ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸದ ಅಧಿಕಾರಿಗಳ ವಿರುದ್ಧ ಅಸಮಾಧಾನ
ಕೊಡಗು

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸದ ಅಧಿಕಾರಿಗಳ ವಿರುದ್ಧ ಅಸಮಾಧಾನ

May 8, 2019

ಮಡಿಕೇರಿ: ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಬಸವಣ್ಣನವರ ಭಾವಚಿತ್ರವನ್ನು ಅಳವಡಿಸಬೇಕೆನ್ನುವ ಆದೇಶವಿದ್ದರೂ ಕೊಡಗಿನ ಕಚೇರಿ ಯಲ್ಲಿ ಇದು ಪಾಲನೆಯಾಗಿಲ್ಲವೆಂದು ಆರೋಪಿಸಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಇಂದು ಕಪ್ಪು ಪಟ್ಟಿ ಧರಿಸಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು.

ನಗರದ ಕೋಟೆ ಹಳೇ ವಿಧಾನಸಭಾಂಗಣದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದ ಸಂದರ್ಭ ಆಕ್ಷೇಪ ವ್ಯಕ್ತಪಡಿಸಿದ ಪರಿಷತ್‍ನ ಜಿಲ್ಲಾಧ್ಯಕ್ಷ ಎಸ್.ಮಹೇಶ್ ಹಾಗೂ ಇತರರು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸದೆ ಅಗೌರವ ತೋರಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಆದೇಶ ಪಾಲನೆಯಾದರಷ್ಟೇ ಇಂದಿನ ಬಸವ ಜಯಂತಿ ಕಾರ್ಯಕ್ರಮ ಅರ್ಥಗರ್ಭಿತವಾಗುತ್ತದೆ ಎಂದ ಅವರು, ತಕ್ಷಣ ಭಾವಚಿತ್ರ ಅಳವಡಿಸುವಂತೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು, ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಮೂರು ವಾರಗಳ ಒಳಗೆ ಬಸವಣ್ಣನವರ ಭಾವಚಿತ್ರ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸೂಕ್ತ ಕ್ರಮಕ್ಕಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

ಒಂದು ವೇಳೆ ಭರವಸೆ ಈಡೇರದಿದ್ದಲ್ಲಿ ಮುಂದಿನ ನಿರ್ಧಾರದ ಕುರಿತು ಚಿಂತನೆ ನಡೆಸಬೇಕಾಗುತ್ತದೆ ಎಂದರು. ಪರಿಷತ್‍ನ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಮಹದೇವಪ್ಪ, ಕಾರ್ಯದರ್ಶಿ ಪ್ರೇಮನಾಥ್, ಖಜಾಂಚಿ ಸೋಮಪ್ಪ, ವೀರಶೈವ ಮಹಾಸಭಾದ ನಿಕಟಪೂರ್ವ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಪರಿಷತ್ ಪ್ರಮುಖರಾದ ಶಿವಪ್ಪ, ಶಂಭು ಶಿವಮೂರ್ತಿ, ಧರ್ಮಪ್ಪ, ಜಯರಾಜ್, ಉದಯಕುಮಾರ್, ವಿರುಪಾಕ್ಷ ಮತ್ತಿತರ ಪ್ರಮುಖರು ಈ ಸಂದರ್ಭ ಹಾಜರಿದ್ದರು.

Translate »