ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡುವ ಮೂಲಕ ಬೆಂಗಳೂರಿನ ವರ್ತಕನಿಗೆ ಆತನ ಬಾವ ಮತ್ತು ಕುಟುಂಬದವರು 70 ಲಕ್ಷ ರೂ. ವಂಚಿಸಿರುವ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ವರ್ತಕ ಆರ್. ಮಂಜುನಾಥ್ ಎಂಬುವರೇ ತನ್ನ ಸ್ವಂತ ಬಾವನ ಕುಟುಂಬದವರಿಂದ ವಂಚನೆಗೊಳಗಾ ದವರಾಗಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿವರ: ಮೈಸೂರಿನ ಟಿ.ಎ. ಪಾಂಡುರಂಗ ಶೆಟ್ಟಿ ಎಂಬುವರು ತಮ್ಮ ಬಾಮೈದ ಬೆಂಗ ಳೂರಿನ ವರ್ತಕ ಆರ್.ಮಂಜುನಾಥ್ ಅವರಿಂದ ವ್ಯವಹಾರಕ್ಕಾಗಿ 30 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಹಿಂತಿರುಗಿಸುವಂತೆ ಕೇಳಿದಾಗ, ಮಂಜುನಾಥ್ ಅವರ ಅಕ್ಕ ಸಂಧ್ಯಾರಾಣಿ, ಭಾವ ಟಿ.ಎ.ಪಾಂಡುರಂಗ ಶೆಟ್ಟಿ, ಅವರ ಮಗ ಕೆ.ಪಿ.ಸಾಗರ್ ಮತ್ತು ಸ್ನೇಹಿತ ಅನಿಲ್‍ಕುಮಾರ್ ಎಂಬುವರುಗಳು ಮಾತುಕತೆ ನಡೆಸಿ ಸಾಲದ ಹಣಕ್ಕೆ ಮೈಸೂರಿನ ವಿಜಯನಗರದಲ್ಲಿ ನಿವೇಶನವೊಂದನ್ನು ಕೊಡಿಸುವುದಾಗಿ ಒಪ್ಪಿಕೊಂಡಿದ್ದಾರೆ.
ಅದರಂತೆ ಇವರುಗಳು ಮಂಜುನಾಥ್ ಅವರಿಗೆ ವಿಜಯನಗರದಲ್ಲಿ ನಿವೇಶನವೊಂ ದನ್ನು ತೋರಿಸಿ, ಹೆಚ್ಚುವರಿಯಾಗಿ 7.5 ಲಕ್ಷ ರೂ. ಪಡೆದಿದ್ದರು. ಕೆಲ ದಿನಗಳ ನಂತರ ಆ ನಿವೇಶನದ ದಾಖಲೆಗಳು ಸರಿಯಿಲ್ಲ. ಅದು ನೋಂದಣಿಯಾಗುವುದಿಲ್ಲ ಎಂದು ತಿಳಿಸಿ, ಸಾತಗಳ್ಳಿಯಲ್ಲಿರುವ ಸೈಟ್ ನಂಬರ್ 1573ನ್ನು ತೋರಿಸಿ ಮತ್ತೆ 32.5 ಲಕ್ಷ ರೂ. ಪಡೆದು 2018ರ ಜುಲೈ 19ರಂದು ಅಪರಿಚಿತ ಮಹಿಳೆಯನ್ನು ನಿವೇಶನದ ಮಾಲೀಕರು ಎಂದು ಶಕ್ತಿನಗರದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆತಂದು ನಿವೇಶನ ವನ್ನು ನೋಂದಣಿ ಮಾಡಿಕೊಟ್ಟಿದ್ದಾರೆ. ಒಟ್ಟಾರೆ 70 ಲಕ್ಷ ರೂ.ಗಳನ್ನು ನೀಡಿ ನಿವೇಶನ ಪಡೆದಿದ್ದ ಮಂಜುನಾಥ್, ದಾಖಲೆಗಳೊಂದಿಗೆ ಮುಡಾ ಕಚೇರಿಗೆ ತೆರಳಿ ತನ್ನ ಹೆಸರಿಗೆ ಖಾತೆ ಬದಲಾಯಿಸಿ ಕೊಡುವಂತೆ ಕೋರಿದಾಗ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ಅವೆಲ್ಲವೂ ನಕಲಿ ದಾಖಲೆಗಳು ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯಗಿರಿ ಪೊಲೀಸ್ ಠಾಣೆಗೆ ತೆರಳಿದ ಮಂಜುನಾಥ್, ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಮಾರಾಟ ಮಾಡುವ ಮೂಲಕ ತನಗೆ 70 ಲಕ್ಷ ರೂ.ಗಳನ್ನು ವಂಚಿಸ ಲಾಗಿದೆ ಎಂದು ತನ್ನ ಅಕ್ಕ, ಬಾವ, ಅವರ ಪುತ್ರ ಹಾಗೂ ಸ್ನೇಹಿತನ ವಿರುದ್ಧ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.