ಮೈಸೂರಲ್ಲಿ ಗಗನಕ್ಕೇರುತ್ತಿರುವ ಅಕ್ಕಿ ಬೆಲೆ
ಮೈಸೂರು

ಮೈಸೂರಲ್ಲಿ ಗಗನಕ್ಕೇರುತ್ತಿರುವ ಅಕ್ಕಿ ಬೆಲೆ

June 14, 2019

ಮೈಸೂರು: ಕಳೆದ ಒಂದು ತಿಂಗಳಿಂದ ಅಕ್ಕಿ ದರ ಏರಿಕೆಯಾಗುತ್ತಲೇ ಇದ್ದು, ಪ್ರಸ್ತುತ ಕೆಜಿ ಅಕ್ಕಿಗೆ 4 ರೂ.ನಿಂದ 13 ರೂ.ವರೆಗೆ ಹೆಚ್ಚಳವಾಗಿದೆ. ಮೈಸೂರು ಹಾಗೂ ಬೆಂಗಳೂರು ಭಾಗದಲ್ಲಿ ಹೆಚ್ಚು ಬಳಕೆಯಲ್ಲಿದೆ ಎನ್ನಲಾಗಿರುವ ಸೋನಾ ಮಸೂರಿ ರಾ ಅಕ್ಕಿ 44 ರೂ.ನಿಂದ 57 ರೂ.ಗೆ (ಕೆಜಿಗೆ) ಜಿಗಿದಿದ್ದರೆ, ಕೋಲಂ ಅಕ್ಕಿ 64 ರೂ.ನಿಂದ 72 ರೂ.ಗೆ ಏರಿಕೆ ಕಂಡಿದೆ.

ನೀರಿನ ಅಭಾವದಿಂದ ಉತ್ಪಾದನೆಯಲ್ಲಿ ಕುಸಿತವಾಗಿರುವ ಹಿನ್ನೆಲೆ ಸೇರಿದಂತೆ ಅನೇಕ ಕಾರಣಗಳಿಂದ ಅಕ್ಕಿ ಬೆಲೆ ಗಗನಕ್ಕೇರುತ್ತಿದೆ ಎನ್ನ ಲಾಗಿದೆ. ಜೊತೆಗೆ ಈ ಬೇಸಿಗೆಯಲ್ಲಿ ಬರಬೇಕಿದ್ದ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳ ಲಾಗುತ್ತಿದೆ. ಇದಕ್ಕಿಂತಲೂ ಮುಖ್ಯವಾಗಿ ತಮಿಳು ನಾಡಿನಲ್ಲಿ ಭತ್ತದ ಉತ್ಪಾದನೆ ಕುಸಿತ ಕಂಡಿದ್ದು, ಅಲ್ಲಿಂದ ರಾಜ್ಯಕ್ಕೆ ಭತ್ತ ರಫ್ತು ಮಾಡುವುದಕ್ಕಿಂತ ಅಲ್ಲಿಗೆ ಆಮದು ಹೆಚ್ಚಳವಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಸಹ ವಿಶ್ಲೇಷಿಸಲಾಗಿದೆ.

ಮೈಸೂರಿನ ಹಳೆ ಸಂತೆಪೇಟೆ ಶಿವಣ್ಣ ಭಂಡಾರ್ ಅಕ್ಕಿ ಮಾರಾಟ ಮಳಿಗೆಯ ಮಾಲೀಕ ವಿಷ್ಣು ಅವರ ಪ್ರಕಾರ ಕಳೆದ 25 ದಿನಗಳಲ್ಲಿ ಅಕ್ಕಿ ಬೆಲೆಯಲ್ಲಿ ತೀವ್ರ ಹೆಚ್ಚಳವಾಗುತ್ತಿದೆ. ತಮಿಳುನಾಡಿನಲ್ಲಿ ಭತ್ತದ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಹೀಗಾಗಿ ಅಲ್ಲಿಂದ ರಾಜ್ಯಕ್ಕೆ ಆಮದು ಆಗುವುದಕ್ಕಿಂತ ರಾಜ್ಯ ದಿಂದ ರಫ್ತು ಹೆಚ್ಚಾಗಿದೆ. ಸಾಮಾನ್ಯವಾಗಿ ಹೆಚ್ಚು ಮಾರಾಟವಾಗುವ ಸೋನಾ ಮಸೂರಿ ಸ್ಟೀಮ್ ಅಕ್ಕಿ 36 ರೂ.ನಿಂದ 38ಕ್ಕೆ ಜಿಗಿದಿದೆ. ಸೋನಾ ಮಸೂರಿ `ರಾ’ ಅಕ್ಕಿ 44 ರೂ.ನಿಂದ 57 ರೂ.ಗೆ ಏರಿಕೆ ಕಂಡಿದೆ ಎನ್ನುತ್ತಾರೆ ವಿಷ್ಣು.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನಿಂದಲೂ ಹೆಚ್ಚು ಅಕ್ಕಿ ತಮಿಳುನಾಡಿಗೆ ರಫ್ತು ಆಗುತ್ತಿದೆ. ಹೀಗಾಗಿ ಅಲ್ಲಿಂದ ಇಲ್ಲಿಗೆ ಬರಬೇಕಿದ್ದ ಅಕ್ಕಿ ಪ್ರಮಾಣ ದಲ್ಲಿ ಇಳಿಕೆ ಉಂಟಾಗಿದೆ ಎನ್ನುವ ವಿಷ್ಣು, ನೆಲ್ಲೂರು ಸ್ಟೀಮ್ ಅಕ್ಕಿ
ಕ್ವಿಂಟಲ್‍ಗೆ 3,300 ಇತ್ತು. ಇದೀಗ 3,600ಕ್ಕೆ ಏರಿಕೆ ಕಂಡಿದೆ. ಕಾವೇರಿ ಸ್ಟೀಮ್ 3400 ರೂ.ನಿಂದ 3,900 ರೂ.ಗೆ, ಸೋನಾ ಮಸೂರಿ ರಾ ಅಕ್ಕಿ 4,400 ರೂ.ನಿಂದ 5,700 ರೂ.ಗೆ, ಕೋಲಂ ಅಕ್ಕಿ 6,400 ರೂ.ನಿಂದ 7,200 ರೂ.ಗೆ ಹೆಚ್ಚಳಗೊಂಡಿದೆ ಎಂದು ಮಾಹಿತಿ ನೀಡಿದರು. ಅದೇ ರೀತಿ ಇದೇ ಭಾಗದ ಮತ್ತೊಂದು ಮಳಿಗೆ ಗೂಳಿ ಟ್ರೇಡರ್ಸ್‍ನ ವ್ಯವಸ್ಥಾಪಕ ಮಂಜುನಾಥ್, ತಿಂಗಳಿಂದೀಚೆಗೆ ಅಕ್ಕಿ ಬೆಲೆಯಲ್ಲಿ ಕ್ವಿಂಟಲ್‍ಗೆ 400 ರೂ.ನಿಂದ 500 ರೂ.ವರೆಗೆ ಏರಿಕೆ ಆಗಿದೆ. ಸಕಾಲದಲ್ಲಿ ಮಳೆಯಾಗದ ಕಾರಣ ಬೆಲೆ ಹೆಚ್ಚಳವಾಗಿದೆ ಎನ್ನುತ್ತಾರೆ ಅವರು. ಇಲ್ಲಿನ ಅಮ್ಮಾಜಿ ಟ್ರೇಡರ್ಸ್ ಮಳಿಗೆಯ ನಾಗರಾಜು ಸಹ ಅಕ್ಕಿ ಬೆಲೆಯ ಏರಿಕೆ ಆಗುತ್ತಲೇ ಇದೆ ಎಂದು ತಿಳಿಸಿದರಲ್ಲದೆ, ಬಸವೇಶ್ವರ ಅಕ್ಕಿ 5,200 ರೂ. (ಕ್ವಿಂಟಲ್‍ಗೆ), ಎಂಆರ್ ಗೋಲ್ಡ್ 5,200 ರೂ. ಹಾಗೂ ಮೈಸೂರು ಪ್ಯಾಲೇಸ್ ಅಕ್ಕಿ 3,440 ರೂ. ಇದೆ ಎಂದು ಅಕ್ಕಿ ದರದ ಪಟ್ಟಿ ಬಗ್ಗೆ ವಿವರಿಸಿದರು. ಮೈಸೂರು ಬಂಡಿಪಾಳ್ಯದ ಎಪಿಎಂಸಿ ಸಗಟು ವ್ಯಾಪಾರಿ ಎಂ.ಅನಿಲ್‍ರಾಜ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಬೇಸಿಗೆ ಬೆಳೆ ಮುಗಿದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದೆ. ಮುಂದಿನ ನವೆಂಬರ್ ಹಾಗೂ ಡಿಸೆಂಬರ್‍ವರೆಗೂ ಬೆಲೆಯಲ್ಲಿ ಹೆಚ್ಚಳ ಇರಬಹುದು. ಮೈಸೂರು ಭಾಗಕ್ಕೆ ಸಿರುಗುಪ್ಪ ಹಾಗೂ ರಾಯಚೂರು ಸೇರಿದಂತೆ ಇನ್ನಿತರ ಕಡೆಗಳಿಂದ ಸಣ್ಣ ಅಕ್ಕಿ ಬರುತ್ತದೆ. ಮೈಸೂರು ಭಾಗದ ಕೆಆರ್ ನಗರ, ಟಿ.ನರಸೀಪುರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಬೆಳೆದ ಜ್ಯೋತಿ, ಜಯ ತಳಿ ಸೇರಿದಂತೆ ಮತ್ತಿತರ ತಳಿಯ ಅಕ್ಕಿ ಶೇ.70ರಷ್ಟು ಕೇರಳ ರಾಜ್ಯಕ್ಕೆ ರಫ್ತು ಆಗುತ್ತದೆ. ಅಕ್ಕಿ ಹಳೆಯಾದಾದರೆ ಬೆಲೆ ಹೆಚ್ಚಿರುವುದು ಸಾಮಾನ್ಯ. ಕೋಲಂ ತಳಿಯ ಅಕ್ಕಿಗೆ ಹೆಚ್ಚು ಬೇಡಿಕೆ ಇದ್ದು, ಇದು ಮಹಾರಾಷ್ಟ್ರದಲ್ಲಿ ಬೆಳೆಯುವ ತಳಿಯಾಗಿದೆ ಎಂದು ತಿಳಿಸಿದರು.

ಮೈಸೂರು ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ)ಯಲ್ಲಿ ಈಗಿರುವುದು ಬಳ್ಳಾರಿ, ರಾಯಚೂರು ಜಿಲ್ಲೆಗಳಿಂದ ಬಂದಿರುವ ಅಕ್ಕಿಯಾಗಿದೆ. ಇದನ್ನು ನಮ್ಮ ಟ್ರೇಡರ್ಸ್ ಆಮದು ಮಾಡಿಕೊಂಡು ಮಾರಾಟ ಮಾಡುತ್ತಾರೆ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಕೆಜಿ 40 ರೂ. ಇದ್ದರೆ ಇಲ್ಲಿ ನಮ್ಮ ಟ್ರೇಡರ್ಸ್ ಲಾಭದ ದೃಷ್ಟಿಯಿಂದ 42 ರೂ.ಗೆ ಮಾರಾಟ ಮಾಡುತ್ತಾರೆ. -ಟಿ.ಸಿ.ಗಿರೀಶ್, ಮೈಸೂರು ಎಪಿಎಂಸಿ ಕಾರ್ಯದರ್ಶಿ.

– ಎಂ.ಬಿ.ಪವನ್‍ಮೂರ್ತಿ