ಮೈಸೂರು,ಫೆ.10(ಎಂಟಿವೈ)- ಮೀಸಲಾತಿ ಮಾನವ ಹಕ್ಕಾಗಿ ಮಾರ್ಪಟ್ಟಿರುವ ಕಾಲಘಟ್ಟದಲ್ಲಿ ಸುಪ್ರಿಂ ಕೋರ್ಟ್ ಇತ್ತೀಚೆಗೆ `ಮೀಸಲಾತಿ ಮೂಲಭೂತ ಹಕ್ಕಲ್ಲ’ ಎಂದು ನೀಡಿರುವ ತೀರ್ಪು ಅತೀವ ನೋವನ್ನು ತಂದಿದೆ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ವಿಷಾದಿಸಿದ್ದಾರೆ.
ಮೈಸೂರಿನ ಕಲಾಮಂದಿರದಲ್ಲಿ ತಮ್ಮದೇ ನೇತೃತ್ವದ ಆಯೋಗವು ಸೋಮವಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ಮೈಸೂರು ವಿಭಾಗ ಮಟ್ಟದ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸ ಲಾತಿ ಹೆಚ್ಚಿಸಲು ರಾಜ್ಯ ಸರ್ಕಾರ ತಮ್ಮ ನೇತೃತ್ವದಲ್ಲೇ ಆಯೋಗ ರಚಿಸಿದೆ. ಈ ಹಿನ್ನೆಲೆಯಲ್ಲಿ ಇಂದು 8 ಜಿಲ್ಲೆಗಳನ್ನೊಳಗೊಂಡ ಮೈಸೂರು ವಿಭಾಗದಲ್ಲಿ ಅಹವಾಲು ಸ್ವೀಕಾರ ಹಾಗೂ ಸಮಾಲೋಚನಾ ಸಭೆ ನಡೆಸ ಲಾಗುತ್ತಿದೆ. ಮೀಸಲಾತಿ ಹೆಚ್ಚಿಸುವ ಅನಿವಾರ್ಯತೆ ಸಂಬಂಧ ಅಗತ್ಯ ಸಲಹೆ ನೀಡುವಂತೆ ಕೋರಿದರು.
ಭಾರತದಲ್ಲಿ ಹುಟ್ಟುತ್ತಲೇ ಜಾತಿ ವ್ಯವಸ್ಥೆ ಇದೆ. ಜಾತಿ ಅಸಮಾನತೆ ಬೇರೂರಿದೆ. ದಲಿತನ ಮಗ ದಲಿತನೇ, ರೈತನ ಮಗ ರೈತನೇ ಆಗಬೇಕು ಎಂಬ ಆಧಾರದಲ್ಲಿ ಜಾತಿಗೊಂದು ಕಸುಬು ಮೀಸಲಿಟ್ಟಿರುವ ಪದ್ಧತಿ ಜಾರಿಯಲ್ಲಿದೆ. ದಲಿತರು, ಶೋಷಿತರು ಅಂತರಜಾತಿ ಮದುವೆಯಾಗಲು ಅವಕಾಶವಿಲ್ಲ. ಹೋಗಲಿ ಒಟ್ಟಿಗೆ ಕುಳಿತು ಸಹಪಂಕ್ತಿ ಭೋಜನ ಮಾಡುವಂತೆಯೂ ಇಲ್ಲ. ಸತ್ತರೆ ಒಂದೇ ಕಡೆ ಅಂತ್ಯಕ್ರಿಯೆ ಮಾಡುವ ವ್ಯವ ಸ್ಥೆಯೂ ಇಲ್ಲವಾಗಿದೆ. ಜಾತಿ ವ್ಯವಸ್ಥೆ ವಂಶ ಪಾರಂ ಪರ್ಯವಾಗಿದೆ. ಇದರಿಂದ ರಾಜ ಕೀಯ, ಆರ್ಥಿಕ, ಸಾಂಸ್ಕøತಿಕ ಅಸಮಾನತೆ ಹಾಗೂ ಜಾತಿ ಅಸಮಾನತೆ ತಾಂಡವವಾಡುತ್ತಿದೆ. ಸಮಾಜ ಅನೇಕ ತೊಂದರೆ ಎದುರಿಸುವಂತಾಗಿದೆ. ತಪ್ಪು ಮಾಡದ ಜನ ಶಿಕ್ಷೆ ಅನುಭವಿಸುವಂತಾಗಿದೆ ಎಂದು ವಿಷಾದಿಸಿದರು. ಜಾತಿ ಅಸಮಾನತೆ ವಿರುದ್ಧ ಬುದ್ದ, ಬಸವರ ಕಾಲ, ದಾಸ ಹಾಗೂ ಭಕ್ತಿ ಪಂಥ ಸಂದರ್ಭದಲ್ಲಿ ಧ್ವನಿ ಎತ್ತಿದ್ದರು. ಆ ಎಲ್ಲಾ ಧ್ವನಿಗಳ ಪ್ರತಿನಿಧಿಸುವ ರಾಜಕೀಯ ನೀತಿ ಜಾರಿಯಾಗಲಿಲ್ಲ. ಅದು ಸಮಾಜ, ವ್ಯಕ್ತಿ ಹಾಗೂ ನೈತಿಕ ನೀತಿಯಾಗಿತ್ತು. ಇದನ್ನು ಮನಗಂಡೇ ಡಾ. ಅಂಬೇಡ್ಕರ್ ಅವರು ಮೊದಲ ಬಾರಿಗೆ ಜಾರಿಗೊಳಿಸ ಬಹುದಾದ ನೀತಿಯನ್ನು ಅನುಷ್ಠಾನಕ್ಕೆ ತರಲು ಸಂವಿ ಧಾನದಲ್ಲಿ ಮೀಸಲಾತಿ ವ್ಯವಸ್ಥೆ ಕಲ್ಪಿಸಿದರು ಎಂದರು.
ತೀರ್ಪು ನೋವು ತಂದಿದೆ: ಮೀಸಲಾತಿ ಮಾನವ ಹಕ್ಕಾಗಿ ಮಾರ್ಪಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಇತ್ತೀಚೆಗಷ್ಟೆ ಸುಪ್ರಿಂಕೋರ್ಟ್ ತೀರ್ಪೊಂದನ್ನು ನೀಡಿದ್ದು, ಅದರಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಪ್ರತಿಪಾದಿಸಿದೆ. ಈ ಆದೇಶ ಅತೀವ ನೋವು ತಂದಿದೆ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಮೀಸ ಲಾತಿ ದಯೆಯೂ ಅಲ್ಲ, ದಾನವಲ್ಲ, ಯಾರೋ ಕೊಟ್ಟ ಭಿಕ್ಷೆಯೂ ಅಲ್ಲ. ಸಂವಿಧಾನದಲ್ಲಿ ಕೊಟ್ಟಿರುವ ಮೂಲಭೂತ ಹಕ್ಕು ಎಂದರು.
ಎಲ್ಲರಿಗೂ ಮೀಸಲಾತಿ ಕಲ್ಪಿಸಲು ಸಂಸತ್ ಮುಂದಾಗ ಬೇಕು: ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರೂ ಸೇರಿ ದಂತೆ ದೇಶದ ವಂಚಿತ ಜನರಿಗೆ ಮೀಸಲಾತಿ ಸೌಲಭ್ಯ ದೊರಕಿಸಿಕೊಡಲು ಸಂಸತ್ ಮುಂದಾಗಬೇಕು. ಕೆಲ ವರ್ಷಗಳಿಂದ ಬಾಕಿಯಿರುವ 117ನೇ ತಿದ್ದುಪಡಿ ಜಾರಿ ಗೊಳಿಸಿ, ದೇಶದ ಜನರ ಹಿತಕಾಯಲು ಕ್ರಮ ಕೈಗೊಳ್ಳ ಬೇಕು. ದೇಶಕ್ಕೆ ಬೇಕಾದ ಕಾನೂನು ರಚಿಸುವ ಸಂಸತ್ ಮೀಸಲಾತಿ ಕುರಿತಂತೆಯೂ ನಿರ್ಧಾರ ಕೈಗೊಳ್ಳಬೇಕು. ಕೇವಲ ಮೀಸಲಾತಿ ಕೊಟ್ಟರೆ ಸಾಲದು, ಅದನ್ನು ಜಾರಿಗೊ ಳಿಸುವ ಪ್ರಕ್ರಿಯೆ ಆಗಬೇಕು ಎಂದು ಆಗ್ರಹಿಸಿದರು.
60 ಲಕ್ಷ ಹುದ್ದೆ ಖಾಲಿ: ದೇಶದಲ್ಲಿ 60 ಲಕ್ಷಕ್ಕೂ ಹೆಚ್ಚು ಹಾಗೂ ಕರ್ನಾಟಕದಲ್ಲಿ 2.69 ಲಕ್ಷ ಹುದ್ದೆ ಖಾಲಿ ಬಿದ್ದಿವೆ. ಇವುಗಳನ್ನು ಭರ್ತಿ ಮಾಡದಿರುವುದರಿಂದ ಅಷ್ಟು ಜನ ಮೀಸಲಾತಿಯಿಂದ ಹೊರಗುಳಿದಿದ್ದಾರೆ. 1992ರಿಂದ ಇಲ್ಲಿವರೆಗೆ ಬಂಡವಾಳ ಹಿಂಪಡೆಯುತ್ತಿದ್ದೇವೆ ಎಂದು ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀ ಕರಣಗೊಳಿಸಲಾಗಿದೆ ಇಲ್ಲವೇ ಮುಚ್ಚಲಾಗಿದೆ. ಇದು ಸಹ ಮೀಸಲಾತಿಗೆ ಪೂರಕವಲ್ಲ. ದೇಶದಲ್ಲಿ ಸರ್ಕಾರಿ ವಲಯದಲ್ಲಿ ಶೇ.34ರಷ್ಟು ಹೊರಗುತ್ತಿಗೆ ಕಾರ್ಮಿಕರಿ ದ್ದಾರೆ. ಇಲ್ಲಿಯೂ ಮೀಸಲಾತಿ ಇರುವುದಿಲ್ಲ. ಇದರ ಜೊತೆÉ ಔಟ್ ಸೋರ್ಸ್ ವ್ಯವಸ್ಥೆಯೂ ಇದೆ. ಈ ಎಲ್ಲಾ ಬೆಳವಣಿಗೆ ಮೀಸಲಾತಿ ವ್ಯವಸ್ಥೆಗೆ ಮಾರಕವಾ ಗಿದೆ. ಸಂಸತ್ ಈ ಕುರಿತು ಕ್ರಮ ಕೈಗೊಳ್ಳಬೇಕು. ಸಂಘ ಸಂಸ್ಥೆಗಳು ಸಂಸತ್ ಮೇಲೆ ಒತ್ತಡ ತರುವ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಯಾವ ಜನಾಂಗಕ್ಕೆ ಸಾವಿರಾರು ವರ್ಷದಿಂದ ಭೂಮಿ ಹಕ್ಕು ಕೊಡಲಿಲ್ಲವೋ, ಆಡಳಿತ, ಕಾನೂನು ಮಾಡುವ ಪ್ರಕ್ರಿಯೆ, ಸೈನ್ಯ, ಶಾಲಾ ಪ್ರವೇಶ ಸಿಗಲಿಲ್ಲವೋ, ಇವೆ ಲ್ಲಕ್ಕೂ ಡಾ.ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಅವಕಾಶ ಸಿಕ್ಕಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಸಂವಿಧಾನ ಓದಿದರೆ ಅಂಬೇಡ್ಕರ್ ಅವ ರನ್ನು ಓದಿದಂತಾಗುತ್ತದೆ ಎಂದರು
ಇದಕ್ಕೂ ಮುನ್ನ ಆಯೋಗದ ವಿಷಯ ತಜ್ಞ ಅನಂತನಾಯಕ ಮಾತನಾಡಿ, ಇದುವರೆಗೂ 2011ರ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಗಿದ್ದ ಶೇ.15 ಮೀಸಲಾತಿಯನ್ನು ಶೇ.17ಕ್ಕೆ ಹಾಗೂ ಪಂಗಡ ಕ್ಕಿದ್ದ ಶೇ.3 ಮೀಸಲಾತಿ ಶೇ.7ಕ್ಕೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಆಯೋಗ ರಚಿಸಿದೆ. ಈಗಾಗಲೇ 36 ಸಭೆ ನಡೆಸಲಾಗಿದೆ. ಬೆಂಗಳೂರಿನಲ್ಲಿ 610 ಅಹ ವಾಲು ಸಲ್ಲಿಕೆಯಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101, ಪಂಗಡದ ಪಟ್ಟಿಯಲ್ಲಿ 50 ಸಮು ದಾಯ ಸೇರಿವೆ. ನಮ್ಮ ಆಯೋಗ ಜೂನ್ ಅಂತ್ಯ ದಲ್ಲಿ ಸರ್ಕಾರಕ್ಕೆ ವರದಿ ನೀಡಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಸಂಸದ ಆರ್.ಧ್ರುವನಾರಾ ಯಣ್, ಶಾಸಕ ಅಶ್ವಿನ್‍ಕುಮಾರ್ ಸೇರಿದಂತೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಚಿಕ್ಕ ಮಗಳೂರು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ವಿವಿಧೆಡೆಯಿಂದ ದಲಿತ ಸಂಘಟನೆ, ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಸಮುದಾಯದ ಹೋರಾಟ ಗಾರರು ಅಭಿಪ್ರಾಯ, ಸಲಹೆ ನೀಡಿದರು. ಆಯೋಗದ ಸದಸ್ಯ ಕಾರ್ಯದರ್ಶಿ ಸಾಬೀರ್ ಅಹಮದ್, ಸದಸ್ಯರಾದ ಪ್ರೊ.ಚಂದ್ರ ಶೇಖರ್, ಮುನಿರಾಜು, ಸಮಾಜ ಕಲ್ಯಾಣಾಧಿಕಾರಿ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಖಾಸಗಿ ವಲಯದಲ್ಲೂ ಮೀಸಲಾತಿಗೆ ಶಿಫಾರಸು ಮಾಡಿ ಆರ್.ಧ್ರುವನಾರಾಯಣ್ ಮನವಿ
ಮೈಸೂರು,ಫೆ.10(ಎಂಟಿವೈ)- ಉದ್ದಿಮೆ, ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಭೂಮಿ ಸೇರಿದಂತೆ ಅಗತ್ಯ ಸೌಲಭ್ಯ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ವಲಯ ದಲ್ಲೂ ಮೀಸಲಾತಿ ವ್ಯವಸ್ಥೆ ಜಾರಿಗೆ ಶಿಫಾರಸು ಮಾಡುವಂತೆ ಮಾಜಿ ಸಂಸದ ಆರ್.ಧ್ರುವನಾರಾ ಯಣ್ ಮನವಿ ಮಾಡಿದ್ದಾರೆ.
ಕಲಾಮಂದಿರದಲ್ಲಿ ನ್ಯಾಯಮೂರ್ತಿ ಹೆಚ್.ಎನ್.ನಾಗ ಮೋಹನದಾಸ್ ಆಯೋಗಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಳ ಸಂಬಂಧ ಮನವಿ ಸಲ್ಲಿಸಿ ಮಾತನಾಡಿದ ಅವರು, ದೇಶದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 1200ಕ್ಕೂ ಹೆಚ್ಚು ಜಾತಿ ಇವೆ. ಕರ್ನಾ ಟಕದಲ್ಲಿ 101 ಜಾತಿ ಪರಿಶಿಷ್ಟ ಜಾತಿ ಹಾಗೂ ಪಂಗಡ ದಲ್ಲಿ 50 ಜಾತಿ ಸೇರಿವೆ. ದೇಶದಲ್ಲೇ ಬೇರ್ಯಾವ ರಾಜ್ಯ ಗಳಲ್ಲಿ ಇಷ್ಟು ಸಂಖ್ಯೆಯ ಜಾತಿಗಳು ಪರಿಶಿಷ್ಟ ಜಾತಿ ಹಾಗೂ ಪಂಗಡದ ಪಟ್ಟಿಯಲ್ಲಿ ಸೇರಿಲ್ಲ. 2011ರ ಗಣತಿ ಅನುಸಾರ ರಾಜ್ಯ 6,10,95,297 ಜನಸಂಖ್ಯೆ ಹೊಂದಿದೆ. ಅದರಲ್ಲಿ 1,04,74, 992 ಪರಿಶಿಷ್ಟ ಜಾತಿ, 42,48, 987 ಪರಿಶಿಷ್ಟ ಪಂಗಡದ ಜನರಿದ್ದಾರೆ. ಇತರೆ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣ ಕಡಿಮೆ ಇದೆ. ಕರ್ನಾಟಕ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿರುವ ಕಾರಣ ಬೇರೆ ರಾಜ್ಯಗಳಿಗೆ ಹೋಲಿಸಿ ದರೆ ಇಲ್ಲಿ ದಲಿತರ ಸ್ಥಿತಿ ಸುಧಾರಿಸಿದೆ. ಆದರೂ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಗೆ ಶೇ.15 ರಿಂದ 17ಕ್ಕೆ ಮೀಸಲಾತಿ ಹೆಚ್ಚಿಸಬೇಕು. ಪರಿಶಿಷ್ಟ ಪಂಗಡದ ಜನರಿಗೆ ಶೇ.3ರಷ್ಟಿರುವುದನ್ನು 7ಕ್ಕೆ ಹೆಚ್ಚಳ ಮಾಡಬೇಕೆಂದು ಕೋರಿದರು.
ಎಲ್ಲೆಲ್ಲಿ, ಎಷ್ಟೆಷ್ಟು ಮೀಸಲಾತಿ: ಮಧ್ಯಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಶೇ.16 ಪಂಗಡಕ್ಕೆ ಶೇ.20, ರಾಜ ಸ್ಥಾನದಲ್ಲಿ ಪ.ಜಾ. ಶೇ.16, ಪಂ.ಗೆ ಶೇ.12, ಜಾರ್ಖಂಡ್ ನಲ್ಲಿ ಪ.ಜಾ ಶೇ.11ರಷ್ಟು, ಪಂ.ಗೆ ಶೇ.27, ಛತ್ತೀಸ್‍ಗಡ್‍ನಲ್ಲಿ ಪ.ಜಾ ಶೇ.13, ಪಂ.ಗೆ ಶೇ.32, ಉತ್ತರ ಪ್ರದೇಶದಲ್ಲಿ ಪ.ಜಾ ಶೇ.21, ಪಂ.ಗೆ ಶೇ.02, ಪಶ್ಚಿಮ ಬಂಗಾಳದಲ್ಲಿ ಪ.ಜಾ ಶೇ.22, ಪಂ.ಗೆ ಶೇ.06, ಒರಿಸ್ಸಾದಲ್ಲಿ ಪ.ಜಾತಿಗೆ ಶೇ. 16.25, ಪಂಗಡಕ್ಕೆ ಶೇ.22.5, ತಮಿಳು ನಾಡಿನಲ್ಲಿ ಪ.ಜಾ ಶೇ.18, ಪಂಗಡಕ್ಕೆ ಶೇ.01, ತ್ರಿಪುರದಲ್ಲಿ ಪ.ಜಾ ಶೇ.16, ಪಂಗಡಕ್ಕೆ ಶೇ.31 ಹಾಗೂ ಪಂಜಾಬ್‍ನಲ್ಲಿ ಪ.ಜಾಗೆ ಶೇ.25ರಷ್ಟು ಮೀಸಲಾತಿ ನೀಡಲಾಗಿದೆ. ಪಂಜಾಬ್‍ನಲ್ಲಿ ಪರಿಶಿಷ್ಟ ಪಂಗಡದ ಜನರಿಲ್ಲದ ಕಾರಣ ಮೀಸಲಾತಿ ನೀಡಿಲ್ಲ. ಈ ಅಂಕಿ ಅಂಶವನ್ನು ನಾನು 10 ವರ್ಷ ಸಂಸದನಾಗಿದ್ದ ವೇಳೆ ಸರ್ಕಾರ ಅಧಿಕೃತ ಕಚೇರಿಯಿಂದ ಪಡೆದಿದ್ದೇನೆ ಎಂದರು. ಈ ಅಂಕಿ ಅಂಶವನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಉದ್ಯಮಿಗಳು ರಾಜ್ಯದಲ್ಲಿ ಖಾಸಗಿ ಉದ್ಯಮ ಆರಂಭಿಸಲು ರಾಜ್ಯ ಸರ್ಕಾರ ರಿಯಾಯಿತಿ ದರದಲ್ಲಿ ಭೂಮಿ ನೀಡುತ್ತದೆ. ಉದ್ದಿಮೆಗೆ ಅಗತ್ಯ ವಾದ ಸೌಲಭ್ಯ ವನ್ನೂ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಬದ್ಧವಾಗಿ ಖಾಸಗಿ ಸಂಸ್ಥೆಗಳಲ್ಲೂ ಮೀಸಲಾತಿ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಸರ್ಕಾರಿ ಸೌಲಭ್ಯ ಪಡೆದು ಕೊಳ್ಳುವ ಖಾಸಗಿ ಸಂಸ್ಥೆಗಳು ಮೀಸಲಾತಿ ಸೌಲಭ್ಯ ನೀಡಲೇ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆಯೋ ಗವು ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.