದಾಹರಣೆ ಯಾಗಿ ನೀಡಿದ ಶ್ರೀ ನಿರ್ಮಲಾನಂದನಾಥಸ್ವಾಮಿಗಳು, ಅಗಸನೋರ್ವ ಹೆಂಡತಿ ತಡವಾಗಿ ಮನೆಗೆ ಬರುತ್ತಿದ್ದರಿಂದ ಆಕೆಯೊಂದಿಗೆ ಜಗಳವಾಡುತ್ತಿರುತ್ತಾನೆ. ಆ ವಿಷಯ ತಿಳಿದ ಬಾತ್ಮೀದಾರನೋರ್ವ (informant), ಆ ಮಾಹಿತಿಯನ್ನು ರಾಮನಿಗೆ ತಿಳಿಸುತ್ತಾನೆ. ತದ ನಂತರ ರಾಮ ಸೀತೆಯನ್ನು ಕಾಡಿಗಟ್ಟಿದ ಸಂಗತಿ ನಿಮಗೆಲ್ಲಾ ಗೊತ್ತೇ ಇದೆ ಎಂದರು. ಎರಡು-ಮೂರು ದಿನಗಳಲ್ಲಿ ಅಗಸನ ಸಂಸಾರ ಸರಿ ಹೋಗಿ ನೆಮ್ಮದಿ ಜೀವನ ಆರಂಭಿಸುತ್ತಾರೆ. ಆ ವಿಷಯವನ್ನು ಮಾತ್ರ ಬಾತ್ಮೀದಾರ ಮತ್ತೆ ರಾಮನಿಗೆ ತಿಳಿಸುವುದೇ ಇಲ್ಲ. ಒಂದು ವೇಳೆ ತಕ್ಷಣವೇ ಅಗಸನ ಸಂಸಾರ ಸರಿಹೋಗಿದೆ ಎಂದು ಹೇಳಿದ್ದರೆ ರಾಮ-ಸೀತೆಯರ ನಡುವೆ ವೈಮನಸ್ಸು ಸರಿಹೋಗುತ್ತಿತ್ತಲ್ಲವೇ ಎಂದು ಶ್ರೀಗಳು ನುಡಿದರು.
ನೀವು ಯಾವುದೇ ವಿಷಯದ ಬಗ್ಗೆ ಸುದ್ದಿ ಮಾಡಿದರೂ, ನಂತರವೂ ಫಾಲೋ ಅಪ್ ಮಾಡಿ ಆ ಮಾಹಿತಿಯನ್ನೂ ತಕ್ಷಣವೇ ನೀಡಿದರೆ ಸಮಾಜದ ಮೇಲುಂಟಾ ಗುವ ದುಷ್ಪರಿಣಾಮಗಳನ್ನು ತಡೆಯಬಹುದು ಎಂದ ಅವರು, ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ಪ್ರಕಟಿಸಿದರೆ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು ಎಂದು ಅಭಿಪ್ರಾಯಪಟ್ಟರು.

ಐನ್‍ಸ್ಟೀನ್ ಅವರ ಕುರಿತ ಮತ್ತೊಂದು ಉದಾಹರಣೆಯನ್ನು ಉಲ್ಲೇಖಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು, ಐನ್‍ಸ್ಟೀನ್‍ರು ಹೇಳುತ್ತಿದ್ದರು, ವಿಶ್ವವಿದ್ಯಾ ನಿಲಯದಲ್ಲಿ ಸಾಮಾನ್ಯ ಪ್ರಾಧ್ಯಾಪಕನಾಗಿ ತಾವು ಮಾಡುತ್ತಿದ್ದ ಕೆಲಸಗಳನ್ನು ಮಾಧ್ಯಮಗಳು ಬೆಳಕಿಗೆ ತರುತ್ತಿದ್ದ ಕಾರಣ ತಾನು ಎತ್ತರಕ್ಕೆ ಬೆಳೆದೆ. ತದನಂತರ ನೆಗೆಟೀವ್ ವಿಷಯಗಳನ್ನೂ ಅದೇ ಮಾಧ್ಯಮ ಪ್ರಕಟಿಸಿದವು. ಪಾಸಿಟೀವ್ ಹಾಗೂ ನೆಗೆಟೀವ್ ಅಭಿಪ್ರಾಯಗಳಿಗೆ ಕಿವಿಗೊಡದೆ ಮಾಡುವ ಕೆಲಸವನ್ನು ಸರಿಯಾಗಿ ಮಾಡಿದರೆ ಎಲ್ಲವೂ ಪೂರಕವಾಗಿರುತ್ತದೆ ಎಂದು ಹೇಳುತ್ತಿದ್ದರು ಎಂದು ತಿಳಿಸಿದರು.

Translate »