ನಾಳೆ ಸಿಎಂ ಕುಮಾರಸ್ವಾಮಿಯಿಂದ ಹಾರಂಗಿಗೆ ಬಾಗಿನ
ಕೊಡಗು

ನಾಳೆ ಸಿಎಂ ಕುಮಾರಸ್ವಾಮಿಯಿಂದ ಹಾರಂಗಿಗೆ ಬಾಗಿನ

July 18, 2018

ಕುಶಾಲನಗರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜು.19 ರಂದು ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿ ಸಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯಿಂದ ಮುಖ್ಯಮಂತ್ರಿ ಸ್ವಾಗತಕ್ಕೆ ಭರದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಹಾರಂಗಿ ಜಲನಯನ ಪ್ರದೇಶದಲ್ಲಿ ವ್ಯಾಪಕ ವಾಗಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇಂದು ಜಲಾ ಶಯದಿಂದ 21423 ಕ್ಯುಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗಿದೆ. ಇದೀಗ ಮೈದುಂಬಿರುವ ಹಾರಂಗಿ ಜಲಾಶಯಕ್ಕೆ ಗುರುವಾರ ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ. ಈ ಸಂದರ್ಭ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಲೋಕೋ ಪಯೋಗಿ ಸಚಿವ ಎಚ್.ಡಿ.ರೇವಣ್ಣ, ಶಾಸಕರಾದ ಕೆ.ಮಹಾದೇವ್, ಎ.ಎಚ್.ವಿಶ್ವನಾಥ್, ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್ ಉಪಸ್ಥಿತರಿರುತ್ತಾರೆ.

ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ವತಿಯಿಂದ ಜಲಾಶಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳಲಾಗಿದ್ದು, ತ್ವರಿತಗತಿಯಲ್ಲಿ ವಿದ್ಯುದ್ದೀಕರಣ, ಪ್ರವಾಸಿ ಮಂದಿರ ದುರಸ್ತಿ, ಐಬಿಗೆ ಹೊಸ ಪಿಠೋಕರಣಗಳು, ಹೆಲಿ ಪ್ಯಾಡ್ ದುರಸ್ತಿ ಹಾಗೂ ರಸ್ತೆ ರಿಪೇರಿ ಕಾರ್ಯ ಕೈಗೊಳ್ಳಲಾಗಿದೆ. ಜಲಾಶಯದ ಪ್ರವೇಶದ್ವಾರ ಹಾಗೂ ಅಣೆಕಟ್ಟೆ ಮೇಲ್ ಭಾಗದ ಪ್ರವೇಶದಲ್ಲಿ ಎರಡು ಹೈಮಾಸ್ಟ್ ದೀಪ ಅಳವಡಿಕೆ ಹಾಗೂ ನಾಮಫಲಕಕ್ಕೆ ಬಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ. ಪ್ರವೇಶದ್ವಾರದಿಂದ ಪ್ರವಾಸಿ ಮಂದಿರದ ವರೆಗೆ ಹಾಗೂ ಜಲಾಶಯದ ಮುಂಭಾಗ ಇರುವ ಉದ್ಯಾನವನದ ಸಂಗೀತಾ ಕಾರಂಜಿ ಸಿದ್ಧಪಡಿಸಲಾಗಿದೆ. ಪಾರ್ಕ್ ದುರಸ್ತಿ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗುತ್ತಿದೆ.

ನೀರಾವರಿ ಇಲಾಖೆ ಅಣ್ಣೆಕಟ್ಟೆ ವಿಭಾಗದ ಸಹಾಯಕ ಎಂಜಿನಿಯರ್ ನಾಗರಾಜು ನೇತೃತ್ವದಲ್ಲಿ ರಿಪೇರಿ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಈ ಸಂದರ್ಭ ಇಲಾಖೆ ಕಿರಿಯ ಎಂಜಿನಿಯರ್ ಕಿರಣ್, ಸಿಬ್ಬಂದಿ ಕೃಷ್ಣ ಇದ್ದರು.

Translate »