ಚಾಮುಂಡಿಬೆಟ್ಟದ ವಾಹನ ದಟ್ಟಣೆ ನಿಯಂತ್ರಣಕ್ಕೆ ರೋಪ್ ವೇ ಪರಿಹಾರವಾಗಬಹುದು…
ಮೈಸೂರು

ಚಾಮುಂಡಿಬೆಟ್ಟದ ವಾಹನ ದಟ್ಟಣೆ ನಿಯಂತ್ರಣಕ್ಕೆ ರೋಪ್ ವೇ ಪರಿಹಾರವಾಗಬಹುದು…

October 25, 2019

ಮೈಸೂರು, ಅ.24(ಆರ್‍ಕೆ)- ಚಾಮುಂಡಿಬೆಟ್ಟದ ವಾಹನ ಸಂಚಾರ ದಟ್ಟಣೆ ತಗ್ಗಿಸಲು ರೋಪ್ ವೇ ಪರಿಹಾರವಾಗ ಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ. ಚಾಮುಂಡಿ ಬೆಟ್ಟದ ನಂದಿ ಪ್ರತಿಮೆಗೆ ಹೋಗುವ ರಸ್ತೆಯಲ್ಲಿ ಮಳೆಯಿಂದಾಗಿ ಭೂಕುಸಿತವಾಗಿರುವ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರ ರೊಂದಿಗೆ ಮಾತನಾಡುತ್ತಿದ್ದರು. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ಮತ್ತು ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚು ತ್ತಿರುವುದರಿಂದ ಬೆಟ್ಟದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಈಗಾಗಲೇ ವಾಹನ ನಿಲುಗಡೆ ಸಮಸ್ಯೆ ಉಂಟಾದ ಕಾರಣ 600 ವಾಹನ ನಿಲುಗಡೆಗೆ ಪಾರ್ಕಿಂಗ್ ಬಹುಮಹಡಿ ಕಟ್ಟಡ ನಿರ್ಮಿಸಲಾಗಿದೆ ಎಂದರು.

ಪಳನಿ ಮತ್ತು ಹರಿದ್ವಾರಗಳಿಗೆ ನಾನು ಭೇಟಿ ನೀಡಿದ್ದೇನೆ. ಅಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ರೋಪ್ ವೇಗಳನ್ನು ಸುರಕ್ಷಿತವಾಗಿ ನಿರ್ಮಾಣ ಮಾಡಲಾಗಿದೆ. ಅಲ್ಲಿ ವಾಹನದ ಸಂಚಾರ ಒತ್ತಡವಿರುವುದಿಲ್ಲ ಎಂದು ಅವರು ನುಡಿದರು. ಆದರೆ ಇಲ್ಲಿ ರೋಪ್ ವೇ ನಿರ್ಮಿಸುತ್ತೇವೆಂದು ನಾನು ಭರವಸೆ ನೀಡಲಾರೆ. ಚಾಮುಂಡಿ ಬೆಟ್ಟದಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ಒತ್ತಡ ನಿಯಂತ್ರಣಕ್ಕೆ ಅದು ಪರಿಹಾರವಾಗಬಹು ದೇನೋ? ನಾವು ತಂತ್ರಜ್ಞಾನ ಬಳಕೆಯಲ್ಲಿ ಹಿಂದೆ ಬಿದ್ದಿದ್ದೇವೆ. ಆ ಯೋಜನೆ ದುಬಾರಿ ವೆಚ್ಚವಾಗುವುದಂತೂ ನಿಜ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಂದಿ ರಸ್ತೆಯಲ್ಲಿ ಉಂಟಾಗಿರುವ ಭೂಕುಸಿತ ಸ್ಥಳದಲ್ಲಿ ಎರಡೂ ಕಡೆ ಮೆಸ್ ಹಾಕಿ ಮಡಿಕೇರಿ ಇತರೆಡೆ ಮಾಡಿರುವ ರೀತಿ ಗೇಬಿಯನ್ ಮಾದರಿಯ ಕಾಂಕ್ರಿಟ್ ತಡೆಗೋಡೆ ನಿರ್ಮಿಸಿ ಸ್ವಲ್ಪ ದುಬಾರಿಯಾದರೂ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದು ಸೋಮಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ತ್ವರಿತಗತಿಯಲ್ಲಿ ಕೆಲಸ ಮಾಡಿ 15 ದಿನದೊಳಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ಅದೇ ರೀತಿ ಬೆಟ್ಟದ ರಸ್ತೆಯಲ್ಲಿ ಇಂತಹ ಭೂ ಕುಸಿತವಾಗುವ ಸಂಭವವಿರುವ ಸ್ಥಳಗಳಲ್ಲೂ ಮುಂಜಾಗೃತಾ ಕ್ರಮವಾಗಿ ತಡೆಗೋಡೆಗಳನ್ನು ನಿರ್ಮಿಸಿ ಮುಂದಾಗ ಬಹುದಾದ ಅಪಾಯ ತಪ್ಪಿಸಿ ಎಂದೂ ಅವರು ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡಿಂಗ್ ಇಂಜಿನಿಯರ್ ವೀರಭದ್ರಪ್ಪ ಅವರಿಗೆ ತಿಳಿಸಿದರು.

Translate »