ಇಂದು ಆಸ್ಪತ್ರೆಯಿಂದ ಸಿದ್ದರಾಮಯ್ಯ ಬಿಡುಗಡೆ
ಮೈಸೂರು

ಇಂದು ಆಸ್ಪತ್ರೆಯಿಂದ ಸಿದ್ದರಾಮಯ್ಯ ಬಿಡುಗಡೆ

December 14, 2019

ಬೆಂಗಳೂರು,ಡಿ 13(ಕೆಎಂಶಿ)- ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಆರೋಗ್ಯ ಸುಧಾರಿಸಿದ್ದು ನಾಳೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಲಿ ದ್ದಾರೆ. ಕಳೆದ ಎರಡು ದಿನಗಳ ಹಿಂದೆ ಹೃದಯ ಬೇನೆಗೆ ಒಳಗಾದ ಅವರಿಗೆ ತುರ್ತಾಗಿ ಸ್ಟಂಟ್ ಅಳವಡಿಸಲಾಗಿತ್ತು, ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಮಾಜಿ ಮುಖ್ಯ ಮಂತ್ರಿ ಅವರನ್ನು ಇಂದು ಭೇಟಿಯಾದ ಸುತ್ತೂರು ಶ್ರೀಗಳು ಹಾಗೂ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಮತ್ತು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ನಾವು ಮನೆ ಬದಲಾಯಿಸಿರಬಹುದು, ಆದರೆ ಮನಸ್ಸು ಬದಲಾಗಲ್ಲ. ಸಂಬಂಧಗಳೇ ಬೇರೆ, ರಾಜ ಕೀಯವೇ ಬೇರೆ, ಅವರು ನಮ್ಮ ಮಾಜಿ ಪಕ್ಷದ ನಾಯಕರು, ಯಾವುದೇ ರಾಜಕೀಯ ಉದ್ದೇಶದಿಂದ ಭೇಟಿ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ಶಾಸಕ ರಮೇಶ್ ಜಾರಕಿಹೊಳಿ ಮಾತನಾಡಿ, ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ, ನಾಳೆ ಡಿಸ್ಚಾರ್ಜ್ ಆಗುತ್ತಾರೆ, ಉಪಚುನಾವಣೆ ಗೆದ್ದಾಗಲೂ ಹೇಳಿದ್ದೆ, ಸಿದ್ದರಾಮಯ್ಯ ನಮ್ಮ ನಾಯಕರು ಅಂತ, ಪಕ್ಷ ಬದಲಾಯಿಸಿದರೂ ಅವರೇ ನಮ್ಮ ಗುರುಗಳು ಎಂದರು.

Translate »