ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯದ ಜಲಾಶಯಗಳ ಪರಿಶೀಲನೆ
ಮೈಸೂರು

ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯದ ಜಲಾಶಯಗಳ ಪರಿಶೀಲನೆ

May 28, 2019

ಮೈಸೂರು: ಸುಪ್ರೀಂಕೋರ್ಟ್ ನಿರ್ದೇಶನದಂತೆ ರಚನೆಯಾಗಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಜೂನ್ 4 ರಿಂದ 24 ರವರೆಗೆ ಕಾವೇರಿ ನದಿ ಪಾತ್ರದ ನಾಲ್ಕು ರಾಜ್ಯಗಳ ಅಣೆಕಟ್ಟೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುವರು.

ಜೂನ್ 4 ಮತ್ತು 5 ರಂದು ಕೃಷ್ಣರಾಜಸಾಗರ ಅಣೆಕಟ್ಟೆ, 7 ರಿಂದ 9 ರವರೆಗೆ ತಮಿಳುನಾಡಿನ ಮೆಟ್ಟೂರು ಜಲಾಶಯ, ಭವಾನಿ ಹಾಗೂ ಅಮರಾವತಿ ಜಲಾಶಯ, ಜೂನ್ 9 ರಿಂದ 10 ರವರೆಗೆ ಪುದುಚೇರಿ ಮತ್ತು ಪಾಂಡಿಚೇರಿ, ಜೂನ್ 17 ರಿಂದ 20 ರವರೆಗೆ ಹೇಮಾವತಿ, ಹಾರಂಗಿ, ಕಬಿನಿ ಜಲಾಶಯ ಹಾಗೂ ಜೂನ್ 24 ರಿಂದ 25ರವರೆಗೆ ಕೇರಳದ ಬನಸುರಸಾಗರ ಜಲಾಶಯಗಳಿಗೆ ಅಧಿಕಾರಿಗಳು ಭೇಟಿ ನೀಡುವರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ)ದ ನಿರ್ದೇಶನದಂತೆ ಕಾವೇರಿ ನದಿ ಪಾತ್ರದ ನಾಲ್ಕೂ ರಾಜ್ಯಗಳ 8 ಅಣೆಕಟ್ಟೆಗಳಲ್ಲಿ ಆನ್‍ಲೈನ್ ಮಾನಿಟರಿಂಗ್ ಸಿಸ್ಟಂ ಅನ್ನು ಜಾರಿಗೆ ತರಲು ಚಿಂತನೆ ನಡೆಸಿರುವುದರಿಂದ ಅಧಿಕಾರಿಗಳ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಟೆಲಿಮೆಟ್ರಿ ಮಾದರಿ ಡೇಟಾ ಅಕ್ಸಿಸಿಷನ್ ಮತ್ತು ಟ್ರಾನ್ಸ್‍ಮಿಷನ್ ವ್ಯವಸ್ಥೆ ಜಾರಿಗೆ ಮುಂದಾಗಿರುವುದರಿಂದ ಈ ಬಗ್ಗೆ ನವದೆಹಲಿಯಲ್ಲಿ 2018ರ ಡಿಸೆಂಬರ್ 12 ರಂದು ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆದು ಸುದೀರ್ಘ ಚರ್ಚೆ ನಡೆಸಲಾಗಿತ್ತು.

ಅದಕ್ಕಾಗಿ ಕಾವೇರಿ ಜಲಾನಯನ ವ್ಯಾಪ್ತಿಯ ಅಣೆಕಟ್ಟೆಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ 6 ತಿಂಗಳೊಳಗಾಗಿ ವರದಿ ನೀಡುವಂತೆಯೂ ನಿರ್ದೇಶಿಸಲಾಗಿತ್ತು. ಅದರಂತೆ ಈ 8 ಅಣೆಕಟ್ಟೆಗಳಲ್ಲಿ ನೀರಿನ ಮಟ್ಟ, ಸಾಮಥ್ರ್ಯ, ನೀರಿನ ಒಳ ಹಾಗೂ ಹೊರ ಅರಿವು, ನೀರು ಸಂಗ್ರಹ ಸಾಮಥ್ರ್ಯ ಮುಂತಾದ ವಿಷಯಗಳ ಕುರಿತಂತೆ ಅಧಿಕಾರಿಗಳು ಭೇಟಿ ನೀಡಿ ಅಧ್ಯಯನ ನಡೆಸುವರು. ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಕಾವೇರಿ ನೀರಾವರಿ ನಿಗಮ ನಿಯಮಿತದ ಸೂಪರಿಂಟೆಂಡಿಂಗ್ ಇಂಜಿನಿಯರ್ ಹೆಚ್.ಸಿ. ರಮೇಂದ್ರ ಅವರು, ಸಮಿತಿ ಸದಸ್ಯರು ಭೇಟಿ ನೀಡುತ್ತಿರುವುದು, ಡ್ಯಾಂಗಳ ಸಾಮಥ್ರ್ಯ ಹೆಚ್ಚಿಸುವುದು, ನೀರು ಪೋಲಾಗುವು ದನ್ನು ತಪ್ಪಿಸುವುದು ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿ ಸಲು ಪರಸ್ಪರ ಸಲಹೆ, ಮಾರ್ಗದರ್ಶನ ವಿನಿಮಯ ಮಾಡಿ ಕೊಳ್ಳುವ ಉದ್ದೇಶವೇ ಹೊರತು, ನೀರು ಹಂಚಿಕೆಗೆ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಜಲಾಶಯದಲ್ಲಿ ಮೈಸೂರು, ಬೆಂಗಳೂರು ನಗರಗಳಿಗೆ ಕುಡಿಯುವ ನೀರು ಪೂರೈಸುವಷ್ಟು ಪ್ರಮಾಣದ ನೀರು ಲಭ್ಯವಿರುವುದರಿಂದ ಈ ಬಾರಿ ಕುಡಿಯುವ ನೀರಿಗೆ ಕೊರತೆ ಉಂಟಾಗುವುದಿಲ್ಲ ಎಂದೂ ರಮೇಂದ್ರ ಅಭಯ ನೀಡಿದರು.

Translate »