ಮೈತ್ರಿ ಸರ್ಕಾರಕ್ಕೆ ಮರ್ಮಾಘಾತ
ಮೈಸೂರು

ಮೈತ್ರಿ ಸರ್ಕಾರಕ್ಕೆ ಮರ್ಮಾಘಾತ

July 15, 2019

ಬೆಂಗಳೂರು,ಜು.14-ಕಳೆದ ರಾತ್ರಿ ರಾಜೀನಾಮೆ ವಾಪಸ್ ಪಡೆಯುತ್ತೇನೆ, ಜೊತೆಗೆ ಡಾ.ಕೆ.ಸುಧಾಕರ್ ಅವರನ್ನು ಮನವೊಲಿಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಘೋಷಿಸಿದ್ದ ಹೊಸಕೋಟೆ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್, ಇಂದು ಬೆಳಿಗ್ಗೆ ವಿಮಾನದಲ್ಲಿ ಮುಂಬೈಗೆ ಹಾರಿ ಅತೃಪ್ತ ಶಾಸಕರ ಜೊತೆ ಸೇರುವ ಮೂಲಕ ಮೈತ್ರಿ ಸರ್ಕಾರಕ್ಕೆ ಮರ್ಮಾಘಾತ ನೀಡಿದ್ದಾರೆ.

ಜಾತ್ರೆಗೆ ಹೋಗಿ ಬರುವುದಾಗಿ ಕಾಂಗ್ರೆಸ್ ಮುಖಂಡ ರಿಗೆ ತಿಳಿಸಿ ಹೋಗಿದ್ದ ಶಾಸಕ ಎಂಟಿಬಿ ನಾಗರಾಜ್ ಅವರು, ಇಂದು ಬೆಳಿಗ್ಗೆ 10.30ರ ಸುಮಾರಿನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಿಜೆಪಿ ಮುಖಂಡ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರೊಂದಿಗೆ ಮುಂಬೈಗೆ ಪ್ರಯಾಣ ಬೆಳೆಸಿದರು. ಎಂಟಿಬಿ ನಾಗರಾಜ್ ಮುಂಬೈಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಅವರನ್ನು ತಡೆಯಲು ಸಿದ್ದರಾಮಯ್ಯ ಅವರು ತಮ್ಮ ಆಪ್ತ ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರನ್ನು ಕಳುಹಿಸಿದ್ದರು. ಆದರೆ ಮಹದೇವಪ್ಪ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನವೇ ನಾಗರಾಜ್ ಮುಂಬೈ ವಿಮಾನ ಹತ್ತಿದ್ದರಿಂದ ಮಹದೇವಪ್ಪ ಅವರು ಬರಿಗೈಲಿ ವಾಪಸ್ಸಾಗುವಂತಾಯಿತು.

ಮುಂಬೈಗೆ ತೆರಳಿ ಅತೃಪ್ತ ಶಾಸಕರ ಜೊತೆ ಸೇರಿಕೊಂಡ ನಾಗರಾಜ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಮತ್ತು ಸುಧಾಕರ್ ಇಬ್ಬರೂ ಮಾತನಾಡಿ ಕೊಂಡೇ ರಾಜೀನಾಮೆ ನೀಡಿದ್ದೆವು. ನಿನ್ನೆಯೂ ಕೂಡ ಸುಧಾಕರ್ ಒಪ್ಪಿದರೆ ರಾಜೀನಾಮೆ ಹಿಂಪಡೆಯುತ್ತೇನೆ ಎಂದು ಹೇಳಿದ್ದೆ. ಸುಧಾಕರ್ ಸಿಕ್ಕಿದರೆ ಮಾತನಾಡುತ್ತೇನೆ ಎಂದರಲ್ಲದೆ, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಖಡಾ ಖಂಡಿತವಾಗಿ ತಿಳಿಸಿದರು. ಆರ್.ಅಶೋಕ್ ಅವರು ತಮ್ಮನ್ನು ಮುಂಬೈಗೆ ಕರೆತಂದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ತಾವು ಮತ್ತು ಅಶೋಕ್ ಒಂದೇ ವಿಮಾನದಲ್ಲಿ ಪ್ರಯಾಣಿ ಸಿರುವುದು ಕಾಕತಾಳೀಯ ಎಂದರು. ಹಲವು ರಾಜಕೀಯ ಮುಖಂಡರು ಮುಂಬೈಗೆ ಭೇಟಿ ನೀಡುತ್ತಾರೆ. ಅದೇ ರೀತಿ ಅಶೋಕ್ ಅವರೂ ಕೂಡ ಮುಂಬೈಗೆ ಬಂದಿರ ಬಹುದೇ ಹೊರತು, ತಾನು ಅವರ ಜೊತೆ ಬಂದಿಲ್ಲ ಎಂದು ನಾಗರಾಜ್ ಹೇಳಿದರು.

Translate »