ಸಿದ್ದರಾಮಯ್ಯ ನಡೆಸಿದ ಅಸಮಾಧಾನಿತ ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆ ವಿಫಲ
ಮೈಸೂರು

ಸಿದ್ದರಾಮಯ್ಯ ನಡೆಸಿದ ಅಸಮಾಧಾನಿತ ಮಂಡ್ಯ ಕಾಂಗ್ರೆಸ್ ಮುಖಂಡರ ಸಭೆ ವಿಫಲ

April 8, 2019

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪುತ್ರ ಸ್ಪರ್ಧಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಇಂದು ಕರೆದಿದ್ದ ಮಂಡ್ಯ ಜಿಲ್ಲೆಯ ಅಸಮಾ ಧಾನಿತ ಮುಖಂಡರ ಸಂಧಾನ ಸಭೆ ವಿಫಲವಾಗಿದೆ.

ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧಿಸುತ್ತಿರುವ ಮಂಡ್ಯ ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಕಾಂಗ್ರೆಸ್ ಮುಖಂ ಡರು ಹಾಗೂ ಕಾರ್ಯಕರ್ತರು ಪಕ್ಷದ ಹೈಕಮಾಂಡ್ ಎಚ್ಚರಿಕೆಯನ್ನೂ ಲೆಕ್ಕಿಸದೇ ಕಾಂಗ್ರೆಸ್ ಬಾವುಟ ಹಿಡಿದು ಸುಮಲತಾ ಪರ ಪ್ರಚಾರಕ್ಕಿಳಿದಿದ್ದಾರೆ. ಮಂಡ್ಯದಲ್ಲಿ ಸಮ ನ್ವಯತೆ ಸಾಧಿಸುವ ಉದ್ದೇಶದಿಂದ ಅಸಮಾಧಾನಿತ ರಾದ ಮಾಜಿ ಶಾಸಕರಾದ ಎನ್.ಚೆಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಪಿ.ನರೇಂದ್ರಸ್ವಾಮಿ ಸೇರಿ ದಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವ ಗೊಂಡಿದ್ದ ಎಲ್ಲಾ ಮುಖಂಡರ ಸಭೆಯನ್ನು ಇಂದು ಸಿದ್ದ ರಾಮಯ್ಯ ಕರೆದಿದ್ದರು. ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಕೂಡ ಭಾಗಿ ಯಾಗಿದ್ದರು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ಮೈತ್ರಿ ಧರ್ಮದಂತೆ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುವಂತೆ ಸಿದ್ದರಾಮಯ್ಯ ಈ ವೇಳೆ ಅಸಮಾಧಾನಿತ ಮುಖಂಡರಿಗೆ ತಿಳಿಸಿದರು. ಆದರೆ ಅವರೆಲ್ಲರೂ ಅದನ್ನು ಒಪ್ಪದೇ ತಾವು ಯಾವುದೇ ಕಾರಣಕ್ಕೂ ನಿಖಿಲ್ ಪರ ಪ್ರಚಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಖಡಾ ಖಂಡಿತವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದರೂ, ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‍ನವರು ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ. ಹಲವಾರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೇಸ್‍ಗಳನ್ನು ಹಾಕಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪರವಾಗಿ ಕೆಲಸ ಮಾಡಲು ಮಾನಸಿಕವಾಗಿ ಒಪ್ಪುತ್ತಿಲ್ಲ. ನಾವೇನಾದರೂ ಬಲವಂತ ಮಾಡಿದರೆ ಕಾರ್ಯಕರ್ತರೇ ನಮ್ಮನ್ನು ಬಿಟ್ಟುಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೇನಾದರೂ ಆಗಿಬಿಟ್ಟರೆ ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಅಸಮಾಧಾನಿತ ಮುಖಂಡರು ಸಿದ್ದರಾಮಯ್ಯ ಅವರಿಗೆ ವಿವರಿಸಿದರು ಎಂದು ಹೇಳಲಾಗಿದೆ.

ಈ ಎಲ್ಲಾ ವಿಚಾರಗಳ ಬಗ್ಗೆ ನಾನು ಕುಮಾರಸ್ವಾಮಿ ಮತ್ತು ದೇವೇಗೌಡರ ಜೊತೆ ಮಾತನಾಡುತ್ತೇನೆ. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರು ವುದರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಕಿರುವ ಕೇಸ್‍ಗಳನ್ನು ವಾಪಸ್ ತೆಗೆಯಲು ಸಾಧ್ಯವಿಲ್ಲ. ರಾಷ್ಟ್ರ ಮಟ್ಟದಲ್ಲಿ ಮೈತ್ರಿ ತೀರ್ಮಾನವಾಗಿರುವುದರಿಂದ ನೀವೆಲ್ಲರೂ ಕೊನೇ ಪಕ್ಷ ಏ.13ರಂದು ಕೆ.ಆರ್.ನಗರದಲ್ಲಿ ರಾಹುಲ್ ಗಾಂಧಿಯವರು ಪಾಲ್ಗೊಳ್ಳುತ್ತಿರುವ ಸಭೆಯಲ್ಲಾದರೂ ಭಾಗವಹಿಸಿ ಎಂದು ಸಿದ್ದರಾಮಯ್ಯ ಅಸಮಾಧಾನಿತರ ಮನವೊಲಿ ಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದ್ದು, ಕುಮಾರಸ್ವಾಮಿ ಮತ್ತು ದೇವೇಗೌಡ ರಿಗೆ ನಮ್ಮ ಅವಶ್ಯಕತೆಯೇ ಇಲ್ಲ. ಅದನ್ನು ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಶ್ರೀರಂಗಪಟ್ಟಣದಲ್ಲಿ ದೇವೇಗೌಡರು ರಮೇಶ್ ಬಂಡಿಸಿದ್ದೇಗೌಡ ಕುಟುಂಬದ ಬಗ್ಗೆಯೇ ಹಗುರವಾಗಿ ಮಾತನಾಡಿದ್ದಾರೆ. ಇವೆಲ್ಲವೂ ಕಾರ್ಯಕರ್ತರನ್ನು ಕೆರಳಿಸಿವೆ. ಕಾರ್ಯಕರ್ತರು ಒಪ್ಪದೇ ನಾವೇನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕಾರ್ಯಕರ್ತರ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರವನ್ನು ತಿಳಿಸುವುದಾಗಿ ಅಸಮಾಧಾನಿತ ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಅವರಿಗೆ ಹೇಳಿದರು ಎನ್ನಲಾಗಿದೆ. ನಾನು ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಜೊತೆ ಮಾತನಾಡುತ್ತೇನೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳೋಣ. ನಾಳೆ ರಾತ್ರಿ ಮತ್ತೆ ಸಭೆ ಕರೆಯಲಿದ್ದು, ಅದರಲ್ಲಿ ಭಾಗವಹಿಸ ಬೇಕೆಂದು ಸಿದ್ದರಾಮಯ್ಯ ತಿಳಿಸಿದರು ಎಂದು ಹೇಳಲಾಗಿದೆ.

Translate »