ನಿಷ್ಪಕ್ಷಪಾತ ತನಿಖೆಗೆ ಎಸ್‍ಡಿಪಿಐ ಆಗ್ರಹ
ಮೈಸೂರು

ನಿಷ್ಪಕ್ಷಪಾತ ತನಿಖೆಗೆ ಎಸ್‍ಡಿಪಿಐ ಆಗ್ರಹ

November 24, 2019

ಮೈಸೂರು,ನ.23(ಪಿಎಂ)-ಎನ್‍ಆರ್ ಕ್ಷೇತ್ರದ ಶಾಸಕ ತನ್ವೀರ್‍ಸೇಠ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಸಂಬಂಧ ನಿಷ್ಪಕ್ಷಪಾತ ತನಿಖೆಯಾಗಬೇಕು. ಆದರೆ ಈ ಘಟನೆ ಯನ್ನು ಎಸ್‍ಡಿಪಿಐ ಪಕ್ಷದೊಂದಿಗೆ ತಳುಕು ಹಾಕಿ ಲಾಭ ಪಡೆಯುವ ಷಡ್ಯಂತರ ನಡೆಯುತ್ತಿದೆ ಎಂದು ಎಸ್‍ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‍ಡಿಪಿಐಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಆದರೆ ಸ್ಥಾಪಿತ ಹಿತಾಸಕ್ತಿಗಳು ಈ ಪ್ರಕರಣದ ಸತ್ಯವನ್ನು ಮುಚ್ಚಿಟ್ಟು ಲಾಭ ಪಡೆಯುವ ಹುನ್ನಾರ ನಡೆಸುತ್ತಿವೆ. ಪೊಲೀಸರು ಯಾವುದೇ ಅಧಿಕೃತ ಹೇಳಿಕೆ ಹಾಗೂ ವರದಿ ನೀಡದಿದ್ದರೂ ಕೆಲ ಮಾಧ್ಯಮ ಗಳು ಎಸ್‍ಡಿಪಿಐ ಜೊತೆಗೆ ಪ್ರಕರಣ ತಳುಕು ಹಾಕುವ ಪ್ರಯತ್ನದಲ್ಲಿ ತೊಡಗಿವೆ. ಅಲ್ಲದೆ, ಘಟನೆಗೆ ಸಂಬಂಧಿಸಿದಂತೆ ಈವರೆಗಿನ ವಿದ್ಯಮಾನಗಳನ್ನು ಗಮನಿಸಿದರೆ ತನಿಖಾ ಹಂತದ ಕೆಲವು ನಡೆಗಳು ಹಲವು ಸಂಶಯ ಮೂಡಿಸಿವೆ ಎಂದರು.

ಪ್ರಕರಣ ಸಂಬಂಧ ಐವರು ನ್ಯಾಯಾಂಗ ಬಂಧನ ದಲ್ಲಿದ್ದು, ಇವರನ್ನು ಭೇಟಿ ಮಾಡಲು ಅವರ ಕುಟುಂಬ ದವರಿಗೆ ಹಾಗೂ ವಕೀಲರಿಗೆ ಅವಕಾಶ ನಿರಾಕರಿಸಲಾಗಿದೆ. ಇದು ಕಾನೂನು ಉಲ್ಲಂಘನೆ ಎಂದು ಜೈಲಿನ ಅಧಿಕಾರಿ ಗಳಿಗೆ ವಕೀಲರು ಹೇಳಿದರೆ, `ನಮಗೆ ಒತ್ತಡವಿದೆ, ನಮ್ಮನ್ನು ಸ್ವಲ್ಪ ಅರ್ಥ ಮಾಡಿಕೊಳ್ಳಿ’ ಎಂಬ ಉತ್ತರ ಬಂದಿದೆ. ಈ ಒತ್ತಡದ ಹಿಂದೆ ಯಾವ ಕಾಣದ ಶಕ್ತಿ ಅಡಗಿದೆ ಎಂಬುದು ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.

ಘಟನೆ ನಡೆದು 6 ದಿನಗಳು ಕಳೆದು ಐವರು ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಸಂಬಂಧ ನಾನಾ ರೀತಿ ಯಲ್ಲಿ ಊಹಾಪೋಹಗಳು ಕೇಳಿ ಬರುತ್ತಿದ್ದರೂ ಪೊಲೀ ಸರು ಅಧಿಕೃತ ಹೇಳಿಕೆ ಪ್ರಕಟಿಸದೇ ಮೌನಕ್ಕೆ ಶರಣಾಗಿರು ವುದು ಏಕೆ? ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಎಸ್‍ಡಿ ಪಿಐ ಹುಣಸೂರು ಹಾಗೂ ಶಿವಾಜಿನಗರ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಜೊತೆಗೆ ರಾಜ್ಯದಲ್ಲಿ 3ನೇ ಪರ್ಯಾಯ ಪಕ್ಷವಾಗಿ ಉದಯಿಸುತ್ತಿದೆ. ಹೀಗಾಗಿ ಈ ಘಟನೆಯನ್ನು ನಮ್ಮ ಪಕ್ಷದೊಂದಿಗೆ ತಳುಕು ಹಾಕಿ ಅಪಪ್ರಚಾರ ಮಾಡುವ ಮೂಲಕ ನಮಗೆ ಜನಬೆಂಬಲ ದೊರಕದಂತೆ ಮಾಡುವ ಉದ್ದೇಶವೂ ಇಲ್ಲಿ ಕಾಣುತ್ತಿದೆ ಎಂದು ದೂರಿದರು.

ಈ ಹಲ್ಲೆ ಪ್ರಕರಣದಲ್ಲಿ ನೈಜ ಆರೋಪಿಗಳಿಗೆ ಶಿಕ್ಷೆಯಾಗು ವಂತೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸಬಾರದು. ಪ್ರಕ ರಣದ ಸಂಬಂಧದ ಎಲ್ಲಾ ಬೆಳವಣಿಗೆಯನ್ನು ಪಕ್ಷ ಗಂಭೀರ ವಾಗಿ ಪರಿಗಣಿಸಿದ್ದು, ಷಡ್ಯಂತರ ವಿರುದ್ಧ ಸಂಘಟಿತ ಕಾನೂನು ಹೋರಾಟ ನಡೆಸಲಿದೆ ಎಂದರು.

ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಹಲ್ಲೆ ಪ್ರಕರಣ ತನಿಖೆಯ ಹಂತದಲ್ಲಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರು ವವರು ಎಚ್ಚರಿಕೆಯಿಂದ ಮಾತನಾಡಬೇಕು. ತಮಗನಿಸಿ ದಂತೆ ಹೇಳಿಕೆಗಳನ್ನು ನೀಡಬಾರದು. ಹಲ್ಲೆ ನಡೆಸಿದ ಫರಾನ್ ಪಾಷಾ ಮೂರು ಪಕ್ಷಗಳಲ್ಲಿ ಕೆಲಸ ಮಾಡಿದ್ದಾನೆ. ಬಿಜೆಪಿ ಪಕ್ಷದ ಒತ್ತಡಕ್ಕೆ ಮಣಿದು ನಮ್ಮ ಪಕ್ಷವನ್ನು ಈ ಪ್ರಕ ರಣದಲ್ಲಿ ಸಿಲುಕಿಸಲು ಮುಂದಾದರೆ ಉಗ್ರ ಹೋರಾಟ ಮಾಡುತ್ತೇವೆ. ಅಗತ್ಯ ಬಿದ್ದರೆ ಜೈಲು ಭರೋ ಚಳುವಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಕುಮಾರಸ್ವಾಮಿ, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ಗೋಷ್ಠಿಯಲ್ಲಿದ್ದರು.

Translate »