ಶಾಂತಿಯುತವಾಗಿ ನಡೆದ ಸಿದ್ಧಗಂಗಾ ಶ್ರೀಗಳ  ಅಂತಿಮ ವಿಧಿ ವಿಧಾನ: ಸಿಎಂ ಕೃತಜ್ಞತೆ
ಮೈಸೂರು

ಶಾಂತಿಯುತವಾಗಿ ನಡೆದ ಸಿದ್ಧಗಂಗಾ ಶ್ರೀಗಳ ಅಂತಿಮ ವಿಧಿ ವಿಧಾನ: ಸಿಎಂ ಕೃತಜ್ಞತೆ

January 23, 2019

ಬೆಂಗಳೂರು/ ತುಮಕೂರು: ಸಿದ್ಧಗಂಗಾ ಮಠದಲ್ಲಿ ಇಂದು ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಅಂತಿಮ ಕ್ರಿಯಾ ವಿಧಿಗಳು ಶ್ರದ್ಧಾಪೂರ್ವಕವಾಗಿ ಹಾಗೂ ಶಾಂತಿಯುತವಾಗಿ ನೆರವೇರಿದೆ.

ಲಕ್ಷಾಂತರ ಭಕ್ತರು ಶಾಂತಿಯುತವಾಗಿ ಸರತಿಯಲ್ಲಿ ಕಾದು ತ್ರಿವಿಧ ದಾಸೋಹಿಗೆ ಅಂತಿಮ ನಮನಗಳನ್ನು ಅರ್ಪಿಸಿದರು. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಜನಸಾಗರವೇ ಹರಿದು ಬಂದರೂ ಎಲ್ಲ ವಿಧಿ ವಿಧಾನಗಳು ಅಚ್ಚುಕಟ್ಟಾಗಿ ನೆರವೇರಿದವು. ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಸಿದ್ಧತೆ ನಡೆಸಲು ಶ್ರಮಿಸಿದ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್?, ಗೃಹ ಸಚಿವ ಎಂ.ಬಿ.ಪಾಟೀಲ್, ಸಚಿವ ಸಂಪುಟದ ಸಹೋದ್ಯೋಗಿಗಳು, ತುಮಕೂರು ಜಿಲ್ಲಾಡಳಿತ, ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿದ ಪೆÇಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮಠದ ಭಕ್ತರು, ಅಭಿಮಾನಿಗಳು, ವಿದ್ಯಾರ್ಥಿಗಳು ಎಲ್ಲರಿಗೂ ಮುಖ್ಯಮಂತ್ರಿಗಳು ಧನ್ಯವಾದ ಅರ್ಪಿಸಿದ್ದಾರೆ.

ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಕುಮಾರಸ್ವಾಮಿ

ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯದಿಂದ ಹಿಡಿದು ಕ್ರಿಯಾ ವಿಧಾನವರೆಗೂ ಅಚ್ಚು ಕಟ್ಟಾಗಿ ಬಂದೋಬಸ್ತ್ ಒದಗಿಸಿದ ಪೊಲೀಸ್ ಇಲಾಖೆಗೆ ಸಿಎಂ ಕುಮಾರಸ್ವಾಮಿ ಧನ್ಯವಾದ ತಿಳಿಸಿದ್ದಾರೆ. ಶ್ರೀಗಳಿಗೆ ಸರ್ಕಾರದ ಗೌರವ ವಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಕುಮಾರಸ್ವಾಮಿ, ಭಕ್ತರು ಶ್ರೀಗಳ ದರ್ಶನ ಹಾಗೂ ಅಂತಿಮ ಕ್ರಿಯಾ ವಿಧಾನವರೆಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಿ ಶಾಂತಿಯಿಂದ ನಡೆದುಕೊಂಡ ಕಾರಣ ಧನ್ಯವಾದ ತಿಳಿಸಿದರು. ಅಲ್ಲದೇ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದ ಪೆÇಲೀಸ್ ಇಲಾಖೆಯ ಕಾರ್ಯವನ್ನು ಶ್ಲಾಘಿಸಿ ಔರಾದ್ಕರ್ ವರದಿ ಜಾರಿ ಮಾಡುವುದಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.

ರಾತ್ರಿಯೆಲ್ಲಾ ಮಠದ ಎನ್‍ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ರಾತ್ರಿ ಇಡೀ ನಿಂತು ಶ್ರಮ ವಹಿಸಿದ್ದೀರಾ. ರಾಜ್ಯ ಸರ್ಕಾರ ಪೆÇಲೀಸರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಮಠದ ಆವರಣದಲ್ಲಿ ಈ ಕುರಿತು ಭರವಸೆ ನೀಡುತ್ತಿದ್ದು, ಔರಾದ್ಕರ್ ವರದಿ ಜಾರಿ ಮಾಡುವ ಕಾರ್ಯ ಮಾಡಲಾಗುತ್ತದೆ. ಅಲ್ಲದೇ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನಿಯನ್ನು ಖುದ್ದು ಭೇಟಿ ಮಾಡಿ ಶಿಪಾರಸ್ಸು ಮಾಡುತ್ತೇನೆ. ಈ ಬಗ್ಗೆ ಭಕ್ತರಿಗೆ ಭರವಸೆ ನೀಡುತ್ತೇನೆ ಎಂದು ಸಿಎಂ ತಿಳಿಸಿದರು. ಮುಂದಿನ ಸಮಯದಲ್ಲೂ ಮಠಕ್ಕೆ ಆಗಮಿಸುವ ಭಕ್ತರಿಗೆ ಸೌಲಭ್ಯ ಕಲ್ಪಿಸಿಕೊಡಲಾಗುವುದು. ನಾಡಿಗೆ ಪೆÇಲೀಸ್ ಇಲಾಖೆ ಸಲ್ಲಿಸಿರುವ ಸೇವೆಗೆ ರಾಜ್ಯದ ಜನರು ಕೂಡ ಅಭಿನಂದನೆ ಸಲ್ಲಿಸುತ್ತಾರೆ. ನಿಮ್ಮ ಉತ್ತಮ ಸೇವೆ ಹೀಗೇ ಮುಂದುವರಿಯಲಿ ಎಂದು ಮನವಿ ಮಾಡುತ್ತೇನೆ ಎಂದರು.

Translate »