ಮೈಸೂರು: ಎಸ್ಸಿ-ಎಸ್ಟಿ ನೌಕರರ ಮುಂಬಡ್ತಿ ಮೀಸಲಾತಿ ರಕ್ಷಣಾ ಮಸೂದೆ 2017ರ ಕಾಯ್ದೆಯನ್ನು ಮರು ಸ್ಥಾಪಿಸಲು ಮಂಗಳವಾರ ಹಾಜರಿದ್ದ ರಾಜ್ಯ ಸರ್ಕಾರದ ಪರ ವಕೀಲರ ಮನವಿಗೆ ಸುಪ್ರೀಂಕೋರ್ಟ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗಗಳ ನೌಕರರ ಸಂಘದ(ಅಹಿಂಸಾ) ಅಧ್ಯಕ್ಷ ಎಂ.ನಾಗರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದರು.
ಸುಪ್ರೀಂಕೋರ್ಟ್‍ನಲ್ಲಿ ಮಂಗಳವಾರ ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರದ ಪರ ಹಾಜರಿದ್ದ ಬಸವ ಪ್ರಭು ಪಾಟೀಲ್ ಅವರು, ಎಸ್ಸಿ-ಎಸ್ಟಿ ನೌಕರರ ಬಡ್ತಿ ಮೀಸಲು ರಕ್ಷಣಾ ಕಾಯ್ದೆ-2017ರ ಅನುಷ್ಠಾನಗೊಳಿಸಲು ಸೂಚನೆ ನೀಡುವಂತೆ ಸುಪ್ರೀಂಕೋರ್ಟ್ ಕೋರಿದರು. ಆದರೆ, ಅಹಿಂಸಾ ನೌಕರರ ಪರ ಹಾಜರಿದ್ದ ವಕೀಲ ರಾಜೀವ್ ಧವನ್, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಬಂಧ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಡಿ.ವೈ.ಚಂದ್ರ ಚೂಡ್ ಅವರ ಪೀಠ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದಿನ ದಿನಾಂಕಕ್ಕೆ ವಿಚಾರಣೆ ಮುಂದೂಡಿದೆ ಎಂದರು.
ಬಿ.ಕೆ.ಪವಿತ್ರ ಪ್ರಕರಣದಲ್ಲಿ ಎಸ್ಸಿ-ಎಸ್ಟಿ ಮಂಬಡ್ತಿ ಮೀಸಲು ಕಾಯ್ದೆಯನ್ನು ರದ್ದುಗೊಳಿಸಿ, 2017ರ ಫೆ.9 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ, ರಾಜ್ಯ ಸರ್ಕಾರ ಮತ್ತೆ ಎಸ್ಸಿ-ಎಸ್ಟಿ ನೌಕರರ ಮುಂಬಡ್ತಿ ಮೀಸಲು ಕಾಪಾಡಲು ಹೊಸ ಕಾಯ್ದೆ ರಚಿಸಿ, ಉಭಯ ಸದನಗಳ ಒಪ್ಪಿಗೆ ಪಡೆದು ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದಿತ್ತು. ಆದರೆ, ಅಹಿಂಸಾ ಸಂಘಟನೆಯ ಅಧ್ಯಕ್ಷ ಎಂ.ನಾಗರಾಜು, ರಾಜ್ಯ ಸರ್ಕಾರದ ತೀರ್ಮಾನವನ್ನು ವಿರೋಧಿಸಿ, ಸುಪ್ರೀಂಕೋರ್ಟ್‍ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಆದರೆ, ರಾಜ್ಯ ಸರ್ಕಾರ ಪರಿಶೀಲನಾ ಅರ್ಜಿ ಅಂತಿಮ ಆದೇಶ ಬರುವವರೆಗೂ ನೂತನ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂದು ಅಂದು ಸರ್ಕಾರದ ಪರವಾಗಿ ಹಾಜರಿದ್ದ ವಕೀಲರು ಕೋರ್ಟ್‍ಗೆ ವಾಗ್ದಾನ ಮಾಡಿದ್ದರು. ಈ ಸಂಬಂಧ ಅಹಿಂಸಾ ನೌಕರರ ಸಂಘದ ಪದಾಧಿಕಾರಿಗಳು, ಬುಧವಾರ ಮುಖ್ಯ ಕಾರ್ಯದರ್ಶಿಗಳನ್ನು ಭೇಟೆಯಾಗಿ ಮುಂಬಡ್ತಿ ಕಾಯ್ದೆಯನ್ನು ಸುಪ್ರೀಂಕೋರ್ಟ್ ಅಂತಿಮ ಆದೇಶದವರಿಗೆ ಜಾರಿಗೊಳಿಸದಂತೆ ಮನವಿ ಮಾಡಿದ್ದಾರೆ.