ಸುಮಲತಾ ಪರ ಪಕ್ಷದ ಬಾವುಟ ಹಿಡಿದೇ ಪ್ರಚಾರ ನಡೆಸಲು ನಾಗಮಂಗಲ ಕಾಂಗ್ರೆಸ್ ಘಟಕ ನಿರ್ಧಾರ
ಮೈಸೂರು

ಸುಮಲತಾ ಪರ ಪಕ್ಷದ ಬಾವುಟ ಹಿಡಿದೇ ಪ್ರಚಾರ ನಡೆಸಲು ನಾಗಮಂಗಲ ಕಾಂಗ್ರೆಸ್ ಘಟಕ ನಿರ್ಧಾರ

April 4, 2019

ನಾಗಮಂಗಲ: ಪಕ್ಷೇತರ ಅಭ್ಯರ್ಥಿ ಸುಮ ಲತಾ ಅವರ ಪರವಾಗಿ ಕಾಂಗ್ರೆಸ್ ಬಾವುಟ ಹಿಡಿದು ಪ್ರಚಾರ ನಡೆಸಿದರೆ, ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷೆ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿರುವುದಕ್ಕೂ ಕೇರ್ ಮಾಡದ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಮುಖಂಡರು ತಾವು ಕಾಂಗ್ರೆಸ್‍ನ ಅಸ್ತಿತ್ವಕ್ಕಾಗಿ ಸುಮ ಲತಾ ಅಂಬರೀಶ್ ಪರವಾಗಿ ಕಾಂಗ್ರೆಸ್ ಬಾವುಟ ಹಿಡಿದೇ ಪ್ರಚಾರ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.

ಇಂದು ನಾಗಮಂಗಲ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಹೆಚ್.ಟಿ.ಕೃಷ್ಣೇಗೌಡ, ಎನ್.ಜೆ.ರಾಜೇಶ್, ರಾಜ್ಯ ಸಹಕಾರ ಸಂಘದ ನಿರ್ದೇಶಕ ಬಿ.ರಾಜೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಯದುರಾಜ್, ಮಾಜಿ ನಿರ್ದೇಶಕ ದಾಸೇ ಗೌಡ, ಮುಖಂಡರಾದ ನಂದೀಶ್, ವಸಂತ್ ಮತ್ತಿತರರು ಯಾವುದೇ ಕಾರಣಕ್ಕೂ ಈ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ತಾಲೂ ಕಿನಲ್ಲಿ ಕಾಂಗ್ರೆಸ್‍ನ ಅಸ್ತಿತ್ವ ಮತ್ತು ಕಾರ್ಯಕರ್ತರ ಸ್ವಾಭಿಮಾನಕ್ಕಾಗಿ ಸುಮಲತಾ ಪರ ಪ್ರಚಾರ ಮಾಡಲು ನಿರ್ಧರಿಸಲಾಗಿದೆ. ಪಕ್ಷದ ಮುಖಂಡರು ಕೂಡ ಪಕ್ಷದ ಹಿತದೃಷ್ಟಿಯಿಂದ ಕಾರ್ಯಕರ್ತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕಳೆದ ಲೋಕಸಭಾ ಉಪ ಚುನಾವಣೆಯಲ್ಲಿ ನಾವೆಲ್ಲಾ ಮೈತ್ರಿ ಧರ್ಮ ಪಾಲಿಸಿ, ಮೈತ್ರಿ ಅಭ್ಯರ್ಥಿಯಾಗಿದ್ದ ಎಲ್.ಆರ್.ಶಿವರಾಮೇಗೌಡರ ಪರವಾಗಿ ಕೆಲಸ ಮಾಡಿದ್ದೇವೆ. ಆದರೆ ಅವರು ಗೆದ್ದ ನಂತರ ಅವರಾಗಲೀ ಅಥವಾ ತಾಲೂಕಿನ ಯಾವುದೇ ಜೆಡಿಎಸ್ ನಾಯಕರಾಗಲೀ ಮೈತ್ರಿ ಧರ್ಮ ಪಾಲಿಸುವ ಪ್ರಯತ್ನವನ್ನೇ ಮಾಡಿಲ್ಲ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದರೂ, ತಾಲೂಕಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಅವರ ವಿರುದ್ಧ ಕೇಸ್‍ಗಳನ್ನು ಹಾಕಿಸಲಾಗುತ್ತಿದೆ. ವರ್ಗಾವಣೆ, ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ, ಸರ್ಕಾರದ ನಾಮ ನಿರ್ದೇಶನಗಳು ಎಲ್ಲವೂ ಜೆಡಿಎಸ್ ಪಾಲಾಗುತ್ತಿವೆ. ಮೈತ್ರಿ ಸರ್ಕಾರದ ಕನಿಷ್ಠ ಪ್ರಜ್ಞೆಯೂ ಇಲ್ಲದ ಜೆಡಿಎಸ್ ಮುಖಂಡರಿಗೆ ಕಾಂಗ್ರೆಸ್‍ನವರ ಬೆಂಬಲ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಯಾವುದೇ ಕಾರಣಕ್ಕೂ ಜೆಡಿಎಸ್‍ಗೆ ಬೆಂಬಲ ಕೊಡಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಮೈತ್ರಿ ಧರ್ಮದ ಹೆಸರಿನಲ್ಲಿ ಜೆಡಿಎಸ್‍ಗೆ ಬೆಂಬಲ ನೀಡಿದರೆ ಅದು ಕಾಂಗ್ರೆಸ್ಸಿನ ವರ್ಚಸ್ಸಿಗೆ ಕುತ್ತು ತರುತ್ತದೆ ಎಂದೂ ಕೂಡ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಅವರು ಪ್ರಬುದ್ಧರಾಗಿದ್ದು, ಲೋಕಸಭೆಯಲ್ಲಿ ಕುಳಿತುಕೊಳ್ಳಲು ಸೂಕ್ತ ಅಭ್ಯರ್ಥಿಯಾ ಗಲಿದ್ದಾರೆ. ಕಾಂಗ್ರೆಸ್ ಬಾವುಟ ಹಿಡಿದೇ ಅವರ ಪರವಾಗಿ ಮತ ಕೇಳುತ್ತೇವೆ. ಈ ವಿಷಯದಲ್ಲಿ ಯಾವುದೇ ಬೆದರಿಕೆಗೂ ನಾವು ಬಗ್ಗುವುದಿಲ್ಲ ಎಂದು ಘೋಷಿಸಿದರು.

ಸುಮಲತಾ ಅವರಿಗೆ ದಿನೇ ದಿನೆ ಬೆಂಬಲ ಹೆಚ್ಚುತ್ತಿರುವುದನ್ನು ಕಂಡು ಹತಾಶರಾಗಿ ರುವ ಸಂಸದ ಶಿವರಾಮೇಗೌಡರು, ಒಂದು ಹೆಣ್ಣು ಮಗಳು ಎಂಬುದನ್ನು ನೋಡದೆ ಮನ ಬಂದಂತೆ ಮಾತನಾಡುತ್ತಿದ್ದಾರೆ. ಜಾತಿ-ಜಾತಿಗಳ ನಡುವೆ ವೈಷಮ್ಯ ತರುವ ಕೆಲಸ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಒಕ್ಕಲಿಗ ಸಮುದಾಯ ಸುಮಲತಾ ಅವರ ಪರವಾಗಿಯೇ ಮತ ನೀಡುತ್ತದೆ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.

Translate »