ಅಸಹಜ ಲೈಂಗಿಕ ಕ್ರಿಯೆಗೆ ನಕಾರ: ವ್ಯಕ್ತಿಯ ಮೇಲೆ ಹಲ್ಲೆ
ಮೈಸೂರು

ಅಸಹಜ ಲೈಂಗಿಕ ಕ್ರಿಯೆಗೆ ನಕಾರ: ವ್ಯಕ್ತಿಯ ಮೇಲೆ ಹಲ್ಲೆ

April 23, 2019

ಮೈಸೂರು: ಅಸಹಜ ಲೈಂಗಿಕ ಕ್ರಿಯೆಗೆ ಒಪ್ಪದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದ ನಾಲ್ವರು ತೃತೀಯ ಲಿಂಗಿಗಳು ಸೇರಿದಂತೆ 6 ಮಂದಿಯನ್ನು ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಿಲಾದ್ ಪಾರ್ಕ್ ಸಮೀಪ ಶನಿವಾರ ಮುಸ್ತಾಫ ಎಂಬುವರ ಮೇಲೆ ಹಲ್ಲೆ ನಡೆಸಿದ್ದ ತೌಸೀಫ್, ರವೀಂದ್ರಕುಮಾರ್ ಹಾಗೂ ನಾಲ್ವರು ತೃತೀಯ ಲಿಂಗಿಗಳನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪರಿಚಿತರು ಹಲ್ಲೆ ನಡೆಸಿದ್ದಾಗಿ ಹೇಳಿದ್ದ ಮುಸ್ತಾಫ, ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ತನ್ನ ತೃತೀಯಲಿಂಗಿ ಸ್ನೇಹಿತರಾದ ನಗೀನಾ ಹಾಗೂ ಸಹಚರರು ಹಲ್ಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಆದರೆ ನಗೀನಾ ವಿಳಾಸ ಅಥವಾ ಮೊಬೈಲ್ ಸಂಖ್ಯೆ ದೊರಕದ ಕಾರಣ ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟಸಾಧ್ಯವಾಗಿತ್ತಾದರೂ ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಸಹಜ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಒಪ್ಪದ ಕಾರಣಕ್ಕೆ ಮುಸ್ತಾಫ ಅವರ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಗಳು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಲಷ್ಕರ್ ಠಾಣೆ ಇನ್‍ಸ್ಪೆಕ್ಟರ್ ಮುನಿಯಪ್ಪ, ಸಬ್‍ಇನ್‍ಸ್ಪೆಕ್ಟರ್ ಪೂಜಾ, ಎಎಸ್‍ಐ ವೆಂಕಟಾಚಲನಾಯಕ, ಸಿಬ್ಬಂದಿ ಪರಶಿವಮೂರ್ತಿ, ಮಂಜುಳಾ ಹಾಗೂ ಚಿನ್ನಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕಳ್ಳನ ಬಂಧನ: ಕಳ್ಳನನ್ನು ಬಂಧಿಸಿರುವ ವಿಜಯನಗರ ಪೊಲೀಸರು, 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಳಿಕೆರೆ ಸಮೀಪದ ಚಿಕ್ಕಾರನಹಳ್ಳಿಯ ನಿವಾಸಿ ಚಂದ್ರಶೇಖರ(35) ಬಂಧಿತನಾಗಿದ್ದು, ಈಗಾಗಲೇ ಈತನ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Translate »