ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡಿ ತೆರಳುತ್ತಿದ್ದ ರೈತನಿಂದ 5.50 ಲಕ್ಷ ದೋಚಿದ ದುಷ್ಕರ್ಮಿಗಳು
ಮೈಸೂರು

ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡಿ ತೆರಳುತ್ತಿದ್ದ ರೈತನಿಂದ 5.50 ಲಕ್ಷ ದೋಚಿದ ದುಷ್ಕರ್ಮಿಗಳು

January 11, 2020

ಹಾಡಹಗಲೇ ಹುಣಸೂರು ಪಟ್ಟಣದಲ್ಲಿ ದುಷ್ಕøತ್ಯ
ಹುಣಸೂರು, ಜ.10(ಕೆಕೆ)-ರೈತರೊಬ್ಬರು ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುವಾಗ ಬೈಕ್‍ನಲ್ಲಿ ಇಬ್ಬರು ದುಷ್ಕರ್ಮಿಗಳು ಹಣದ ಚೀಲವನ್ನು ಕಸಿದು ಪರಾರಿಯಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಗರದಲ್ಲಿ ನಡೆದಿದೆ.

ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ರೈತ ಶಿವಣ್ಣೇಗೌಡ ಹಣ ಕಳೆದುಕೊಂಡವರು. ಇವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಫಸಲು ಮಾರಾಟ ಮಾಡಿದ್ದರು. ಇದರ ಹಣವನ್ನು ಶುಂಠಿ ವ್ಯಾಪಾರಿ ಹುಣಸೂರಿನ ಕೆನರಾ ಬ್ಯಾಂಕ್‍ನಲ್ಲಿರುವ ಇವರ ಖಾತೆಗೆ ಜಮಾ ಮಾಡಿದ್ದ.

ಇಂದು ಬೆಳಿಗ್ಗೆ ಶಿವಣ್ಣೇಗೌಡ ತಮ್ಮ ಪತ್ನಿ ಗೌರಮ್ಮ ಅವರೊಂದಿಗೆ ಬ್ಯಾಂಕ್‍ಗೆ ಬಂದು ತಮ್ಮ ಖಾತೆಯಿಂದ ಡ್ರಾ ಮಾಡಿದ 5.5 ಲಕ್ಷ ರೂ. ಹಣವನ್ನು ದಾಖಾಲಾತಿಯೊಂದಿಗೆ ಬ್ಯಾಗಿನಲ್ಲಿಟ್ಟುಕೊಂಡು ಗ್ರಾಮಕ್ಕೆ ನಡೆದುಕೊಂಡು ಹೋಗುತಿದ್ದರು. ಇದನ್ನು ಗಮನಿಸಿದ್ದ ಖದೀಮರು ಬ್ಯಾಂಕ್ ಅಣತಿ ದೂರದಲ್ಲಿರುವ ತಾಲೂಕು ಕಚೇರಿ ಮುಂದಿರುವ ಭಾರತ್ ಪೆಟ್ರೋಲ್ ಬಂಕ್ ಬಳಿ ಹೊಂಚು ಹಾಕಿದ್ದರು. ವೃದ್ಧ ದಂಪತಿ ಹತ್ತಿರ ಬರುತ್ತಿದ್ದಂತೆ ಅವರ ಕೈಯಲ್ಲಿದ್ದ ಹಣದ ಬ್ಯಾಗನ್ನು ಕಿತ್ತುಕೊಂಡು ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.

ಮೊಲೀಸರು ತಾಲೂಕು ಕಚೇರಿ ಸುತ್ತ ಮುತ್ತಲ ಸಿಸಿ ಟಿವಿ ಕ್ಯಾಮೆರಾಗಳ ಪುಟೇಜ್‍ಗಳನ್ನು ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈಗಾಗಲೇ ದುಷ್ಕರ್ಮಿಗಳು ಹಾಗೂ ಬೈಕ್‍ನ ಚಹರೆ ದೊರೆತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಡಿವೈಎಸ್ಪಿ ಸುಂದರ್‍ರಾಜ್ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಮಾಹಿತಿ ಪಡೆದರು. ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸ್ ವೃತ್ತ ನಿರೀಕ್ಷಕ ಪೂವಯ್ಯ ನೇತೃತದಲ್ಲಿ ತಂಡಗಳನ್ನು ರಚಿಸಲಾಗಿದೆ.

Translate »