ಕೊಡಗಿನಲ್ಲಿ ಭಾರೀ ಮಳೆ: ಚೆಸ್ಕಾಂಗೆ 1.50 ಕೋಟಿ ನಷ್ಟ
ಕೊಡಗು

ಕೊಡಗಿನಲ್ಲಿ ಭಾರೀ ಮಳೆ: ಚೆಸ್ಕಾಂಗೆ 1.50 ಕೋಟಿ ನಷ್ಟ

July 18, 2018

ಮಡಿಕೇರಿ: ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಯಿಂದ ಪ್ರಕೃತಿ ವಿಕೋಪಗಳು ಮುಂದುವರಿದಿದೆ. ಮರಗಳು ಧರೆಗುರುಳಿ ಬೀಳುತ್ತಿದ್ದು, ಚೆಸ್ಕಾಂ ಇಲಾಖೆಗೆ ಅತೀ ಹೆಚ್ಚು ನಷ್ಟ ಸಂಭವಿಸಿದೆ.

ಮಡಿಕೇರಿಯ ಜಿಲ್ಲಾಡಳಿತ ಭವನ ಮುಂಭಾಗ ಭಾರಿ ಭೂ ಕುಸಿತವಾಗಿದ್ದು, ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕೆಲಕಾಲ ಬಂದ್ ಆಗಿತ್ತು. ಹೆದ್ದಾರಿಗೆ ಬಿದ್ದ ಮರ ಮತ್ತು ಮಣ್ಣನ್ನು ತೆರವು ಗೊಳಿಸಿದ ಬಳಿಕ ವಾಹನ ಸಂಚಾರ ಯಥಾಸ್ಥಿತಿಗೆ ಮರಳಿತು. ಮುಕ್ಕೋಡ್ಲು ವ್ಯಾಪ್ತಿಯಲ್ಲಿ ಬೃಹತ್ ಗಾತ್ರದ 6 ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮರ ತೆರವು ಮಾಡಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

1.50ಕೋಟಿ ರೂ. ನಷ್ಟ : ಜಿಲ್ಲೆಯ ವಿವಿಧೆಡೆ ಜೂನ್‍ನಿಂದ ಜುಲೈ 2ನೇ ವಾರದವರೆಗೆ ಒಟ್ಟು 1858 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಕೇವಲ 4 ದಿನಗಳಲ್ಲಿ ಒಟ್ಟು 300 ಕಂಬ ಗಳಿಗೆ ಹಾನಿಯಾಗಿದೆ. ಚೆಸ್ಕಾಂ ಇಲಾಖೆ ಅಡಿಯಲ್ಲಿ ಒಟ್ಟು 400 ಮಂದಿ ಸಿಬ್ಬಂದಿ ವಿದ್ಯುತ್ ಲೈನ್ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಮಳೆಯಿಂದಾಗಿ ದುರಸ್ತಿ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಈಗಾಗಲೇ 1500 ವಿದ್ಯುತ್ ಕಂಬಗಳನ್ನು ಮರು ಜೋಡಿಸಲಾಗಿದ್ದು, ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆಸಲಾಗುತ್ತಿದೆ.

ಒಂದು ಕಡೆ ದುರಸ್ತಿ ಕಾರ್ಯ ನಡೆಯುತ್ತಿರುವ ನಡುವೆಯೇ ಮತ್ತೊಂದು ಕಡೆ ವಿದ್ಯುತ್ ಕಂಬಗಳ ಮೇಲೆ ಮರ ಉರುಳುತ್ತಿರುವುದು ಚೆಸ್ಕಾಂ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯ ಕೆಲವು ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಕಾಣದೆ ವಾರವೇ ಕಳೆದಿದೆ. ಜಿಲ್ಲಾ ಚೆಸ್ಕಾಂ ಇಲಾಖೆಗೆ ಈಗಾಗಲೇ 1.50ಕೋಟಿ ರೂಪಾಯಿ ನಷ್ಟವಾಗಿದ್ದು, ಗಾಳಿಯ ತೀವ್ರತೆ ಹೀಗೆ ಮುಂದುವರಿದರೆ ನಷ್ಟದ ಲೆಕ್ಕದೊಂದಿಗೆ ಕಂಬಗಳ ಹಾನಿಯ ಪ್ರಮಾಣವೂ ಏರಿಕೆಯಾಗಲಿದೆ.

ತಗ್ಗಿದ ಮಳೆ: ಕಳೆದ 12 ದಿನಗಳಿಂದ ಎಡೆಬಿಡದೆ ಸುರಿದು ಜಿಲ್ಲಾದ್ಯಂತ ಅವಾಂತರ ಸೃಷ್ಟಿಸಿದ್ದ ಮಳೆ ಮಂಗಳವಾರ ತನ್ನ ಪ್ರತಾಪವನ್ನು ತಗ್ಗಿಸಿದ್ದು, ಕಂಡು ಬಂತು. ಕೊಡಗು ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳವಾಗಿದ್ದು, ಮುಕ್ಕೋಡ್ಲು, ಹಮ್ಮಿಯಾಲ ವ್ಯಾಪ್ತಿಯಲ್ಲಿ ಡಾಂಬರು ರಸ್ತೆಗಳ ಮಧ್ಯದಿಂದಲೇ ಜಲ ಉಕ್ಕುತ್ತಿರುವ ಬಗ್ಗೆಯೂ ವರದಿಯಾಗಿದೆ. ಮಳೆ ಬಿಡುವು ನೀಡಿದ್ದರೂ ಕೂಡ ಕಾವೇರಿ, ಲಕ್ಷಣ ತೀರ್ಥ ನದಿಗಳು ಸೇರಿದಂತೆ ಉಪ ನದಿಗಳು ಮತ್ತು ತೊರೆಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿಲ್ಲ. ಹೀಗಾಗಿ ನಾಪೋಕ್ಲು-ಭಾಗಮಂಡಲ ರಸ್ತೆ, ಬೊಳಿಬಾಣೆ, ದೋಣಿ ಕಡುವು, ಚೆರಿಯಪರಂಬು -ಕಲ್ಲುಮೊಟ್ಟೆ ಗ್ರಾಮಗಳ ಸೇತುವೆಗಳು ಮುಳುಗಿದ ಸ್ಥಿತಿಯಲ್ಲಿಯೇ ಇದೆ. ರಸ್ತೆ ಸಂಪರ್ಕ ಬಂದ್ ಆಗಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಶಾಲಾ ಮಕ್ಕಳು ಕಳೆದ 1 ವಾರದಿಂದ ಶಾಲೆಗೆ ತೆರಳದೆ ಮನೆಯಲ್ಲೆ ಉಳಿದುಕೊಂಡಿದ್ದಾರೆ.

Translate »