ಶೀಘ್ರ ಕೊಡಗು ಪುನರ್ ನಿರ್ಮಾಣಕ್ಕೆ ನಾಗರಿಕ ವೇದಿಕೆ ಮನವಿ
ಕೊಡಗು

ಶೀಘ್ರ ಕೊಡಗು ಪುನರ್ ನಿರ್ಮಾಣಕ್ಕೆ ನಾಗರಿಕ ವೇದಿಕೆ ಮನವಿ

October 5, 2018

ಪೊನ್ನಂಪೇಟೆ: ಕೊಡಗಿನಲ್ಲಿ ಸಂಭ ವಿಸಿದ ಪ್ರಕೃತಿ ವಿಕೋಪದಿಂದ ಅಪಾರ ನಷ್ಟ ಅನುಭವಿಸಿ ನೆಲೆ ಕಳೆದುಕೊಂಡು ನಿರಾಶ್ರಿತಗೊಂಡವರಿಗೆ ಸೂಕ್ತ ಪರಿಹಾರ, ಮನೆ ನಿರ್ಮಾಣ ಹಾಗೂ ಜಮೀನು ಮಂಜೂರಾತಿ ಸೇರಿದಂತೆ ಅಗತ್ಯ ಸೌಲ ಭ್ಯಗಳನ್ನು ಶೀಘ್ರ ಕಲ್ಪಿಸುವಂತೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಇಲ್ಲಿನ ನಾಗರಿಕ ವೇದಿಕೆ ಹಾಗೂ ಪೊನ್ನಂ ಪೇಟೆ ತಾಲೂಕು ಪುನರ್ರಚನಾ ಹೋರಾಟ ಸಮಿತಿ ಪತ್ರ ಬರೆದು ಮನವಿ ಮಾಡಿದೆ.

ಅನಿರೀಕ್ಷಿತ ಪ್ರಾಕೃತಿಕ ವಿಕೋಪಕ್ಕೆ ಮಡಿ ಕೇರಿ ತಾಲೂಕಿನ ಸುಮಾರು 15 ಗ್ರಾಮ ಗಳು, ಸೋಮವಾರಪೇಟೆ ತಾಲೂಕಿನ 12ಕ್ಕೂ ಹೆಚ್ಚು ಗ್ರಾಮಗಳು ಭೂಕುಸಿತ ದಿಂದ ಸಂಪೂರ್ಣ ನಾಶವಾಗಿದ್ದು, ಇದೀಗ ಪುನರ್ ನಿರ್ಮಾಣ ಮಾಡಬೇಕಾಗಿದೆ. ಇದಕ್ಕಾಗಿ ಸುಮಾರು 20 ಸಾವಿರ ಕೋಟಿ ರೂ.ಗು ಮೇಲ್ಪಟ್ಟು ಹಣ ಬೇಕಾಗಬಹು ದೆಂದು ಅಂದಾಜಿಸಲಾಗಿದೆ. ಅಲ್ಲದೆ ರಸ್ತೆ ಗಳ ಪುನರ್ ನಿರ್ಮಾಣ, ಸೇತುವೆಗಳ ರಿಪೇರಿ ಸೇರಿದಂತೆ ಹಲವು ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗುವುದ ರಿಂದ ಹೆಚ್ಚಿನ ಅನುದಾನ ಬೇಕಾಗಿದೆ ಎಂದು ವೇದಿಕೆ ಮನವಿ ಸಲ್ಲಿಸಿದೆ.

ಮಡಿಕೇರಿ-ಸುಳ್ಯ ರಸ್ತೆ ಹೆಚ್ಚಿನ ಪ್ರಮಾ ಣದಲ್ಲಿ ಹಾಳಾಗಿದ್ದು, ಇದನ್ನು ಶೀಘ್ರ ವಾಗಿ ದುರಸ್ತಿ ಪಡಿಸಬೇಕು. ಪ್ರತಿನಿತ್ಯ ಈ ಮಾರ್ಗದಲ್ಲಿ ಪುತ್ತೂರು-ಮಂಗಳೂರು ಕಡೆಗೆ ಹೆಚ್ಚಿನ ಜನ ಸಂಚಾರವಿದ್ದು, ಈ ಮಾರ್ಗದ ದುರಸ್ತಿ ಶೀಘ್ರ ಆಗಬೇಕಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಮಡಿಕೇರಿ-ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹಾನಿ ಗೊಳಗಾಗಿರುವ ಗ್ರಾಮಾಂತರ ರಸ್ತೆ ದುರ ಸ್ತಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಿ ತುಂಡು ಗುತ್ತಿಗೆ ಆಧಾರದಲ್ಲಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ಮನವಿ ಪತ್ರದಲ್ಲಿ ಕೋರಿದ್ದಾರೆ.

ಹಾಗೆಯೇ ಹಾನಿಗೊಳಗಾದ ಜಮೀನು ಗಳಲ್ಲಿ ಬಿದ್ದಿರುವ ಮರ ಮುಟ್ಟುಗಳನ್ನು ಮಾರಾಟ ಮಾಡಲು ಜಮೀನು ಮಾಲೀ ಕರಿಗೆ ಅನುಮತಿ ನೀಡುವಂತೆ ಕೋರ ಲಾಗಿದೆ. ಅಥವಾ ಅರಣ್ಯ ಇಲಾಖೆಯೇ ಮರಗಳನ್ನು ಖರೀದಿಸಿ ಅದರ ಬೆಲೆ ಯನ್ನು ಮಾಲೀಕರಿಗೆ ನೀಡಲು ಅರಣ್ಯ ಇಲಾಖೆಗೆ ಸೂಚಿಸುವಂತೆ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ.

ಕೊಡಗಿನ ಎಲ್ಲಾ ರಸ್ತೆಗಳು, ಹೆದ್ದಾರಿ ಗಳು ಗುಂಡಿ ಬಿದ್ದು ಹಾಳಾಗಿದೆ. ಇದ ರಿಂದ ವಾಹನ ಸವಾರರಿಗೆ ತೊಂದರೆಯಾ ಗಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಶೀಘ್ರವೇ ಇಂತಹ ಗುಂಡಿ ಮುಚ್ಚುವ ಕೆಲಸವನ್ನು ಕೈಗೊಳ್ಳಲು ಸೂಚಿಸುವಂತೆ ಕೋರಲಾಗಿದೆ. ಗೋಣಿ ಕೊಪ್ಪ-ಪೊನ್ನಂಪೇಟೆ-ಹುದಿಕೇರಿ-ಶ್ರೀಮಂಗಲ-ಕುಟ್ಟ ಮಾರ್ಗವಾಗಿ ಕೇರ ಳದ ಮಾನಂದವಾಡಿಗೆ ಹಲವಾರು ಸರಕು ವಾಹನಗಳು ತೆರಳುತ್ತಿದ್ದು, ಈ ಮಾರ್ಗವನ್ನು ದುರಸ್ತಿಪಡಿಸಬೇಕಾಗಿದೆ. ಅಲ್ಲಲ್ಲಿ ಕಿರು ಸೇತುವೆಗಳ ತಡೆ ಗೋಡೆ ಗಳು ಕುಸಿದಿದ್ದು, ಅಪಘಾತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಬೇಕು.

ಪ್ರಕೃತಿ ವಿಕೋಪದಿಂದ ನಿರಾಶ್ರಿತರಾದ ವರ ಮನೆ ನಿರ್ಮಾಣಕ್ಕೆ ಮೂರು ವಿಧ ವಾಗಿ ವಿಂಗಡಿಸಿ, ಹಾಲಿ ವಾಸಕ್ಕೆ ಯೋಗ್ಯ ವಾಗಿದ್ದರೆ. ಅದಕ್ಕೆ ಅಗತ್ಯ ರಿಪೇರಿಗೆ ಕ್ರಮ ಕೈಗೊಳ್ಳಬೇಕು. ದುರಸ್ತಿ ಅಸಾಧ್ಯವಾದರೆ ಪಕ್ಕ ಅಥವಾ ಬೇರೆ ಕಡೆ ಮನೆಗಳನ್ನು ನಿರ್ಮಿಸಬೇಕು. ಹಾಗೂ ಊರಾಚೆ ಮನೆ ಗಳನ್ನು ಒದಗಿಸಿಕೊಟ್ಟರೆ, 10 ಸೆಂಟು ಜಾಗ ನಿಗದಿ ಮಾಡಿ ಕನಿಷ್ಟ ಸೌಲಭ್ಯದೊಂದಿಗೆ ಆರ್‍ಸಿಸಿ ಮನೆ ನಿರ್ಮಿಸಿ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ರಸ್ತೆ ಕಲ್ಪಿಸು ವಂತೆ ಮನವಿ ಸಲ್ಲಿಸಿದೆ.

ಜಮೀನು ಕಳೆದುಕೊಂಡ ನಿರಾಶ್ರಿತರಿಗೆ ಕೃಷಿ ಯೋಗ್ಯ ಜಮೀನು, ತಾತ್ಕಾಲಿಕ ಧನ ಸಹಾಯ ನೀಡಬೇಕು. ಅಲ್ಲದೆ ನಿರಾಶ್ರಿತ ಕುಟುಂಬಗಳಿಗೆ ತಲಾ 5 ಸಾವಿರ ರೂ. ಗಳ ಮಾಸಿಕ ವಿಶೇಷ ಧನ ಸಹಾಯ ವನ್ನು ನೀಡುವಂತೆ ಕೋರಿದೆ.

ಉತ್ತಮ ಹಾಗೂ ನಿರೀಕ್ಷಿತ ತ್ವರಿತ ಆಡ ಳಿತ ನಿರ್ವಹಣೆಗೆ ಹಿಂದೆ ಅಸ್ತಿತ್ವದಲ್ಲಿದ್ದ 6 ತಾಲೂಕುಗಳನ್ನು ಪುನರ್ರಚಿಸುವಂತೆ ಸಲಹೆ ನೀಡಿದೆ. ಮಡಿಕೇರಿ ತಾಲೂಕನ್ನು ವಿಭಜಿಸಿ ನಾಪೋಕ್ಲು-ಭಾಗಮಂಡಲ ಹೋಬಳಿಗಳನ್ನು ಸೇರಿಸಿ ನಾಪೋಕ್ಲು ತಾಲೂಕು, ಕುಶಾಲನಗರ-ಸುಂಟಿಕೊಪ್ಪ ಹೋಬಳಿ ಸೇರಿಸಿ, ಕುಶಾಲನಗರ ತಾಲೂಕು, ವಿರಾಜಪೇಟೆ ತಾಲೂಕನ್ನು ವಿಭಜಿಸಿ ಪೊನ್ನಂಪೇಟೆ, ಬಾಳೆಲೆ, ಶ್ರೀಮಂಗಲ, ಹುದಿಕೇರಿ ಹೋಬಳಿ ಸೇರಿಸಿ ಪೊನ್ನಂ ಪೇಟೆ ತಾಲೂಕನ್ನು ಪುನರ್ರಚಿಸುವಂತೆ ಸಲಹೆ ನೀಡಿದ್ದಾರೆ. ಹಾಗೆಯೇ ದೊಡ್ಡ ದೊಡ್ಡ ಹೋಬಳಿಗಳನ್ನು ವಿಭಜಿಸುವಂತೆ ನಾಗರಿಕರ ವೇದಿಕೆ ತಿಳಿಸಿದೆ.

ಒಟ್ಟಾರೆ ಪ್ರಾಕೃತಿಕ ವಿಕೋಪದಿಂದ ಬಳಲಿರುವ ನೊಂದ ನಿರಾಶ್ರಿತರಿಗೆ ಶೀಘ್ರ ವಾಗಿ ಮತ್ತೆ ಬದುಕು ಕಟ್ಟಿಕೊಳ್ಳಲು ಕೊಡಗಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.

Translate »