`ಗೆಳತಿ’ ಬದಲು ಈಗ ಸೇವೆಗೆ ಸಜ್ಜಾಗಿದೆ   `ಸಖಿ ಒನ್ ಸ್ಟಾಪ್ ಸೆಂಟರ್’
ಮೈಸೂರು

`ಗೆಳತಿ’ ಬದಲು ಈಗ ಸೇವೆಗೆ ಸಜ್ಜಾಗಿದೆ  `ಸಖಿ ಒನ್ ಸ್ಟಾಪ್ ಸೆಂಟರ್’

December 1, 2019

ಮೈಸೂರು, ನ.30- ದೌರ್ಜನ್ಯಕ್ಕೆ ಒಳಗಾದ ಮಹಿಳೆ ಯರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಪೊಲೀಸ್ ನೆರವು, ಸಮಾಲೋಚನೆ ಮುಂತಾದ ಸೇವೆಗಳನ್ನು ಒಂದೇ ಸೂರಿನಡಿ ಒದಗಿ ಸುವ ಉದ್ದೇಶದ `ಸಖಿ- ಒನ್ ಸ್ಟಾಪ್ ಸೆಂಟರ್’ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಒಂದು ತಿಂಗಳಿಂದ ಕಾರ್ಯ ಆರಂಭಿಸಿದೆ.

ಈ ಹಿಂದೆ `ಗೆಳತಿ’ ವಿಶೇಷ ಚಿಕಿತ್ಸಾ ಘಟಕ’ವನ್ನೇ ಒಂದಷ್ಟು ಮಾರ್ಪಡಿಸಿ `ಸಖಿ-ಒನ್ ಸ್ಟಾಪ್ ಸೆಂಟರ್’ ಹೆಸರಿನಲ್ಲಿ ಕಳೆದ ನ.2ರಂದು ಚೆಲುವಾಂಬ ಆಸ್ಪತ್ರೆಯ 2ನೇ ಮಹಡಿಯಲ್ಲಿ ತೆರೆಯಲಾಗಿದೆ. ನುರಿತ ಆಪ್ತ ಸಮಾಲೋಚಕರು, ಪೊಲೀಸ್, ವಕೀಲ, ವೈದ್ಯ, ನರ್ಸ್, ಡಿ ಗ್ರೂಪ್ ನೌಕರ ಸೇರಿದಂತೆ ಸಿಬ್ಬಂದಿ ಘಟಕ ದಲ್ಲಿದ್ದು, ದೌರ್ಜನ್ಯಕ್ಕೆ ಒಳಗಾದ ಮಹಿಳೆ ಅಥವಾ ಮಕ್ಕಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ತಾತ್ಕಾಲಿಕ ಆಶ್ರಯ, ಪೊಲೀಸ್ ನೆರವು, ಆಪ್ತ ಸಮಾಲೋಚನೆ ಒದಗಿಸಲಿದ್ದಾರೆ.

ಮೊದಲ ಹಂತದಲ್ಲಿ ಮೈಸೂರು ಸೇರಿದಂತೆ ಉಡುಪಿ, ಮೈಸೂರು, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಉಡುಪಿ, ಬಾಗಲಕೋಟೆಗಳಲ್ಲಿ ಒಟ್ಟು 7 ಕಡೆಗಳಲ್ಲಿ `ಸಖಿ ಒನ್ ಸ್ಟಾಪ್ ಸೆಂಟರ್’ಗಳನ್ನು ತೆರೆಯಲಾಗಿದೆ. ಇಲ್ಲಿ ದಾಖಲಾದ ಪ್ರಕರಣಗಳ ಸಂತ್ರಸ್ತರ ಮಕ್ಕಳು, ಮಹಿಳೆಯರಿಗೆ ಸೂಕ್ತ ಮತ್ತು ಅವಶ್ಯಕ ನೆರವು ನೀಡ ಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೌರ್ಜನ್ಯ ಪ್ರಕರಣಗಳ ತಡೆಗೆ ಈ ಕಾಯ್ದೆ ಜಾರಿಗೊಳಿಸಿದ್ದು, ಇದಕ್ಕೆ ವ್ಯಾಪಕ ಪ್ರಚಾರ ನೀಡುವ ನಿಟ್ಟಿನಲ್ಲಿ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ವಹಿಸಿದೆ.

`ಸಖಿ ಒನ್ ಸ್ಟಾಪ್ ಸೆಂಟರ್’ ಹಿಂಸಾಚಾರದಿಂದ ಬಳಲುತ್ತಿರುವ ಮಹಿಳೆಯರು, ಖಾಸಗಿ ಮತ್ತು ಸಾರ್ವ ಜನಿಕ ಸ್ಥಳಗಳಲ್ಲಿ, ಕುಟುಂಬ, ಸಮುದಾಯ ಮತ್ತು ಕೆಲಸದ ಸ್ಥಳದಲ್ಲಿ ದೈಹಿಕ ಮತ್ತು ಮಾನಸಿಕ ದೌರ್ಜ ನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ನೆರವಾಗಲಿದೆ. ವÀಯಸ್ಸು, ವರ್ಗ, ಜಾತಿ, ಶಿಕ್ಷಣದ ಸ್ಥಿತಿ, ವೈವಾಹಿಕ ಸ್ಥಿತಿ, ಜನಾಂಗ ಮತ್ತು ಸಂಸ್ಕೃತಿಯನ್ನು ಲೆಕ್ಕಿಸದೆ ದೈಹಿಕ, ಲೈಂಗಿಕ, ಭಾವನಾತ್ಮಕ, ಮಾನಸಿಕ ಮತ್ತು ಆರ್ಥಿಕ ಕಿರುಕುಳ  ಎದುರಿಸುತ್ತಿರುವ ನೊಂದ ಮಹಿಳೆಯರಿಗೆ ಸಹಾಯ ಮತ್ತು ಪರಿಹಾರಕ್ಕೆ ಇದು ಅನುಕೂಲವಾಗಲಿದೆ. ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸೆ, ಸಾಗಾಣಿಕೆ, ಗೌರವಕ್ಕೆ ಚ್ಯುತಿ ತರುವಂತೆ ಅಪರಾಧಗಳು, ಆಸಿಡ್ ದಾಳಿ ಇನ್ನಿತರ ಯಾವುದೇ ದಾಳಿಗೆ ಒಳಗಾದ ಮಹಿಳೆಯರಿಗೆ ಈ ವಿಶೇಷ ಸೇವೆ ಒದಗಿಸಲಾಗುತ್ತದೆ. ಈ ಘಟಕಕ್ಕೆ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಂತೆಯೇ ಮೊದಲಿಗೆ ಅವಶ್ಯ ವೈದ್ಯಕೀಯ ಚಿಕಿತ್ಸೆ ನೀಡಿ, ಆಪ್ತ ಸಮಾಲೋಚನೆ ಮೂಲಕ ಮಹಿಳೆ ಮತ್ತು ಮಕ್ಕಳಲ್ಲಿ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ಬಳಿಕ ಪೊಲೀಸ್ ಮತ್ತು ಕಾನೂನು ನೆರವು ನೀಡಲಾಗುತ್ತದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರು ಸೇರಿದಂತೆ ಎಲ್ಲಾ ಮಹಿಳೆಯರಿಗೂ ಇಲ್ಲಿ ರಕ್ಷಣೆ ದೊರೆ ಯುತ್ತದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿ ಯರಿಗಾಗಿ, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ 2000 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 ರ ಅಡಿಯಲ್ಲಿ ಸ್ಥಾಪಿಸಲಾದ ಸಂಸ್ಥೆಗಳು ಮತ್ತು ಅಧಿಕಾರಿಗಳನ್ನು ಸಖಿ ಒನ್ ಸ್ಟಾಪ್ ಸೆಂಟರ್‍ನೊಂದಿಗೆ ಸಂಪರ್ಕಿಸಲಾಗಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ:  ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ `ಸಖಿ ಒನ್ ಸ್ಟಾಪ್ ಸೆಂಟರ್’ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು, ಮುಖ್ಯ ವೈದ್ಯಾ ಧಿಕಾರಿ ಇನ್ನಿತರರು ಸದಸ್ಯರಾಗಿರುತ್ತಾರೆ.

 

ರಾಜಕುಮಾರ್ ಭಾವಸಾರ್

 

Translate »