ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿ 59 ಯೂನಿಟ್ಸ್ ರಕ್ತ ಸಂಗ್ರಹ
ಚಾಮರಾಜನಗರ

ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿ 59 ಯೂನಿಟ್ಸ್ ರಕ್ತ ಸಂಗ್ರಹ

June 16, 2018

ಚಾಮರಾಜನಗರ: ನಗರದ ಪೇಟೆ ಪ್ರೈಮರಿ ಶಾಲೆಯ ರಂಗ ಮಂದಿರ ಆವರಣದಲ್ಲಿ ವಿಶ್ವ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋ ಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 59 ಯೂನಿಟ್ಸ್ ರಕ್ತ ಸಂಗ್ರಹ ಆಗುವ ಮೂಲಕ ಶಿಬಿರ ಯಶಸ್ವಿಯಾಯಿತು.

ನಗರದ ರೋಟರಿ ಸಿಲ್ಕ್ ಸಿಟಿ, ವೈದ್ಯ ಕೀಯ ವಿಜ್ಞಾನಗಳ ಸಂಸ್ಥೆ, ಬೋಧನಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಪ್ರಾಥಮಿಕ ಶಾಲಾ ಶಿಕ್ಷಕರ ಸ್ನೇಹ ಬಳಗ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಆಶ್ರಯದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರಕ್ಕೆ ಸ್ವಯಂ ಪ್ರೇರಿತರಾಗಿ ಆಗಮಿ ಸಿದ ನಾಗರಿಕರು ಹಾಗೂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು, ರಕ್ತದಾನ ಮಾಡಿದರು. ಬೆಳಿಗ್ಗೆಯಿಂದ ಮಧ್ಯಾಹ್ನದ ವರಗೆ ನಡೆದ ಶಿಬಿರದಲ್ಲಿ 59 ಯೂನಿಟ್ಸ್ ರಕ್ತ ಸಂಗ್ರಹವಾಗಿದೆ. ಇದಲ್ಲದೇ ಶಿಬಿರದಲ್ಲಿ ಮರಣದ ನಂತರ ದೇಹದಾನಕ್ಕೆ ಒಪ್ಪಿಗೆ ಸೂಚಿಸಿ ಹಲವು ಮಂದಿ ಪತ್ರಕ್ಕೆ ಸಹಿ ಹಾಕಿ ದರು ಎಂದು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಅಧಿಕಾರಿ ಹೆಚ್.ಆರ್. ಸುಜಾತ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಇದಕ್ಕೂ ಮುನ್ನ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಜಿಪಂ ಸಿಇಓ ಡಾ. ಕೆ. ಹರೀಶ್‍ಕುಮಾರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ಆರೋಗ್ಯ ಹದಗೆಡುತ್ತದೆ ಎಂಬ ತಪ್ಪು ಕಲ್ಪನೆ ಹಲವು ಮಂದಿಯಲ್ಲಿ ಇದೆ. ಹೀಗಾಗಿ ಅವರೆಲ್ಲಾ ರಕ್ತದಾನ ಮಾಡಲು ಮುಂದಾಗುತ್ತಿಲ್ಲ. ಈ ತಪ್ಪು ಕಲ್ಪನೆ ಹೋಗ ಬೇಕು. ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು.

ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ರಾಜೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಹೆಚ್. ಪ್ರಸಾದ್, ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ. ರಘುರಾಮ್, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಸುಜಾತ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವೈದ್ಯಾಧಿಕಾರಿ ಡಾ. ಮಹದೇವ್, ಡಾ. ಹರೀಶ್, ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ರಾಜು, ನಿಯೋಜಿತ ಅಧ್ಯಕ್ಷ ಅಜಯ್, ಆಲೂರು ಪ್ರದೀಪ್, ಚೇತನ್ ಹೆಗಡೆ, ಶರತ್, ಅಶೋಕ್, ಸಂತೋಷ್, ಪ್ರಾಥಮಿಕ ಶಾಲಾ ಶಿಕ್ಷಕರ ಸ್ನೇಹ ಬಳಗದ ಬಸವಣ್ಣ, ಶಿವಕುಮಾರ್, ಸಿದ್ದರಾಜು ಇತರರು ಈ ವೇಳೆ ಹಾಜರಿದ್ದರು. ಇದೇ ವೇಳೆ ಹಲವು ವರ್ಷಗಳಿಂದ ನಿರಂತರವಾಗಿ ರಕ್ತದಾನ ಮಾಡುತ್ತಿರುವ ಐವರನ್ನು ಸನ್ಮಾನಿಸಲಾಯಿತು.

Translate »