ಮೈಸೂರು, ಆ.24- ಸ್ವಯಂ ಉದ್ಯೋಗ ಉತ್ತಮ ಜೀವನಕ್ಕೆ ರಹದಾರಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಡಾ.ಬಿ.ಚಂದ್ರ ಶೇಖರ್, ಯುವ ಸಮುದಾಯಕ್ಕೆ ಕಿವಿಮಾತು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ 50ನೇ ವರ್ಷದ ಎನ್‍ಎಸ್‍ಎಸ್ ಆಚರಣೆ ಅಂಗವಾಗಿ ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ರುಡ್‍ಸೆಟ್ ಸಂಸ್ಥೆ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ `ಸ್ವ-ಉದ್ಯೋಗ ಮತ್ತು ಉದ್ಯಮ ಶೀಲತೆ’ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಬೇಜವಾಬ್ದಾರಿ ಯುವಕನೊಬ್ಬನ ಪರಿವರ್ತನೆ, ಸೋಮಾರಿಯಾಗಿದ್ದ ಆತ, ಶ್ರದ್ಧೆ, ಆಸಕ್ತಿಯಿಂದ ದುಡಿದು 3 ಅಂಗಡಿಗಳ ಮಾಲೀಕನಾಗಿರುವ ಉದಾಹರಣೆಯೊಂದಿಗೆ ಸ್ವಯಂ ಉದ್ಯೋಗದ ಮಹತ್ವವನ್ನು ಮನದಟ್ಟು ಮಾಡಿಕೊಟ್ಟರಲ್ಲದೆ, ಸ್ವಉದ್ಯೋಗದಲ್ಲಿ ಉನ್ನತ ಮಟ್ಟಕ್ಕೇರಲು ಅಗತ್ಯ ಕೌಶಲ್ಯ ಬೇಕೆಂದು ಸಲಹೆ ನೀಡಿದರು.
ರುಡ್‍ಸೆಟ್ ಸಂಸ್ಥೆ ನಿರ್ದೇಶಕ ಎನ್.ಜಿ.ಲಕ್ಷ್ಮಣ್‍ರಾವ್, ಹಿರಿಯ ಪ್ರಾಧ್ಯಾಪಕ ವಿ.ರವೀಂದ್ರ ಅವರು, ಸ್ವ-ಉದ್ಯೋಗ ಹಾಗೂ ಉದ್ಯಮಶೀಲತೆ ಕುರಿತ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ವೆಂಕಟರಾಮು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆದ ಶೈಕ್ಷಣಿಕ ಸಲಹೆಗಾರ ಡಾ.ಎಸ್.ಆರ್.ರಮೇಶ್, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಡಾ.ಎ.ಜಿ.ಧರ್ಮೇಶ್, ವೈ.ಆರ್.ರುದ್ರೇಶ್, ಕೇಶವಮೂರ್ತಿ, ರೇಷ್ಮಾ, ಕೆ.ರಾಘವೇಂದ್ರ, ಎನ್‍ಎಸ್‍ಎಸ್ ಸ್ವಯಂಸೇವಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.