ಮಡಿಕೇರಿಯಲ್ಲಿ ಮನೆ ಮೇಲೆ ಶೂಟೌಟ್: ಇಬ್ಬರ ಬಂಧನ
ಕೊಡಗು

ಮಡಿಕೇರಿಯಲ್ಲಿ ಮನೆ ಮೇಲೆ ಶೂಟೌಟ್: ಇಬ್ಬರ ಬಂಧನ

July 31, 2018

ಮಡಿಕೇರಿ:  ಮನೆಯೊಂದರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಗರದ ಎಫ್.ಎಂ.ಸಿ. ಕಾಲೇಜು ಹಿಂಭಾಗ ನಡೆದಿದ್ದು, ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಯಶಸ್ವಿಯಾಗಿದೆ.

ಮಡಿಕೇರಿಯ ಜೀವ ವಿಮಾ ನಿಗಮದಲ್ಲಿ ಉದ್ಯೋಗಿಯಾಗಿರುವ ಜನಾರ್ಧನ ಎಂಬು ವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಈ ಕೃತ್ಯವೆಸಗಿದ ಮಡಿಕೇರಿ ನಿವಾಸಿಗಳಾದ ಲೋಕೇಶ್, ಆಟೋ ಮೆಕ್ಯಾನಿಕ್ ಅಕ್ರಂ ಅವರನ್ನು ಜಿಲ್ಲಾ ಅಪರಾಧ ಪತ್ತೆ ದಳ ಬಂಧಿಸಿದ್ದು, ನಗರ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಜು.30ರ ಬೆಳಗಿನ ಜಾವ 3 ಗಂಟೆಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ನಾಡ ಬಂದೂಕಿನಿಂದ ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿದ್ದಾರೆ. ಮನೆಯ ಸಮೀಪ ಗುಂಡಿನ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯೊಳಗೆ ಮಲಗಿದ್ದ ಜನಾರ್ಧನ ಹೊರ ಬಂದು ನೋಡಿದ್ದಾರೆ. ಈ ಸಂದರ್ಭ ದುಷ್ಕರ್ಮಿಗಳು ಮತ್ತೊಂದು ಗುಂಡನ್ನು ಮನೆಗೆ ಹಾರಿಸಿದ್ದು, ಕಿಟಕಿಯ ಗಾಜುಗಳು ಪುಡಿ ಪುಡಿಯಾಗಿದೆ. ಕಿಟಕಿಯ ಫ್ರೇಮ್‍ಗಳಿಗೆ ಗುಂಡಿನ ಚೂರುಗಳು ಹೊಕ್ಕಿದ್ದು, ಜನಾರ್ಧನ ಸೇರಿದಂತೆ ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಗೆ ಗುಂಡು ಹಾರಿಸಿದ ಬಳಿಕ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಪರಾರಿಯಾಗಿದ್ದರು.

ಘಟನೆ ಕುರಿತು ಜನಾರ್ಧನ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಮಡಿಕೇರಿ ಡಿವೈಎಸ್‍ಪಿ ಸುಂದರ್‍ರಾಜ್, ವೃತ್ತ ನಿರೀಕ್ಷಕ ಮೇದಪ್ಪ, ಠಾಣಾಧಿಕಾರಿ ಷಣ್ಮುಗ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆರೋಪಿ ಗಳ ಪತ್ತೆಗೆ ನಗರದಾದ್ಯಂತ ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದರು. ಈ ವೇಳೆ ಮನೆಯ ಸುತ್ತಮುತ್ತ ಇದ್ದಂತಹ ಸಿಸಿ ಕ್ಯಾಮರಾಗಳ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾ ಅಪರಾಧ ಪತ್ತೆ ದಳ ಪೊಲೀಸರು ಆರೋಪಿಗಳ ಜಾಡನ್ನು ಹಿಡಿದು ಇಂದು ರಾತ್ರಿ 9 ಗಂಟೆ ವೇಳೆಗೆ ಬಂಧಿಸುವಲ್ಲಿ ಯಶಸ್ವಿಯಾದರು. ಆರೋಪಿಗಳನ್ನು ನಗರ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ. ಆರೋಪಿಗಳನ್ನು ತಡರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದು, ಗುಂಡಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ.

Translate »