ಮೈಸೂರು ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‍ಕಿನ್ ವೆಂಡಿಂಗ್ ಮೆಷಿನ್ ಸೌಲಭ್ಯ
ಮೈಸೂರು

ಮೈಸೂರು ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್‍ಕಿನ್ ವೆಂಡಿಂಗ್ ಮೆಷಿನ್ ಸೌಲಭ್ಯ

February 4, 2020

ಮೈಸೂರು, ಫೆ. 3(ಆರ್‍ಕೆ)- ಸ್ವಚ್ಛ ಮೈಸೂರು ಬಿರುದಿಗಾಗಿ ಮೈಸೂರು ಮಹಾನಗರ ಪಾಲಿಕೆ ಪ್ರಯತ್ನಿಸುತ್ತಿರು ವಾಗಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ)ಯೂ ಸಹ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿದೆ.

ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂ ತರ ವಿಭಾಗವು ಮೈಸೂರಿನ ಸಬರ್ಬನ್ ಬಸ್ ನಿಲ್ದಾಣದಲ್ಲಿರುವ ಮಹಿಳೆಯರ ಶೌಚಾಲಯದಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್ ವೆಂಡಿಂಗ್ ಮೆಷಿನ್ ಮತ್ತು ನ್ಯಾಪ್‍ಕಿನ್ ಬರ್ನಿಂಗ್ ಮೆಷಿನ್ ಅಳವಡಿಸಿದೆ.

ಮಹಿಳೆಯರು ಆ ಉಪಕರಣದಲ್ಲಿ 5 ರೂ. ನಾಣ್ಯವನ್ನು ಹಾಕಿ ಬಟನ್ ಪ್ರೆಸ್ ಮಾಡಿದರೆ 1 ಬಿಳಿ ಬಣ್ಣದ ನ್ಯಾಪ್‍ಕಿನ್ ಹೊರ ಬರುತ್ತದೆ. ಅದನ್ನು ತೆಗೆದು ಕೊಂಡು ಶೌಚಾಲಯ ಬಳಸಿದ ನಂತರ ಹೊರ ಬಂದು ಅಲ್ಲಿನ ಡಸ್ಟ್‍ಬಿನ್‍ಗೆ ಬಳಸಿದ ನ್ಯಾಪ್‍ಕಿನ್ ಅನ್ನು ಹಾಕಿ ಮಹಿಳೆಯರು ಹೊರಬರುತ್ತಾರೆ.

ಹಾಗೆ ಡಸ್ಟ್‍ಬಿನ್‍ನಲ್ಲಿ ಶೇಖರಣೆ ಯಾದ ನ್ಯಾಪ್‍ಕಿನ್‍ಗಳನ್ನು ಅಲ್ಲಿಯೇ ಅಳವಡಿಸಿರುವ ಬರ್ನಿಂಗ್ ಮೆಷಿನ್‍ಗೆ ಹಾಕಿ ಸ್ವಚ್ಛತಾ ಸಿಬ್ಬಂದಿ ಎಲೆಕ್ಟ್ರಿಕಲ್ ಬರ್ನರ್ ನಿಂದ ಸುಡುವರು. ಹೊಗೆ ಪೈಪ್ ಮೂಲಕ ಹೊರ ಹೋಗಿ ಬೂದಿ ಮಾತ್ರ ಬಾಕ್ಸ್‍ನಲ್ಲಿ ಶೇಖರಣೆಯಾಗುತ್ತದೆ. ತದನಂತರ ಅದನ್ನು ಸಿಬ್ಬಂದಿ ಹೊರ ಹಾಕುವರು.

ಕಳೆದ 15 ದಿನಗಳ ಹಿಂದೆ ಸ್ಯಾನಿಟರಿ ನ್ಯಾಪ್‍ಕಿನ್ ನೀಡುವ ಮೆಷಿನ್ ಮತ್ತು ಬರ್ನಿಂಗ್ ಮೆಷಿನ್ ಅಳವಡಿಸಿರುವ ಸಾರಿಗೆ ಸಂಸ್ಥೆಯು `ಈ ವ್ಯವಸ್ಥೆ ಲಭ್ಯವಿದ್ದು, ಬಳಸಿ ಕೊಳ್ಳಿ’ ಎಂದು ಶೌಚಾಲಯದ ಮುಂದೆ ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಮಾಹಿತಿ ಫಲಕವನ್ನು ಅಳವಡಿಸಿದೆ. ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಪ್‍ಕಿನ್‍ಗಳನ್ನು ಬಳಸುತ್ತಿದ್ದಾರೆ.

Translate »