ಕೊಪ್ಪ ಕೆರೆಗೆ ಶಾಸಕರಿಂದ ಬಾಗಿನ
ಮಂಡ್ಯ

ಕೊಪ್ಪ ಕೆರೆಗೆ ಶಾಸಕರಿಂದ ಬಾಗಿನ

July 18, 2018

ಮದ್ದೂರು: ತಾಲೂಕಿನ ಕೊಪ್ಪ ಕೆರೆಗೆ ಶಾಸಕ ಸುರೇಶ್‍ಗೌಡ, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ ಅವರು ಬುಧವಾರ ಬಾಗಿನ ಅರ್ಪಿಸಿದರು.

ಶಾಸಕ ಸುರೇಶ್‍ಗೌಡ ಮಾತನಾಡಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ನೀಡಿದ್ದ ಎಲ್ಲಾ ಭರವಸೆಯನ್ನು ಈಡೇರಿಸಲಿದ್ದಾರೆ. ಆದರೆ, ಇದಕ್ಕೆ ಸ್ವಲ್ಪ ಕಾಲಾವಕಾಶ ನೀಡಬೇಕು. ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮುಂದುವರಿಸುವ ಜೊತೆಗೆ, ಹೊಸ ಜನಪರ ಯೋಜನೆಗಳನ್ನು ಕುಮಾರಸ್ವಾಮಿ ಅವರು ಜಾರಿಗೆ ತಂದು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇ ಗೌಡ ಮಾತನಾಡಿ, ಸಾಲಮನ್ನಾ ವಿಷಯದಲ್ಲಿ ಜಿಲ್ಲೆಯ ರೈತರಿಗೆ 3,900 ಕೋಟಿ ರೂ. ಮನ್ನಾ ಮಾಡಲಾಗಿದೆ. ಕೊಪ್ಪ ಕೆರೆಯನ್ನು ಪ್ರವಾಸಿತಾಣ ಮಾಡಲು ಪ್ರವಾಸೋದ್ಯಮ ಹಾಗೂ ನೀರಾವರಿ ಸಚಿವರ ಜೊತೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಕೆರೆಯ ಬಳಿ ಸಮುದಾಯ ಭವನ ನಿರ್ಮಾಣ ಮಾಡಿ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶುಭ ಸಮಾರಂಭ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ದಿನದಿಂದ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಬರಗಾಲದ ಛಾಯೆ ಹೋಗಿ ಸಮೃದ್ಧ ಮಳೆಯಾಗುತ್ತಿದೆ. ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿದೆ. ರೈತಾಪಿ ವರ್ಗದವರಲ್ಲಿ ಸಂತೋಷ ಮನೆ ಮಾಡಿದೆ ಎಂದು ತಿಳಿಸಿದರು.

ಜಿಪಂ ಸದಸ್ಯರಾದ ರೇಣುಕಮ್ಮ, ಮರಿಹೆಗ್ಗಡೆ, ತಾಪಂ ಅಧ್ಯಕ್ಷೆ ಜಯಲಕ್ಷ್ಮಿ, ಸದಸ್ಯ ಮೋಹನ್, ಮುಖಂಡರಾದ ಸುರೇಶ್, ರಾಮಚಂದ್ರು, ಚಿಕ್ಕೊನಹಳ್ಳಿ ತಮ್ಮಯ್ಯ, ತಮ್ಮಣ್ಣನಾಯಕ್, ರಾಮಕೃಷ್ಣ, ಗಿರೀಶ್, ಮಧು ಇತರರು ಹಾಜರಿದ್ದರು.

Translate »