ಮೈಸೂರು,ಆ.24(ವೈಡಿಎಸ್)- ಕೆಆರ್‍ಎಸ್ ಅಣೆಕಟ್ಟೆಯ ಹಿತದೃಷ್ಟಿಯಿಂದ ಅದರ ಸುತ್ತಮುತ್ತ 20 ಕಿ.ಮೀವರೆಗೆ ಶಾಶ್ವತವಾಗಿ ಎಲ್ಲಾ ರೀತಿಯ ಗಣಿಗಾರಿಕೆಯನ್ನು ನಿಷೇಧಿಸ ಬೇಕು ಎಂದು ಮೈಸೂರಿನ ಇಂಜಿನಿಯರುಗಳ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಜೆಎಲ್‍ಬಿ ರಸ್ತೆಯ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ ನೇತೃತ್ವದಲ್ಲಿ ನಡೆದ ಇಂಜಿನಿಯರು ಗಳು ಹಾಗೂ ರೈತ ಮುಖಂಡರೊಂದಿಗಿನ ಸಭೆಯಲ್ಲಿ, ಕೆಆರ್‍ಎಸ್ ಅಣೆಕಟ್ಟೆ ಸುತ್ತಮುತ್ತ ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಸುತ್ತಿದ್ದು, ಇದರಿಂದ ಅಣೆಕಟ್ಟು ಎಷ್ಟು ಸುರಕ್ಷಿತವಾಗಿದೆ ಎಂಬುದರ ಬಗ್ಗೆ ಚರ್ಚಿಸಿ, ತಾಂತ್ರಿಕ ವರದಿ ಯನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಿತು.
ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕೆಆರ್‍ಎಸ್ ಅಣೆಕಟ್ಟೆಯ ಸುತ್ತಮುತ್ತ ಸುಮಾರು 20 ಕಿ.ಮೀವರೆಗೆ ಎಲ್ಲಾ ರೀತಿಯ ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ಶಿಫಾರಸು ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಮಂಡ್ಯ ಜಿಲ್ಲಾಧಿಕಾರಿ ಹಾಗೂ ಕೇಂದ್ರ ಜಲಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನಿಯರ್‍ಗೆ ಕಳುಹಿಸಲು ತೀರ್ಮಾನಿಸಿತು. ಇಂಜಿನಿಯರುಗಳ ಸಂಸ್ಥೆಯ ಅಧ್ಯಕ್ಷ ಡಾ.ಆರ್.ಸುರೇಶ್, ಕಾರ್ಯದರ್ಶಿ ದಿನೇಶ್ ಕುಮಾರ್, ರಾಜಶೇಖರ ಗೌಡ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಸೇರಿದಂತೆ ಹಲವು ಇಂಜಿನಿಯರ್‍ಗಳು ಉಪಸ್ಥಿತರಿದ್ದರು