ಅರಣ್ಯಕ್ಕಿನ್ನು ನಿವೃತ್ತ ಸೈನಿಕರ ಶ್ರೀರಕ್ಷೆ
ಮಂಡ್ಯ

ಅರಣ್ಯಕ್ಕಿನ್ನು ನಿವೃತ್ತ ಸೈನಿಕರ ಶ್ರೀರಕ್ಷೆ

March 12, 2020

ಸ್ಪೆಷಲ್ ಟಾಸ್ಕ್ ಟೈಗರ್ ಪ್ರೊಟೆಕ್ಷನ್ ಫೋರ್ಸ್‍ಗೆ ಆನೆ ಬಲ
ಬಂಡೀಪುರಕ್ಕೆ 25 ನಿವೃತ್ತ ಯೋಧರ ನೇಮಕಕ್ಕೆ ಚಿಂತನೆ
ವಿಶೇಷ ಪಡೆಯಾಗಿ ಬಳಕೆಗೆ ನಿರ್ಧಾರ
ಅರಣ್ಯ ಇಲಾಖೆಗೆ ಮೊದಲ ಬಾರಿ ನಿವೃತ್ತ ಸೈನಿಕರ ಸೇವೆ

ಮೈಸೂರು,ಮಾ.11- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಎದೆಗುಂದದೆ ರಕ್ಷಣಾ ಕಾರ್ಯಾಚರಣೆ ನಡೆಸಲು ಶೀಘ್ರದಲ್ಲೇ ಭಾರತೀಯ ಸೇನೆಯ ನಿವೃತ್ತ ಯೋಧರ ಪಡೆ ಕಣಕ್ಕಿಳಿಯಲಿದೆ. ಅದಕ್ಕಾಗಿ 25 ನಿವೃತ್ತ ಸೈನಿಕರನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸದ್ಯ ಸ್ಪೆಷಲ್ ಟಾಸ್ಕ್ ಟೈಗರ್ ಪ್ರೊಟೆಕ್ಷನ್ ಫೋರ್ಸ್(ಎಸ್‍ಟಿಪಿಎಫ್) ಕಾರ್ಯ ನಿರ್ವಹಿಸುತ್ತಿದೆ. ಇದರ ಸಿಬ್ಬಂದಿ ಹುಲಿ ಸಂರಕ್ಷಿತ ಪ್ರದೇಶ ಮಾತ್ರವಲ್ಲದೇ ವಿವಿಧೆಡೆ ಹುಲಿ, ಕಾಡಾನೆ ಸೆರೆ ಕಾರ್ಯಾಚರಣೆ ಯಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಬಡ್ತಿ, ವರ್ಗಾವಣೆಯಿಂದಾಗಿ ಪ್ರಸ್ತುತ ಎಸ್‍ಟಿ ಪಿಎಫ್‍ನಲ್ಲಿ 60 ಹುದ್ದೆಗಳು ಖಾಲಿ ಯಿದ್ದು, ಅರಣ್ಯ ರಕ್ಷಣೆ ಕಾರ್ಯಕ್ಕೆ ಹಿನ್ನಡೆ ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪರಿಣಾಮಕಾರಿ ಕೆಲಸ ನಿರ್ವಹಿಸುವ, ತುರ್ತು ಸಂದರ್ಭ ದಲ್ಲಿ ಎದೆಗುಂದದೇ ಕೆಲಸ ಮಾಡುವ ತಂಡದ ಅವಶ್ಯಕತೆ ಎದ್ದು ಕಾಣುತ್ತಿರು ವುದರಿಂದ ನಿವೃತ್ತ ಯೋಧರ ಸೇವೆ ಅತ್ಯಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸ್ಪೆಷಲ್ ಟಾಸ್ಕ್ ಟೈಗರ್ ಪ್ರೊಟೆಕ್ಷನ್ ಫೋರ್ಸ್‍ನಲ್ಲಿ ಖಾಲಿಯಿರುವ ಹುದ್ದೆಗೆ ಹೊಸದಾಗಿ ನೇಮಕ ಮಾಡಿಕೊಂಡು ಅವರಿಗೆ 3 ತಿಂಗಳು ತರಬೇತಿ ನೀಡಿ ದರೂ ಅವರಿಂದ ಇಲಾಖೆಯು ನಿರೀಕ್ಷಿ ಸಿದ್ದ ಪ್ರಮಾಣದಲ್ಲಿ ಸೇವೆ ಸಲ್ಲಿಸುವುದು ಅಸಾಧ್ಯ. ಇವರು ನಂತರ ಆರ್‍ಎಫ್‍ಓ, ಡಿಆರ್‍ಎಫ್‍ಓ ಹೇಳಿದಂತೆ ಕೆಲಸ ಮಾಡ ಲಷ್ಟೇ ಸೀಮಿತರಾಗುತ್ತಾರೆ. ಸೇನೆಯಷ್ಟು ಕಠಿಣ ತರಬೇತಿಯನ್ನು ಅರಣ್ಯ ಇಲಾಖೆ ಯಿಂದ ನೀಡಲು ಸಾಧ್ಯವಾಗದೇ ಇರುವ ಕಾರಣ ಎಸ್‍ಟಿಪಿಎಫ್‍ಗೆ ನಿವೃತ್ತ ಯೋಧರ ಬಲ ತುಂಬುವುದು ಅವಶ್ಯಕ ಎನಿಸಿದೆ.

ಯಾರಿಗೆ ಅವಕಾಶ: ಭಾರತೀಯ ಸೇನೆಯಲ್ಲಿ ನಿಯಮಾನುಸಾರ 18 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರಿಗಷ್ಟೇ ಆದ್ಯತೆ. ಈಗಾಗಲೇ ನೇಮಕಗೊಂಡಿ ರುವ ಕೆಲ ನಿವೃತ್ತ ಸೈನಿಕರು ಉತ್ತಮವಾಗಿ ದಕ್ಷತೆ ಯಿಂದ ಕೆಲಸ ಮಾಡುತ್ತಿರುವುದರಿಂದ ಅರಣ್ಯ ಇಲಾಖೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡುವ ಟಾಸ್ಕ್ ಫೋರ್ಸ್‍ಗೆ ನಿಯೋಜಿಸಿಕೊಳ್ಳಲಾಗುತ್ತದೆ.

ವಿಶೇಷಪಡೆ-ಚಿಂತನೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಟಿ.ಬಾಲಚಂದ್ರ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಎಸ್‍ಟಿಪಿಎಫ್ ನಲ್ಲಿ 60 ಹುದ್ದೆ ಖಾಲಿಯಿವೆ. ಇದಕ್ಕೆ ನೇಮಕ ಮಾಡಿ ಅವರಿಗೆ ತರಬೇತಿ ನೀಡಿ ಸಜ್ಜುಗೊಳಿಸುವುದು ಕಷ್ಟ. ಎಷ್ಟೇ ಆದರೂ ಸೇನೆ ಮಾದರಿ ತರಬೇತಿ ನೀಡಿ ಸಜ್ಜುಗೊಳಿಸುವುದು ಅಸಾಧ್ಯ. ಹಾಗಾಗಿ ನಿವೃತ್ತ ಯೋಧರ ನೇಮಕ ಚಿಂತನೆ ನಡೆದಿದೆ. 25 ನಿವೃತ್ತ ಸೈನಿಕರ ಟಾಸ್ಕ್ ಫೋರ್ಸ್ ನಮ್ಮಲ್ಲಿದ್ದರೆ ತುರ್ತು ಸಂದರ್ಭ ಬಲು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹಾಗಾಗಿ ಈ ಹೊಸ ಪ್ರಯತ್ನಕ್ಕೆ ಕೈಹಾಕಲಾಗಿದೆ ಎಂದರು.

ಪ್ರಸ್ತುತ ಇರುವ ಪಡೆಗಳು ಎಸ್‍ಟಿಪಿಎಫ್, ಆರ್‍ಎಫ್‍ಓ ಹಾಗೂ ಡಿಆರ್‍ಎಫ್ ನಿಯಂತ್ರಣದಲ್ಲಿರುತ್ತವೆ. ನಿವೃತ್ತ ಯೋಧರ ಹೊಸ ಫೋರ್ಸ್ ಸಿಸಿಎಫ್, ಸಿಎಫ್ ನಿಯಂತ್ರಣದಲ್ಲಿರಲಿವೆ. ಇದರಿಂದ ನಮ್ಮ ಆಜ್ಞೆಯಂತೆ ಆ ತಂಡ ಕೆಲಸ ನಿರ್ವ ಹಿಸಲಿದೆ. ಅಲ್ಲದೆ ತಂಡ ಮೇಲೆ ನಿಯಂತ್ರಣವೂ ಇರುತ್ತದೆ ಎಂದರು.

ಇದನ್ನು ಪ್ರತ್ಯೇಕ ಫೋರ್ಸ್ ಆಗಿ ಪರಿ ಗಣಿಸಲಾಗುತ್ತದೆ. ಕೇವಲ ಪ್ರೊಟೆಕ್ಷನ್‍ಗೆ ಕಾರ್ಯ ವ್ಯಾಪ್ತಿ ಸೀಮಿತಗೊಳಿಸಲಾಗು ತ್ತದೆ. ಆ ತಂಡಕ್ಕೊಂದು ವಾಹನ ನೀಡಿ ದರೆ ತುರ್ತು ಸಂದರ್ಭಗಳಲ್ಲಿ ವೇಗವಾಗಿ ಸ್ಥಳಕ್ಕೆ ಗೋಲ್ಡನ್ ಹವರ್(ಸಮಯ) ನಲ್ಲಿಯೇ ತಲುಪಿ ಕಾರ್ಯನಿರ್ವಹಿಸ ಲಿದೆ. ಈ ಅಂಶಗಳನ್ನು ಮನಗಂಡು ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿವೃತ್ತ ಯೋಧರ ಸೇವೆ ಬಳಸಿಕೊಳ್ಳುವುದು ಸೂಕ್ತ ಎಂದು ನಿರ್ದರಿಸಲಾಗಿದೆ ಎಂದು ತಿಳಿಸಿದರು.

ಎಂ.ಟಿ.ಯೋಗೇಶ್ ಕುಮಾರ್

Translate »