ಸಿದ್ದು-ಜಿಟಿಡಿ ಸಮಾಗಮ: ಮೈತ್ರಿ ಧರ್ಮ ಪಾಲನೆ ನಿರ್ಧಾರ, ಒಟ್ಟಾಗಿ ಚುನಾವಣಾ ಪ್ರಚಾರ
ಮೈಸೂರು

ಸಿದ್ದು-ಜಿಟಿಡಿ ಸಮಾಗಮ: ಮೈತ್ರಿ ಧರ್ಮ ಪಾಲನೆ ನಿರ್ಧಾರ, ಒಟ್ಟಾಗಿ ಚುನಾವಣಾ ಪ್ರಚಾರ

April 5, 2019

ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಸೆಣಸಾಡಿ, ನಂತರವೂ ಹಾವು-ಮುಂಗುಸಿ ಯಂತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಕೊನೆಗೂ ಒಂದೂವರೆ ದಶಕದ ನಂತರ ಸಂದಿಸಿದ್ದಾರೆ. ಇದೀಗ ಒಂದಾಗಿ ಲೋಕಸಭಾ ಚುನಾವಣಾ ಪ್ರಚಾರ ನಡೆಸಲು ಮುಂದಾಗಿದ್ದಾರೆ.

ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅವರ ಮನೆಯಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದ ಔತಣಕೂಟದಲ್ಲಿ ಜಿಟಿಡಿ ಮತ್ತು ಸಿದ್ದರಾಮಯ್ಯ ಮುಖಾಮುಖಿಯಾಗಿದ್ದರು. ಸಚಿವ ಜಮೀರ್ ಅಹಮದ್ ಖಾನ್, ಮಾಗಡಿ ಬಾಲಕೃಷ್ಣ ಹಾಗೂ ಇತರ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಸಮ್ಮುಖದಲ್ಲಿ ರಾಜಕೀಯ ಬದ್ಧವೈರಿ ಗಳಿಬ್ಬರು ಸುಮಾರು ಒಂದು ಗಂಟೆ ಕಾಲ ಉಭಯ ಕುಶಲೋಪರಿ ನಡೆಸಿ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಯುತ್ತಿದೆ. ರಾಜ್ಯ ಹಾಗೂ ದೇಶದಲ್ಲಿ ಕೋಮುವಾದಿ ಬಿಜೆಪಿಯನ್ನು ನಿರ್ನಾಮ ಮಾಡಿ, ಅದನ್ನು ಅಧಿಕಾರ ದಿಂದ ದೂರ ಇರಿಸಲು ಪ್ರಸ್ತುತ ಲೋಕ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಪ್ರಚಾರ ನಡೆಸಿ, ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಸಿದ್ದ ರಾಮಯ್ಯ ಅವರು ಜಿ.ಟಿ.ದೇವೇಗೌಡರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಉಭಯ ಪಕ್ಷಗಳ ವರಿಷ್ಠರ ತೀರ್ಮಾ ನದಂತೆ ಸೀಟು ಹಂಚಿಕೆ ಮಾಡಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲಾಗಿದ್ದು, ಈಗಾಗಲೇ ಭಾನುವಾರ ಬೆಂಗಳೂರಲ್ಲಿ ಬೃಹತ್ ಸಮಾ ವೇಶ ನಡೆಸಿ, ಮೈತ್ರಿ ಧರ್ಮ ಪಾಲಿಸಲು ನಿರ್ಧರಿಸಿ ರಾಜ್ಯಕ್ಕೆ ಸಂದೇಶ ರವಾನಿಸಿರುವುದು ನಿಮಗೆ ಗೊತ್ತಿರುವ ವಿಷಯ ಎಂದೂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಅದರಂತೆ ಈಗಾಗಲೇ ಒಟ್ಟಾಗಿ ಚುನಾವಣಾ ಪ್ರಚಾರ ನಡೆಸಬೇಕೆಂದು ಉಭಯ ಪಕ್ಷದ ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷರಿಂದ ಕಾರ್ಯ ಕರ್ತರಿಗೆ ನಿರ್ದೇಶನ ನೀಡಿರುವುದರಿಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ನೀವು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯ ಶಂಕರ್ ಪರ ಪ್ರಚಾರ ನಡೆಸಬೇಕು ಎಂದೂ ತಿಳಿಸಿದ್ದಾರೆ. ನಾವೂ ಸಹ ಮಂಡ್ಯ, ಹಾಸನ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಾದ ನಿಖಿಲ್ ಮತ್ತು ಪ್ರಜ್ವಲ್ ಪರ ಜೊತೆಯಾಗಿ ಪ್ರಚಾರ ಮಾಡ ಬೇಕೆಂದು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯ ಕರ್ತರಿಗೆ ಸಂದೇಶ ರವಾನಿಸಿದ್ದೇವೆ. ನಾನೂ ಸೇರಿದಂತೆ ಎಲ್ಲಾ ಹಿರಿಯ ನಾಯಕರೂ ಚುನಾವಣಾ ಪ್ರಚಾರಕ್ಕೆ

ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಸೆಣಸಾಟದ ಕಹಿ ನೆನಪನ್ನೇ ಮುಂದಿಟ್ಟುಕೊಂಡು ಈಗ ದ್ವೇಷ ಸಾಧಿಸುವುದರಿಂದ ಪ್ರಯೋಜನವಿಲ್ಲ. ಮೈತ್ರಿ ಧರ್ಮ ಪಾಲನೆ ಮೂಲಕ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ನಮ್ಮ ಪ್ರಮುಖ ಉದ್ದೇಶ ಎಂಬುದನ್ನೂ ಜಿ.ಟಿ.ದೇವೇಗೌಡರಿಗೆ ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡರು, ವರಿಷ್ಠರಿಂದ ನಮಗೂ ಸೂಚನೆ ಬಂದಿದೆ. ಒಟ್ಟಾಗಿ ಮೈತ್ರಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಮಾಡೋಣ. ಮೈಸೂರಲ್ಲೂ ಡಾ.ಹೆಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಆರ್.ಮೂರ್ತಿ, ಡಾ.ವಿಜಯ್ ಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ನನ್ನನ್ನು ಭೇಟಿ ಮಾಡಿದ್ದರು. ಅವರಿಗೆ ನಾನು ಪ್ರಚಾರಕ್ಕೆ ಬರುತ್ತೇನೆಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ. ಭಾನುವಾರ ಮೈಸೂರಲ್ಲಿ ಉಭಯ ಪಕ್ಷಗಳ ಜಂಟಿ ಸುದ್ದಿಗೋಷ್ಠಿ ನಡೆಸಿ, ಒಗ್ಗಟ್ಟು ಪ್ರದರ್ಶಿಸಲಿದ್ದೇವೆ. ಆ ಮೂಲಕ ಮೈತ್ರಿ ಧರ್ಮ ಪಾಲಿಸಿ ಅಭ್ಯರ್ಥಿ ಗಳ ಗೆಲುವಿಗೆ ರಣತಂತ್ರ ರೂಪಿಸುತ್ತೇವೆ ಎಂದೂ ಜಿಟಿಡಿ ಹೇಳಿದ್ದಾರೆ.

Translate »