ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿ ಅಧಿಕಾರಕ್ಕೆ
ಮೈಸೂರು

ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿ ಅಧಿಕಾರಕ್ಕೆ

October 25, 2019

ನವದೆಹಲಿ, ಅ.24- ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭಾ ಚುನಾ ವಣಾ ಫಲಿತಾಂಶ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳೆಲ್ಲವನ್ನೂ ಸುಳ್ಳಾಗಿಸಿವೆ.

ಮಹಾರಾಷ್ಟ್ರದ ಮತದಾರ ಬಿಜೆಪಿ ಮತ್ತು ಶಿವಸೇನೆ ಶಕ್ತಿಯನ್ನು ಕುಗ್ಗಿಸಿ ದ್ದರೂ ಆಡಳಿತ ನಡೆಸಲು ಮೈತ್ರಿಕೂಟಕ್ಕೆ ಮತ್ತೊಂದು ಅವಕಾಶ ನೀಡಿದ್ದಾನೆ. ಆದರೆ, ಹರಿಯಾಣದ ಜಾಟ್ ಸಮುದಾಯದವರು ಕೊಟ್ಟ ಏಟಿಗೆ ಬಿಜೆಪಿ ಅಕ್ಷರಶಃ ಕಳೆಗುಂದಿದೆ. ಅದೇ ವೇಳೆ ಕಾಂಗ್ರೆಸ್ ಸಾಮಥ್ರ್ಯ ಹೆಚ್ಚಿಸಿಕೊಂಡಿದೆ. ಜತೆಗೆ ಹೊಸ ಪಕ್ಷವೊಂದು ಉದಯವಾಗಿದೆ. ಆದರೆ, ಹರಿಯಾಣದಲ್ಲಿ ಯಾವುದೇ ಪಕ್ಷಕ್ಕೂ ಸರ್ಕಾರ ರಚಿಸಲು ಅಗತ್ಯವಾದಷ್ಟು ಬಹುಮತ ಲಭಿಸಿಲ್ಲ. ಕೃಷಿ ಪ್ರಧಾನ ರಾಜ್ಯದಲ್ಲೀಗ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಇಲ್ಲಿಯೂ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದೆ. ಅದಕ್ಕಾಗಿ ಬಿಜೆಪಿ ಮತ್ತು ಪಕ್ಷೇತರ ಬೆಂಬಲ ಮೊರೆ ಹೋಗಿದೆ.

ಮಹಾರಾಷ್ಟ್ರ: 288 ಸದಸ್ಯ ಬಲದ ಮಹಾ ರಾಷ್ಟ್ರದಲ್ಲಿ 286 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಮತ್ತು ಶಿವಸೇನೆ 161 ಸ್ಥಾನ ಗಳನ್ನು ಗೆಲ್ಲುವ ಮೂಲಕ ಮರಳಿ ಅಧಿಕಾರ ಪಡೆದುಕೊಂಡಿವೆ. ಕಾಂಗ್ರೆಸ್ ಮತ್ತು ಎನ್‍ಸಿಪಿ 97 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ. ತೆಲಂಗಾಣದ ಸಂಸದ ಓವೈಸಿ ಅವರ ಎಐಎಂಐಎಂ ಅಚ್ಚರಿ ಎಂಬಂತೆ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರರು ಸೇರಿದಂತೆ ಇತರರು 26 ಕ್ಷೇತ್ರಗಳಲ್ಲಿ
ಗೆಲುವು ಕಂಡಿದ್ದಾರೆ. ಒಟ್ಟು 110 ಕ್ಷೇತ್ರಗಳಲ್ಲಿ ಸ್ಥರ್ಧಿಸಿದ್ದ ರಾಜ್ ಠಾಕ್ರೆ ಅವರ ನವನಿರ್ಮಾಣ ವೇದಿಕೆ ಕೇವಲ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿ, ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ.

ಹರಿಯಾಣ: ಒಟ್ಟು 90 ಸ್ಥಾನಗಳ ಹರಿಯಾಣದಲ್ಲಿ ಬಿಜೆಪಿ 40 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿದೆ. ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿರುವ ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದಿದೆ. ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‍ಎಲ್‍ಡಿ) 1, ಬಂಡಾಯಗಾರರು, ಪಕ್ಷೇತರರು 8 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದಾರೆ. ಹೊಸ ರಾಜಕೀಯ ಪಕ್ಷವಾಗಿ ಅವತರಿಸಿದ ಜನ ನಾಯಕ ಜನತಾ ಪಾರ್ಟಿ (ಜೆಜೆಪಿ) ಮಾಜಿ ಪ್ರಧಾನಿ ದೇವಿಲಾಲ್ ಅವರ ಮರಿಮೊಮ್ಮಗ ದುಷ್ಯಂತ ಚೌತಾಲ ಅವರ ನೇತೃತ್ವದಲ್ಲಿ ಅಚ್ಚರಿದಾಯಕವಾಗಿ 10 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಆ ಮೂಲಕ ಅತಂತ್ರ ಫಲಿತಾಂಶ ನೀಡಿರುವ ಹರಿಯಾಣ ವಿಧಾನಸಭೆಯಲ್ಲಿ ದುಷ್ಯಂತ್ ಚೌತಾಲ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ.

ಸಿಎಂ ಗಾದಿಗೆ ಜಟಾಪಟಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಅಗತ್ಯವಾದ 145 ಶಾಸಕ ಬಲಕ್ಕಿಂತ ತುಸು ಹೆಚ್ಚೇ (161) ಸ್ಥಾನಗಳನ್ನು ಗೆದ್ದಿದ್ದರೂ ಬಿಜೆಪಿ ಮತ್ತು ಶಿವಸೇನೆ ಮಧ್ಯೆ, `ಮುಖ್ಯಮಂತ್ರಿ’ ಹುದ್ದೆಗಾಗಿ ಜಟಾಪಟಿ ನಡೆದಿದೆ. `ಕೇಂದ್ರದಲ್ಲಿ ನರೇಂದ್ರ, ಮಹಾರಾಷ್ಟ್ರದಲ್ಲಿ ದೇವೇಂದ್ರ’ ಎಂದೇ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಹಿರಿ ತಲೆಗಳೆಲ್ಲಾ ಹೇಳುತ್ತಲೇ ಇದ್ದರೂ, ದೇವೇಂದ್ರ ಪಡ್ನವೀಸ್ ಅವರೇ ಮುಂದಿನ ಮುಖ್ಯಮಂತ್ರಿ ಎಂದೇ ಚುನಾವಣೆ ವೇಳೆ ಬಿಂಬಿಸಿದ್ದರೂ, ಶಿವಸೇನೆ ಮಾತ್ರ ಬಾಳಾ ಠಾಕ್ರೆ ಅವರ ಮೊಮ್ಮಗ ಆದಿತ್ಯ ಠಾಕ್ರೆಯೇ ಮುಂದಿನ ಸಿಎಂ ಎನ್ನುತ್ತಲೇ ಬಂದಿತ್ತು. ಅದೇ ಲೆಕ್ಕದಲ್ಲಿ ಶಿವಸೇನೆ 50:50 ಸೂತ್ರವನ್ನೇ ಬಲವಾಗಿ ಹಿಡಿದುಕೊಂಡಿದೆ. ಹಾಗಾಗಿ, ಬಿಜೆಪಿಯ ವರಿಷ್ಟರಿಗೆ ಮರಾಠರ ನಾಡಿನಲ್ಲಿ ಸರ್ಕಾರ ರಚನೆ ಸರಾಗ ಎನಿಸಿದರೂ ಶಿವಸೇನೆಯ ಹಠಮಾರಿತನ ಕಗ್ಗಂಟಾಗಿ ಪರಿಣಮಿಸಿದೆ.

ತಲೆಕೆಳಗಾದ ಲೆಕ್ಕಾಚಾರ: ಎರಡೂ ರಾಜ್ಯಗಳಲ್ಲಿ ಕಳೆದ 5 ವರ್ಷಗಳಿಂದ ನಿರಾತಂಕವಾಗಿ ಆಡಳಿತ ನಡೆಸಿದ್ದ ಬಿಜೆಪಿ, ಭಾರೀ ಹುಮ್ಮಸ್ಸಿನಲ್ಲಿತ್ತು. ಈ ಬಾರಿ 2014ರ ಚುನಾವಣೆಗಿಂತ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿತ್ತು. ಮತ್ತೆ ಅಧಿಕಾರ ತನ್ನದೇ ಎಂಬ ಅತೀವ ವಿಶ್ವಾಸದಲ್ಲಿತ್ತು. ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು, ಸರ್ಜಿಕಲ್ ಸ್ಟ್ರೈಕ್, ತ್ರಿವಳಿ ತಲಾಖ್ ಮೊದಲಾದ ಅಂಶಗಳು ತನ್ನ ಕೈಹಿಡಿಯಲಿವೆ. ಜತೆಗೆ ಕೊನೆ ಕ್ಷಣದಲ್ಲಿ ಚಾಲ್ತಿಗೆ ಬಂದ ವೀರ್ ಸಾರ್ವಕರ್‍ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ವಿಚಾರ ರಾಷ್ಟ್ರವಾದಿ ಮರಾಠರ ಮನಗೆಲ್ಲಲಿದೆ ಎಂದೇ ಭಾವಿಸಿತ್ತು. ಚುನಾವಣೋತ್ತರ ಸಮೀಕ್ಷೆಗಳೂ ಇದೇ ಅಂಶವನ್ನೇ ಎತ್ತಿ ತೋರಿದ್ದವು. ಬಿಜೆಪಿ-ಶಿವಸೇನೆ ಮೈತ್ರಿಕೂಟ 230 ಸ್ಥಾನಗಳವರೆಗೂ ಗೆಲ್ಲಲಿದೆ ಎಂದೇ ಭವಿಷ್ಯ ನುಡಿದಿದ್ದವು. ಆದರೆ, ಮಹಾರಾಷ್ಟ್ರದ ಮತದಾರನ ಮನದಲ್ಲಿ ಬೇರೆಯದೇ ಚಿಂತನೆ ಇತ್ತು ಎಂಬುದು ಫಲಿತಾಂಶ ಹೊರಬಿದ್ದ ಬಳಿಕವಷ್ಟೇ ಎಲ್ಲರಿಗೂ ಮನವರಿಕೆಯಾಗಿದೆ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಿಂದ ಬಂದವರನ್ನೆಲ್ಲಾ ತನ್ನ ತೆಕ್ಕೆಗೆ ಸೇರಿಸಿಕೊಂಡು ಟಿಕೆಟ್ ನೀಡಿದ ಬಿಜೆಪಿ ತಂತ್ರ ಅದಕ್ಕೇ ತಿರುಗುಮುರುಗಾಗಿದೆ. ಪಕ್ಷಾಂತರ ಮಾಡಿದವರಲ್ಲಿ ಬಹುತೇಕರು ಸೋಲು ಕಂಡಿದ್ದಾರೆ.

ಸರ್ಕಾರದ ರಚನೆಗೆ ಅಗತ್ಯವಾದಷ್ಟು ಸ್ಥಾನಗಳನ್ನಷ್ಟೇ ಕೇಸರಿ ಮಿತ್ರರಿಗೆ ನೀಡಿರುವ ಮಹಾರಾಷ್ಟ್ರ ಮತದಾರ, ಬಿಜೆಪಿ-ಶಿವಸೇನೆಗೆ ಎಚ್ಚರಿಕೆಯನ್ನೂ ನೀಡಿದ್ದಾನೆ. ಉತ್ತಮ ಆಡಳಿತ, ಅಭಿವೃದ್ಧಿಯ ವಿಚಾರವೇ ತನಗೆ ಮುಖ್ಯ ಎಂಬುದನ್ನು ಒತ್ತಿ ಹೇಳಿದ್ದಾನೆ.

ಮತದಾರನ ತಿರುಗೇಟು: ಹರಿಯಾಣದಲ್ಲಂತೂ ಮನೋಹರ ಲಾಲ್ ಖಟ್ಟರ್ ಅವರ ಭ್ರಷ್ಟಾಚಾರ ರಹಿತ ಆಡಳಿತ ಈ ಬಾರಿ 70 ಸ್ಥಾನಗಳನ್ನು ಗಳಿಸಿಕೊಡಲಿದೆ ಎಂದೇ ಅತಿಯಾದ ಆತ್ಮವಿಶ್ವಾಸದಲ್ಲಿತ್ತು. ಆದರೆ, ಪಕ್ಷ ನಿಷ್ಟರನ್ನು ಕೈಬಿಟ್ಟು, ಪಕ್ಷಾಂತರಿಗಳಿಗೆ ಮಣೆ ಹಾಕಿದ ತಪ್ಪಿಗೆ ಹರಿಯಾಣ ಮತದಾರ ಬಿಜೆಪಿಗೆ ತಕ್ಕ ಪಾಠವನ್ನೇ ಕಲಿಸಿದ್ದಾನೆ. ಚುನಾವಣಾ ಪ್ರಚಾರ ಕಾಲದಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಹಿರಿಯ ತಲೆಯಾಳುಗಳ ಗೈರು ಹಾಜರಿಯ ಮಧ್ಯೆ ಮಹಾರಾಷ್ಟ್ರದಲ್ಲಿ ನಲುಗಿದ ಕಾಂಗ್ರೆಸ್, ಸದ್ಯ 2014ರಲ್ಲಿ ಗೆದ್ದಿದ್ದಷ್ಟೇ ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಆದರೆ, ಹರಿಯಾಣದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡು ಆಡಳಿತಾರೂಢ ಬಿಜೆಪಿಗೆ ಬಿರುಸಿನ ಪೈಪೋಟಿ ನೀಡಿದೆ.

ಬೆಳಿಗ್ಗೆ ಖುಷಿ ಬೇಗ ಕರಗಿತು: ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಯ ಮತಗಳ ಎಣಿಕೆ ಗುರುವಾರ ಬೆಳಿಗ್ಗೆ ಆರಂಭಗೊಂಡಾಗ ಹರ್ಷದಿಂದ ಇದ್ದ ಬಿಜೆಪಿ ಪಾಳಯ ಸಮಯ ಕಳೆದಂತೆ ಮಂಕಾಯಿತು. ಬದಲಾಗಿ ಕಾಂಗ್ರೆಸ್ ಪಾಳಯದಲ್ಲಿ ಅರ್ಧ ಸಿಹಿ, ಇನ್ನರ್ಧ ಕಹಿ ಎಂಬ ಭಾವವಿತ್ತು. ಹರಿಯಾಣದಲ್ಲಿ ಶಕ್ತಿ ಹೆಚ್ಚಿದ್ದಕ್ಕೆ ಹಿಗ್ಗಿದ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಹೆಚ್ಚೇನೂ ಸಾಧನೆ ಮಾಡದೇ ಹಿನ್ನಡೆ ಕಂಡಿತು.

ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಇದ್ದುದರಲ್ಲಿಯೇ ತನ್ನ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿತು. ಈ ಮಧ್ಯೆ, ಹರಿಯಾಣ ಸಿಎಂ ಮನೋಹರ್‍ಲಾಲ್ ಖಟ್ಟರ್ ಅವರನ್ನು ದೆಹಲಿಗೆ ಕರೆಸಿಕೊಂಡ ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ.

Translate »