ರೆಸಾರ್ಟ್‍ನಿಂದ ಮೈಸೂರಿನತ್ತ ತೆರಳಿದ ಸಿದ್ದರಾಮಯ್ಯ
ಕೊಡಗು

ರೆಸಾರ್ಟ್‍ನಿಂದ ಮೈಸೂರಿನತ್ತ ತೆರಳಿದ ಸಿದ್ದರಾಮಯ್ಯ

May 8, 2019

ಮಡಿಕೇರಿ: ಕಳೆದ 2 ದಿನಗಳಿಂದ ಮಡಿಕೇರಿ ಸಮೀಪದ ಇಬ್ಬನಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ. ಯತೀಂದ್ರ ಇಂದು ರೆಸಾರ್ಟ್‍ನಿಂದ ಮೈಸೂರು ಕಡೆಗೆ ಪ್ರಯಾಣ ಬೆಳೆಸಿದರು.

ಬೆಳಗಿನ 11.40ರ ಸಮಯದಲ್ಲಿ ಕಾರ್‍ನಲ್ಲಿ ಪುತ್ರ ಡಾ.ಯತೀಂದ್ರರೊಂದಿಗೆ ಹೊರಬಂದ ಸಿದ್ದರಾಮಯ್ಯ, ಅಲ್ಲಿ ನೆರೆದಿದ್ದ ಸುದ್ದಿಗಾರರನ್ನು ಕಂಡು ಸೌಜನ್ಯದಿಂದ ತಮ್ಮ ಕಾರ್ ನಿಲ್ಲಿಸಿದರು. ಈ ಸಂದರ್ಭ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಮತ್ತು ಸುದ್ದಿಗಾರರು ರೆಸಾರ್ಟ್ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯಿಸುವಂತೆ ಪಟ್ಟು ಹಿಡಿದು, ನಿಮಗಾಗಿ 2 ದಿನಗಳಿಂದ ರೆಸಾರ್ಟ್ ಮುಂದೆಯೇ ಕಾಯುತ್ತಿದ್ದೇವೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಾನು ಯಾವುದೇ ಹೇಳಿಕೆ ನೀಡಲ್ಲ, ನನಗಾಗಿ ನೀವು ಕಾದಿದ್ದು ಏಕೆ, ನೀವು ಇನ್ನು ಹೊರಡಿ ಎಂದು ಸಲಹೆ ನೀಡಿ ಕೈ ಬೀಸುತ್ತಾ ಮೈಸೂರು ಕಡೆ ಪ್ರಯಾಣಿಸಿದರು. ಸಿದ್ದರಾಮಯ್ಯ ಅವರೊಂದಿಗೆ ಕೆಲವು ಆಪ್ತರು ಕೂಡ ಆಗಮಿಸಿದ್ದಾರೆ ಎಂಬ ಮಾಹಿತಿ ಇತ್ತಾದರೂ ಅವರೊಂದಿಗೆ ಯಾರೂ ಕಂಡು ಬರಲಿಲ್ಲ.
ಲೋಕಸಭಾ ಚುನಾವಣೆ ಮತ್ತು ರಾಜ್ಯ ಸಮ್ಮಿಶ್ರ ಸರಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪುತ್ರ ಯತೀಂದ್ರ ಮತ್ತು ಅವರ ಆಪ್ತ ಬಳಗ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಕಳೆದ 2 ತಿಂಗಳಿನಿಂದ ವಿಶ್ರಾಂತಿಯಿಲ್ಲದೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗಾಗಿ ರಾಜ್ಯದೆಲ್ಲೆಡೆ ಸಂಚರಿಸಿದ್ದ ಒಂದಿಷ್ಟು ದಿನ ಬಿಡುವು ಪಡೆದು ಹಾಯಾಗಿರಲು ಕೊಡಗನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ.