ಕೊಡಗಿಗೆ ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿದ್ದ 50 ಕೋಟಿ ಅನುದಾನಕ್ಕೆ ತಡೆ ಅಡ್ಡಂಡ ಸಿ.ಕಾರ್ಯಪ್ಪ ಬೇಸರ
ಕೊಡಗು

ಕೊಡಗಿಗೆ ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿದ್ದ 50 ಕೋಟಿ ಅನುದಾನಕ್ಕೆ ತಡೆ ಅಡ್ಡಂಡ ಸಿ.ಕಾರ್ಯಪ್ಪ ಬೇಸರ

July 18, 2018

ಪೊನ್ನಂಪೇಟೆ:  ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿದ್ದ ವೇಳೆ ಕೊಡಗಿನ ಗ್ರಾಮೀಣ ರಸ್ತೆಗಳ ಅಭಿ ವೃದ್ಧಿಗೆ ಬಿಡುಗಡೆ ಮಾಡಲಾಗಿದ್ದ 50 ಕೋಟಿ ರೂ. ವಿಶೇಷ ಅನುದಾನವನ್ನು ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ತಡೆ ಹಿಡಿದಿದ್ದಾರೆ ಎಂದು ಪೊನ್ನಂಪೇಟೆ ನಾಗರಿಕ ವೇದಿಕೆ ಸದಸ್ಯ ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ ಆರೋಪಿಸಿದ್ದಾರೆ.

ಹಿಂದಿನ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸೀತಾರಾಂ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಕಡ್ಡಣ ಯಂಡ ಹರೀಶ್ ಅವರ ಪ್ರಾಮಾಣಿಕ ಪ್ರಯತ್ನದಿಂದಾಗಿ ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನ ಮಂಡಿಸಿದ್ದ ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ 50 ಕೋಟಿ ವಿಶೇಷ ಅನುದಾನ ಘೋಷಣೆ ಮಾಡಿದ್ದರು. ಅದರಂತೆ ಸರ್ಕಾರ ಹಣ ಬಿಡುಗಡೆಗೆ ಆದೇ ಹೊರಡಿಸಿತ್ತು (ಆದೇಶ ಸಂಖ್ಯೆ ಲೋ.ಇ.155 ಐ.ಎಲ್ ದಿನಾಂಕ 2.3.2018) ಈ ಆದೇಶದಂತೆ ಅರ್ಥಿಕ ಇಲಾಖೆ ಯಿಂದ ಲೆಕ್ಕ ಶೀರ್ಷಿಕೆ 5054-04-337-0-05-154, ಜಿಲ್ಲಾ ರಸ್ತೆಗಳು ಮತ್ತು ರಸ್ತೆ ಸುಧಾರಣಾ ವೆಚ್ಚ ಶೀರ್ಷಿಕೆ 5054-04-0337-0-10-200 ರಂತೆ ಅನುಮೋದನೆಗೊಂಡು ಬಿಡಗಡೆಯಾಗಿತ್ತು ಎಂದು ಅವರು ವಿವರಿಸಿದ್ದಾರೆ. ಆದರೆ, ಈ ವೇಳೆ ರಾಜ್ಯ ವಿಧಾನಸಭೆ ಚುನಾವಣೆ ಬಂದಿದ್ದರಿಂದ ಹಣ ಬಿಡುಗಡೆಗೊಂಡಿದ್ದರೂ ಯೋಜನೆ ಸ್ಥಗಿತಗೊಂಡಿತ್ತು.

ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಸಾಧ್ಯ ವಾಗಿರಲಿಲ್ಲ. ಇದೀಗ ಚುನಾವಣೆ ಮುಗಿದು, ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ನೂತನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಬಜೆಟ್ ಮಂಡಿಸಿದ್ದಾರೆ. ಅವರು ಮಂಡಿಸುವ ಬಜೆಟ್ ನಲ್ಲಿ ಕೊಡಗಿಗೆ ಯಾವುದೇ ಯೋಜನೆಯನ್ನು ಕೊಟ್ಟಿಲ್ಲ. ಅದೇ ವೇಳೆ ರೈತರ ಸಾಲಮನ್ನಾ ಮತ್ತು ವಿವಿಧ ಭಾಗ್ಯಗಳ ಯೋಜನೆಗಳ ಹಣದ ಕೊರತೆಯಿಂದಾಗಿ ಕೊಡಗು ಜಿಲ್ಲೆಗೆ ಬಿಡುಗಡೆಯಾಗಿದ್ದ 50 ಕೋಟಿ ವಿಶೇಷ ಅನುದಾನವನ್ನು ತಡೆ ಹಿಡಿಯಲಾಗಿದೆ. ರಾಜ್ಯದ ಮುಖ್ಯ ಅಭಿಯಂತರ ರಿಂದ ಪಡೆದ ಮಾಹಿತಿಯಿಂದ ಕೊಡಗಿಗೆ ಬಿಡುಗಡೆಯಾಗಿದ್ದ 50 ಕೋಟಿ ತಡೆ ಹಿಡಿಯಲಾಗಿದೆ. ಆದ್ದರಿಂದ ಕಾಮಗಾರಿಗಳಿಗೆ ಟೆಂಡರ್ ಕರೆಯದಂತೆ ಆದೇಶ ನೀಡಲಾಗಿದೆ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ. ಕೊಡ ಗಿಗೆ ಬಿಡುಗಡೆಯಾದ ಹಣ ತಡೆಹಿಡಿಯಲ್ಪಟ್ಟಿರುವುದಕ್ಕೆ ಬೇಸರ ವ್ಯಕ್ತ ಪಡಿಸಿರುವ ಕಾರ್ಯಪ್ಪ, ಈ ಬಗ್ಗೆ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ ಅವರುಗಳು ಮುಖ್ಯಮಂತ್ರಿಗಳನ್ನು ಪ್ರಶ್ನಿಸಬೇಕು. ಕೊಡಗಿನ ಎಲ್ಲಾ ರಸ್ತೆಗಳೂ ಮಳೆಯಿಂದ ಹಾಳಾಗಿವೆ. ಆದ್ದ ರಿಂದ ಈಗಾಗಲೇ ಬಿಡುಗಡೆಯಾಗಿರುವ 50 ಕೋಟಿ ಜೊತೆಗೆ ಕನಿಷ್ಠ 500 ಕೋಟಿಯಷ್ಟು ಹಣ ರಸ್ತೆಗಳ ದುರಸ್ಥಿಗೆ ಬೇಕಾಗಿದೆ.

Translate »