ಹೆಚ್ಚಿನ ಕರೆನ್ಸಿ ಆಸೆಯಿಂದ 14 ಲಕ್ಷ ರೂ.   ಕಳೆದುಕೊಂಡ ಮೊಬೈಲ್ ಅಂಗಡಿ ಮಾಲೀಕ
ಮೈಸೂರು

ಹೆಚ್ಚಿನ ಕರೆನ್ಸಿ ಆಸೆಯಿಂದ 14 ಲಕ್ಷ ರೂ. ಕಳೆದುಕೊಂಡ ಮೊಬೈಲ್ ಅಂಗಡಿ ಮಾಲೀಕ

January 7, 2019

ಮೈಸೂರು: ಮಡಿಕೇರಿಯ ಮೊಬೈಲ್ ರಿಚಾರ್ಜ್ ಮಳಿಗೆಯೊಂದರ ಮಾಲೀಕ, ಹೆಚ್ಚುವರಿ ಕೊಡುಗೆಯ ಆಫರ್ ನಂಬಿಕೊಂಡು ವಂಚನೆಗೊಳಗಾಗಿ ಭಾರೀ ಮೊತ್ತವನ್ನು ಕಳೆದುಕೊಂಡಿದ್ದಾರೆ.

10 ಲಕ್ಷ ರೂ.ಗೆ ರೀಚಾರ್ಜ್ ಮಾಡಿಸಿದರೆ 10.70 ಲಕ್ಷ ರೂ. ಮೌಲ್ಯದ ಕರೆನ್ಸಿ ಬರುತ್ತದೆ ಎಂಬ ಆಮಿಷವನ್ನು ನಂಬಿ 13.97 ಲಕ್ಷ ರೂ. ಕಳೆದುಕೊಂಡಿದ್ದಾರೆ. ವಂಚನೆಗೊಳಗಾದ ಮಡಿಕೇರಿಯ ಮಹಮದ್ ಆಯೂಬ್ ಈ ಸಂಬಂಧ ಸರಸ್ವತಿ ಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಮದ್ ಅಯೂಬ್ ಮಡಿಕೇರಿಯಲ್ಲಿ ಮೊಬೈಲ್ ಸೇಲ್ ಹಾಗೂ ರಿಚಾರ್ಜ್ ಅಂಗಡಿ ಇಟ್ಟುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಇವರ ಅಂಗಡಿಗೆ ಭೇಟಿ ನೀಡಿದ ವ್ಯಕ್ತಿಯೊಬ್ಬ ತನ್ನನ್ನು ವೇದಾಂತ್ ಎಂದು ಪರಿಚಯಿಸಿಕೊಂಡಿದ್ದಾನೆ. ನಾನು ಮತ್ತು ರಮೇಶ್ ಹಾಗೂ ಕೆಲ ಸ್ನೇಹಿತರು ಸೇರಿಕೊಂಡು ಮೈಸೂರಿನ ಸರಸ್ವತಿಪುರಂನ 6ನೇ ಮೇನ್‍ನಲ್ಲಿ ಮ್ಯಾಕ್ ರಿಚಾರ್ಜ್ ಎಂಬ ಕಂಪನಿ ಆರಂಭಿಸಿದ್ದೇವೆ. ನಮ್ಮ ಕಂಪೆನಿ ಮೂಲಕ 10 ಲಕ್ಷ ರೂ.ಗೆ ಮೊಬೈಲ್ ರಿಚಾರ್ಜ್ ಮಾಡಿಸಿದರೆ 10.70 ಲಕ್ಷ ರೂ. ಕರೆನ್ಸಿ ಬರುತ್ತದೆ ಎಂದು ನಂಬಿಸಿದ್ದಾನೆ.

ಅವನ ಮಾತನ್ನು ನಂಬಿದ ಆಯೂಬ್, ಹೆಚ್ಚಿನ ಕರೆನ್ಸಿ ಆಸೆಯಿಂದ 13,97,702 ರೂ. ಗಳನ್ನು ವೇದಾಂತ್ ನೀಡಿದ್ದ ಬ್ಯಾಂಕ್ ಅಕೌಂಟ್ ನಂಬರ್‍ಗೆ ಆರ್‍ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಬಳಿಕ ತಮ್ಮ ಮೊಬೈಲ್ ನಂಬರ್‍ಗೆ ರೀಚಾರ್ಜ್ ಕರೆನ್ಸಿ ಬರದಿರುವುದನ್ನು ಕಂಡು ಪರಿಶೀಲಿಸಿದ ಆಯೂಬ್‍ಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ನಂತರ ಮೈಸೂರಿಗೆ ಬಂದ ಆಯೂಬ್, ವೇದಾಂತ್ ವಿರುದ್ಧ ದೂರು ನೀಡಿದ್ದಾರೆ.

Translate »