ರಾಜ್ಯ ರಾಜಕಾರಣದಿಂದ ತಮ್ಮನ್ನು ಹೊರ ಹಾಕುವಲ್ಲಿ ಷಡ್ಯಂತ್ರ
ಮೈಸೂರು

ರಾಜ್ಯ ರಾಜಕಾರಣದಿಂದ ತಮ್ಮನ್ನು ಹೊರ ಹಾಕುವಲ್ಲಿ ಷಡ್ಯಂತ್ರ

April 4, 2019

ಬೆಂಗಳೂರು: ಮಾಹಿತಿ ತಂತ್ರ ಜ್ಞಾನ ಬೆಳವಣಿಗೆ ಹಾಗೂ ಬೆಂಗಳೂರು ಅಭಿವೃದ್ಧಿ ತಡೆಗಟ್ಟುವ ಉದ್ದೇಶದಿಂದ ನನ್ನನ್ನು ಕರ್ನಾಟಕ ರಾಜ್ಯ ರಾಜಕೀಯದಿಂದಲೇ ಹೊರಹಾಕಲು ಷಡ್ಯಂತ್ರ ನಡೆಯಿತು ಎಂದು ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಇಂದಿಲ್ಲಿ ಒಡಲಾಳದ ರಹಸ್ಯವನ್ನು ಬಹಿರಂಗಪಡಿಸಿದರು.

ಬೆಂಗಳೂರು ವರದಿಗಾರರ ಕೂಟ ಹಾಗೂ ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತ ನಾಡಿದ ಅವರು, 2004ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿ ರಲಿಲ್ಲ. ನನ್ನ ನಾಯಕತ್ವದಲ್ಲಿ ಕಾಂಗ್ರೆಸ್‍ನ 65 ಶಾಸಕರು ಮಾತ್ರ ಆಯ್ಕೆಗೊಂಡಿದ್ದರು, ಈ ಸಂದರ್ಭ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ನನ್ನನ್ನೇ ಪುನಃ ನಾಯಕ ನಾಗಿ 62 ಶಾಸಕರು ಆಯ್ಕೆ ಮಾಡಿದ್ದರು. ಶಾಸಕರ ಬೆಂಬಲ ಇದ್ದರೂ ಮೈತ್ರಿ ಪಕ್ಷ ನನ್ನನ್ನು ಮುಖ್ಯಮಂತ್ರಿ ಯಾಗಿ ಮಾಡಲು ಒಪ್ಪಲಿಲ್ಲ. ಇದರ ಸುಳಿವು ದೊರೆ ಯುತ್ತಿದ್ದಂತೆ ನಾನು ಚೀನಾ ಪ್ರವಾಸ ಕೈಗೊಂಡೆ.

ಇತ್ತ ಸರ್ಕಾರ ರಚನೆಯಾಯಿತು. ಜೆಡಿಎಸ್‍ನೊಂದಿಗೆ ಸೇರಿಕೊಂಡು ಮೈತ್ರಿ ಸರ್ಕಾರ ರಚಿಸುವುದು ಅನಿ ವಾರ್ಯವಾಯಿತು. ಅಂದು ಕೇಂದ್ರ ಗೃಹ ಸಚಿವ ರಾಗಿದ್ದ ಶಿವರಾಜ್ ಪಾಟೀಲ್, ಚೀನಾ ಪ್ರವಾಸ ದಲ್ಲಿದ್ದ ನನ್ನನ್ನು ಸಂಪರ್ಕಿಸಿ ತಕ್ಷಣವೇ ಭಾರತಕ್ಕೆ ಹಿಂತಿರುಗುವಂತೆಯೂ, ಅಲ್ಲದೆ, ಮಹಾರಾಷ್ಟ್ರ ರಾಜ್ಯ ಪಾಲರಾಗಿ ಅಧಿಕಾರ ಸ್ವೀಕರಿಸುವಂತೆಯೂ ತಿಳಿಸಿದರು.

ರಾಜ್ಯಪಾಲರ ಹುದ್ದೆ ಬೇಡ ಎಂದರೂ ನನ್ನನ್ನು ಬಲವಂತವಾಗಿ ಆ ಸ್ಥಾನದಲ್ಲಿ ಕೂರಿಸುವಲ್ಲಿ ಕಾಣದ ಕೈಗಳು ಯಶಸ್ವಿಯಾಗಿದ್ದಲ್ಲದೆ, ನನ್ನನ್ನು ಕರ್ನಾಟಕ ರಾಜಕೀಯದಿಂದ ಹೊರಗಿಟ್ಟು ಮೈತ್ರಿ ಸರ್ಕಾರ ನಡೆಸಲು ಹೊರಟರು. ಇದರ ಮೂಲ ಉದ್ದೇಶ ಮಾಹಿತಿ ತಂತ್ರ ಜ್ಞಾನದ ಬೆಳವಣಿಗೆಯನ್ನು ಕುಂಠಿತಗೊಳಿಸುವುದು ಮತ್ತು ಬೆಂಗಳೂರು ಅಭಿವೃದ್ಧಿಯನ್ನು ತಡೆಯುವುದೇ ಇವರ ಉದ್ದೇಶವಾಗಿತ್ತು.

ಜೊತೆಗೆ ಮಾಹಿತಿ ತಂತ್ರಜ್ಞಾನ ಬೆಳವಣಿಗೆ ವಿಷಯದಲ್ಲಿ ನಾವು ವಿಶ್ವದಲ್ಲಿ ಮೊದಲ ಸ್ಥಾನಕ್ಕೆ ಮುಟ್ಟಿದ್ದೆವು. ನಾನು ಮತ್ತೊಂದು ಅವಧಿಗೆ ಆಡಳಿತ ನಡೆಸಿದ್ದರೆ ಬೆಂಗಳೂರು ನಗರದ ಚಿತ್ರಣವೇ ಬದಲಾಗುತ್ತಿತ್ತು. ಇದನ್ನು ಸಹಿಸದವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದರು ಎಂದು ಮೊದಲ ಬಾರಿಗೆ ಗುಟ್ಟು ರಟ್ಟು ಮಾಡಿದ ಕೃಷ್ಣ, ಆ ನಂತರ ಕರ್ನಾಟಕ ರಾಜ್ಯ ರಾಜಕೀಯದಿಂದ ಒಂದಲ್ಲಾ ಒಂದು ರೀತಿ ನನ್ನನ್ನು ದೂರ ಇಡುವ ಪ್ರಯತ್ನ ನಡೆಯಿತು. ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಆಡಳಿತವನ್ನು ಕೊಂಡಾಡಿದ ಕೃಷ್ಣ, ವಂಶ ಪಾರಂಪರ್ಯ ಆಡಳಿತವನ್ನು ವಿರೋಧಿಸುವ ಏಕೈಕ ಕಾರಣಕ್ಕಾಗಿ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಬೇಕಾಯಿತು ಎಂದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನು ಪ್ರಸ್ತಾಪಿಸದೆ, ಬುದ್ಧಿ ಬೆಳೆಯದವರು, ಇತಿಹಾಸ ಉಳ್ಳ ಪಕ್ಷದ ನಾಯಕತ್ವ ವಹಿಸುವುದನ್ನು ನಾನು ಇಚ್ಛಿಸಲಿಲ್ಲ. ವಂಶ ಪಾರಂಪರ್ಯ ಆಡಳಿತವನ್ನು ಎಷ್ಟು ದಿನ ಸಹಿಸಿಕೊಳ್ಳುವುದು ಎಂದರು. ಈ ವೇಳೆಗೆ ಪ್ರಧಾನಿ ಮೋದಿ ಅವರು ಮಾಡಿದ ನೋಟು ಅಮಾನ್ಯೀಕರಣ ಹಾಗೂ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಾನು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಮೋದಿ ನಾಯಕತ್ವ ಗುಣವನ್ನು ಮೆಚ್ಚಿ ಬಿಜೆಪಿ ಸೇರಬೇಕಾಯಿತೇ ಹೊರತು, ಯಾವುದೇ ಅಧಿಕಾರದ ಲಾಲಸೆಯಿಂದಲ್ಲ.

ನಾನು ಎಂದೂ ಹಿಂಬಾಗಿಲ ರಾಜಕೀಯ ಮಾಡಿಲ್ಲ, 1999ರಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ, ನನ್ನ ನಾಯಕತ್ವದಲ್ಲಿ 132 ಶಾಸಕರು ವಿಧಾನಸಭೆಗೆ ಆಯ್ಕೆಗೊಂಡರು, ಮುಂಬಾಗಿಲಿನಿಂದಲೇ ಮುಖ್ಯಮಂತ್ರಿಯಾದೆ. ರಾತ್ರೋರಾತ್ರಿ ಮತ್ತೊಂದು ಪಕ್ಷ ಸೇರಿ ಅಧಿಕಾರ ಹಿಡಿದುಕೊಂಡಿದ್ದರೆ, ಅದು ಹಿಂಬಾಗಿಲಿನ ರಾಜಕೀಯ ಆಗುತ್ತಿತ್ತು. ನನ್ನ ವಯಸ್ಸಿನ ಇತಿಮಿತಿಯ ಅರಿವಿದೆ, ಅಧಿಕಾರಕ್ಕಾಗಿ ನಾನು ಬಿಜೆಪಿ ಸೇರಿಲ್ಲ. ಮೋದಿ ಮತ್ತೊಮ್ಮೆ ಆಡಳಿತ ಚುಕ್ಕಾಣಿ ಹಿಡಿಯಬೇಕು. ಇದರಿಂದ ಭಾರತ ಆರ್ಥಿಕವಾಗಿ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

Translate »