ಅಧಿಕಾರಕ್ಕಾಗಿ 30 ವರ್ಷದ ಎನ್‍ಡಿಎ ಮೈತ್ರಿ ಮುರಿದುಕೊಂಡ ಶಿವಸೇನೆ
ಮೈಸೂರು

ಅಧಿಕಾರಕ್ಕಾಗಿ 30 ವರ್ಷದ ಎನ್‍ಡಿಎ ಮೈತ್ರಿ ಮುರಿದುಕೊಂಡ ಶಿವಸೇನೆ

November 12, 2019

ಮುಂಬೈ, ನ. 11- ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 19 ದಿನ ಕಳೆದರೂ ಸರ್ಕಾರ ರಚನೆ ಕಗ್ಗಂಟಾಗಿ ಪರಿಣಮಿಸಿದ್ದು, ಬಹುತೇಕ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಲಕ್ಷಣಗಳು ಕಂಡು ಬಂದಿವೆ.

ಮಹಾರಾಷ್ಟ್ರ ಸರ್ಕಾರ ರಚನೆ ವಿಷಯದಲ್ಲಿ ಹೈಡ್ರಾಮಾವೇ ನಡೆಯುತ್ತಿದ್ದು, ಭಾನುವಾರ ಸರ್ಕಾರ ರಚನೆಗೆ ಶಿವಸೇನೆಯನ್ನು ಆಹ್ವಾನಿಸಿದ್ದ ರಾಜ್ಯಪಾಲರು, ಸೋಮವಾರ ರಾತ್ರಿ ವೇಳೆಗೆ 3ನೇ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಎನ್‍ಸಿಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದಾರೆ. ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದ ಬಿಜೆಪಿಗೆ ಸರ್ಕಾರ ರಚಿಸಲು ಶನಿವಾರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಆಹ್ವಾನಿಸಿದ್ದರು. ಆದರೆ, ತನ್ನ ಜೊತೆ ಚುನಾವಣಾ ಪೂರ್ವ ಮೈತ್ರಿ ಹೊಂದಿದ್ದ ಶಿವಸೇನೆಯ ಅಸಹಕಾರದ ಕಾರಣದಿಂದಾಗಿ ತಾನು ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲರಿಗೆ ಬಿಜೆಪಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ 2ನೇ ಅತಿ ದೊಡ್ಡ ಪಕ್ಷವಾದ ಶಿವಸೇನೆಯನ್ನು ಸರ್ಕಾರ ರಚಿಸಲು ಭಾನುವಾರ ಆಹ್ವಾನಿಸಿ, ಬಹುಮತ ಸಾಬೀತುಪಡಿಸಲು ಸೋಮವಾರ ರಾತ್ರಿ 8.30 ರವರೆಗೆ ಗಡುವು ನೀಡಿದ್ದರು. ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್ ಮತ್ತು ಎನ್‍ಸಿಪಿ ಬೆಂಬಲದೊಂದಿಗೆ ಸರ್ಕಾರ ರಚಿಸಲು ಉತ್ಸುಕವಾಗಿದ್ದ ಶಿವಸೇನಾ ಮುಖಂಡರು, ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಮತ್ತು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಸಂಪರ್ಕಿಸಿ, ಬೆಂಬಲ ಕೋರಿದರು. ಎನ್‍ಡಿಎ ಸಖ್ಯ ತೊರೆದರೆ ಮಾತ್ರ ಮೈತ್ರಿ ಎಂದು ಎನ್‍ಸಿಪಿ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಶಿವಸೇನೆಯ ಏಕೈಕ ಕೇಂದ್ರ ಸಚಿವ ಅರವಿಂದ್ ಸಾವಂತ್ ಅವರು, ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ನೀಡುವ ಮೂಲಕ ಶಿವಸೇನೆ 30 ವರ್ಷಗಳ ಬಿಜೆಪಿ ಸಖ್ಯ ತೊರೆದಿದೆ ಎಂಬ ಸುಳಿವು ನೀಡಿದರು. ಇತ್ತ ಶಿವಸೇನೆಗೆ ಬೆಂಬಲ ನೀಡುವ ವಿಚಾರವಾಗಿ ಸೋನಿಯಾಗಾಂಧಿ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡರ ಸಭೆ ನಡೆಯಿತು. ಈ ಸಭೆಯಲ್ಲಿ ಶಿವಸೇನೆಗೆ ಬೆಂಬಲ ನೀಡುವ ವಿಚಾರವಾಗಿ ಭಿನ್ನಾಭಿಪ್ರಾಯಗಳು ಕೇಳಿಬಂದವು ಎನ್ನಲಾಗಿದೆ. ಮತ್ತೊಂದೆಡೆ ಸೋನಿಯಾಗಾಂಧಿ ನೇತೃತ್ವದ ಕಾಂಗ್ರೆಸ್ ಮುಖಂಡರು ಎನ್‍ಸಿಪಿ ಮುಖಂಡರ ಜೊತೆ 2ನೇ ಸುತ್ತಿನ ಸಭೆ ನಡೆಸಿದರು. ಈ ಸಭೆಗಳ ನಂತರ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ಅವರು ಸುದ್ದಿಗಾ ರರ ಜೊತೆ ಮಾತನಾಡಿ, ‘ಮಹಾರಾಷ್ಟ್ರದಲ್ಲಿ ಪ್ರತಿಪಕ್ಷದಲ್ಲಿ ಕೂರಲು ನಮಗೆ ಜನಾದೇಶ ವಾಗಿದೆ. ಪಕ್ಷ ಆ ಕೆಲಸ ಮಾಡುತ್ತದೆ ಎಂದರಲ್ಲದೆ, ಜನರು ನೀಡಿದ ತೀರ್ಪಿನಂತೆ, ನಮ್ಮ ಹೈಕಮಾಂಡ್ ನಿರ್ಧಾರದಂತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದು ನಮ್ಮ ಸದ್ಯದ ತೀರ್ಮಾನವಾಗಿದೆ. ಮುಂದಿನ ತೀರ್ಮಾನ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ಹೇಳುವ ಮೂಲಕ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಅದೇ ವೇಳೆ ಮಂಗಳವಾರ ಎನ್‍ಸಿಪಿ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ನಂತರ ಶಿವಸೇನೆಗೆ ಬೆಂಬಲ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಎಐಸಿಸಿ ಅಧಿಕೃತ ಮಾಧ್ಯಮ ಪ್ರಕಟಣೆ ನೀಡಿತು. ಕಾಂಗ್ರೆಸ್ ಮತ್ತು ಎನ್‍ಸಿಪಿ ಬೆಂಬಲ ದೊರೆಯ ಬಹುದು ಎಂಬ ಆಶಾಭಾವನೆ ಹೊಂದಿದ್ದ ಶಿವಸೇನಾ ಮುಖಂಡರು ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಬಹುಮತ ಸಾಬೀತುಪಡಿಸಲು ತಮಗೆ ಇನ್ನೂ 2 ದಿನ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು. ಆದರೆ, ಅವರ ಮನವಿ ಯನ್ನು ರಾಜ್ಯಪಾಲರು ತಿರಸ್ಕರಿಸಿ, ಮೂರನೇ ದೊಡ್ಡ ಪಕ್ಷವಾದ ಎನ್‍ಸಿಪಿಗೆ ಸರ್ಕಾರ ರಚಿಸಲು ಆಹ್ವಾನಿಸಿ, ಬಹುಮತ ಸಾಬೀತುಪಡಿಸಲು ಮಂಗಳವಾರ ರಾತ್ರಿ 8.30ರವರೆಗೆ ಗಡುವು ನೀಡಿದ್ದಾರೆ. ರಾಜ್ಯಪಾಲರ ಆಹ್ವಾನದ ಮೇರೆಗೆ ಅವರನ್ನು ಭೇಟಿ ಮಾಡಿದ ಎನ್‍ಸಿಪಿ ಮುಖಂಡರು, ಮಂಗಳವಾರ ಕಾಂಗ್ರೆಸ್ ಜೊತೆ ಮಾತುಕತೆ ನಡೆಸಿದ ನಂತರ ಸರ್ಕಾರ ರಚಿಸುವ ಬಗ್ಗೆ ತಿಳಿಸುವುದಾಗಿ ರಾಜ್ಯಪಾಲರಿಗೆ ಹೇಳಿದ್ದಾರೆ. ಈ ಸಂಬಂಧ ಮಂಗಳ ವಾರ ಬೆಳಿಗ್ಗೆ 10 ಗಂಟೆಗೆ ಕಾಂಗ್ರೆಸ್ ಮತ್ತು ಎನ್‍ಸಿಪಿ ಮುಖಂಡರ ಸಭೆಗೆ ಸಮಯ ನಿಗದಿಪಡಿಸಲಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಸ್ತಿತ್ವಕ್ಕೆ ಬರಬೇಕಾದರೆ, ಶಿವಸೇನಾ, ಕಾಂಗ್ರೆಸ್ ಮತ್ತು ಎನ್‍ಸಿಪಿ ಒಗ್ಗೂಡಬೇಕಾದ ಅವಶ್ಯಕತೆ ಇದೆ. ಇಂದು ಶಿವಸೇನೆ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಎನ್‍ಸಿಪಿ ಬೆಂಬಲಪತ್ರ ನೀಡದಿರುವ ಸ್ಥಿತಿಯಲ್ಲಿ ನಾಳೆ ಎನ್‍ಸಿಪಿ ಸರ್ಕಾರ ರಚನೆಗೆ ಶಿವಸೇನೆ ಬೆಂಬಲ ನೀಡುವುದೇ? ಎಂಬ ಪ್ರಶ್ನೆ ಉದ್ಭವಿಸಿದೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳನ್ನು ಅವಲೋಕಿಸಿದರೆ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಬಹುದು ಎಂಬ ಲಕ್ಷಣಗಳು ಕಂಡುಬರುತ್ತಿವೆ.

Translate »