ವೇತನ ವಿಳಂಬ: ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು
ಚಾಮರಾಜನಗರ

ವೇತನ ವಿಳಂಬ: ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು

July 17, 2018

ಗುಂಡ್ಲುಪೇಟೆ:  ಎರಡು ತಿಂಗಳಿನಿಂದ ವೇತನ ಪಾವತಿಯಾಗದಿರುವುದನ್ನು ವಿರೋಧಿಸಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಸಿದರು.

ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕರೆಯ ಮೇರೆಗೆ ತಾಲೂಕಿನ ಎಲ್ಲಾ ಶಾಲೆಗಳ ಶಿಕ್ಷಕರೂ ತಮ್ಮ ತೋಳುಗಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿ ದರು. ಎರಡು ತಿಂಗಳ ವೇತನ ದೊರಕದೆ ಶಿಕ್ಷಕರಿಗೆ ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ಆರೋಪಿಸಿರುವ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದರು. ಕಳೆದ ಎರಡು ತಿಂಗಳಿನಿಂದ ವೇತನ ಪಾವತಿಯಾಗಿಲ್ಲವಾದ್ದರಿಂದ ಜೀವನ ನಿರ್ವಹಣೆಗೆ ಸಾಲಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬ್ಯಾಂಕಿನಿಂದ ಪಡೆದ ಸಾಲವನ್ನು ಕಟ್ಟಲಾಗದೆ ಸುಸ್ತಿದಾರರಾಗಿ ಬಡ್ಡಿಕಟ್ಟಬೇಕಾಗಿದೆ. ತಕ್ಷಣವೇ ಎರಡು ತಿಂಗಳ ವೇತನವನ್ನು ಪಾವತಿ ಮಾಡಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ವೇತನ ವಿಳಂಬಕ್ಕೆ ಕಾರಣರಾದ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳು ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಈ ಕೂಡಲೇ ಸಂಬಳ ಪಾವತಿಗೆ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಿಕ್ಷಕರ ಸಂಘ ಸ್ಪಷ್ಟಪಡಿಸಿದೆ.

Translate »