ಶ್ರೀರಂಗಪಟ್ಟಣ: ಟಿಪ್ಪರ್‍ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಟಿಪ್ಪರ್ ಕಳ್ಳರನ್ನು ಬಂಧಿಸುವಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ಪೆರಂಬೂರು ಜಿಲ್ಲೆಯ ಕುಣ್ಣಮ್ ತಾಲೂಕಿನ ಸಿರುವಲಯಲರೂ ಗ್ರಾಮದ ನಿವಾಸಿ ವಿಮಲ್ ಬಿನ್ ಗುಣಶೇಖರನ್, ದಾವಣಗೆರೆ ಟೌನ್‍ನ ಇಮ್ರಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 27 ಲಕ್ಷ ರೂ. ಮೌಲ್ಯದ ಟಿಪ್ಪರ್ ಲಾರಿ, ಮಿನಿ ಟಿಪ್ಪರ್ ಲಾರಿ, ಮಹೀಂದ್ರಾ ಬೋಲೆರೋ ಹಾಗೂ ನೋಂದಣಿ ಸಂಖ್ಯೆ ಇಲ್ಲದ ಅಶೋಕ್ ಲೈಲ್ಯಾಂಡ್ ದೋಸ್ತ್ ಮಿನಿಗೂಡ್ಸ್ ವಾಹನವನ್ನು ವಶಪಡಿಸಿ ಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಡಿವೈಎಸ್‍ಪಿ ವಿಶ್ವನಾಥ್ ಮಾರ್ಗದರ್ಶನ ದಲ್ಲಿ ಸಿಪಿಐ ರವೀಂದ್ರ ನೇತೃತ್ವದಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಎಸ್‍ಐ ಬಿ.ಎನ್.ಪುನೀತ್ ಅವರು, ಜು.15ರಂದು ಸಂಜೆ ಬೆಂಗಳೂರು-ಮೈಸೂರು ಹೆದ್ದಾರಿಯ ನಗುವನಹಳ್ಳಿ ಗೇಟ್ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಬಂದ ಬಿಳಿ ಬಣ್ಣದ ಮಹೀಂದ್ರ್ರಾ ಬುಲೆರೋ( ಕೆಎ-49, 4123) ವಾಹನವನ್ನು ತಡೆದು ವಿಚಾರಣೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಈ ವೇಳೆ ಆರೋಪಿಗಳು ದಾವಣಗೆರೆ ಜೈಲಿನಲ್ಲಿರುವ ಮತ್ತೊಬ್ಬ ಆರೋಪಿ ಹಬೀಬ್‍ನನ್ನು ಬಿಡಿಸಲು ಈ ವಾಹನ ವನ್ನು ಮೈಸೂರಿನ ಯಾವುದಾದರೂ ಗುಜರಿಗೆ ಮಾರಾಟ ಮಾಡಲು ತೆಗೆದು ಕೊಂಡು ಹೋಗುತ್ತಿರುವುದಾಗಿ ತಿಳಿಸಿ ದ್ದಾರೆ. ಈ ಸಂಬಂಧ ಮೂವರ ವಿರುದ್ಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.