ಗುಂಡ್ಲುಪೇಟೆ: ಕಳೆದ ನಾಲ್ಕೈದು ತಿಂಗಳಿನಿಂದ ಪಿಂಚಣಿ ಪಾವತಿಸಿಲ್ಲದಿರುವ ಬಗ್ಗೆ ತಾಲೂಕಿನ ವಿವಿಧ ಗ್ರಾಮದ ಫಲಾನು ಭವಿಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಕೂಡಲೇ ಪಿಂಚಣಿ ಪಾವತಿಗೆ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಸಿ.ಭಾರತಿ ಅವರನ್ನು ಒತ್ತಾಯಿಸಿದರು.
ತಾಲೂಕಿನ ಕೊಡಸೋಗೆ, ಸೋಮನಪುರ, ಕಡತಾಳಕಟ್ಟೆಹುಂಡಿ, ಶೀಲ ವಂತಪುರ ಗ್ರಾಮಗಳ ಸುಮಾರು 100ಕ್ಕೂ ಹೆಚ್ಚಿನ ಫಲಾನುಭವಿಗಳು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬಾಕಿ ಯುಳಿದಿರುವ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ಪಿಂಚಣಿ ಪಾವತಿಗೆ ಒತ್ತಾಯಿಸಿದರು.
ಬ್ಯಾಂಕುಗಳಲ್ಲಿ ಶೂನ್ಯ ಖಾತೆ ಹೊಂದಿರುವವರ ಖಾತೆಗೆ ಯಾವುದೇ ರೀತಿಯ ವೇತನಗಳು ಪಾವತಿ ಯಾಗುತ್ತಿಲ್ಲ, ಈ ಬಗ್ಗೆ ಬ್ಯಾಂಕುಗಳಲ್ಲಿ ವಿಚಾರಿಸಿದರೆ ಎರಡು ಖಾತೆ ಹೊಂದಿರುವವರು ನಿಮ್ಮ ಶೂನ್ಯ ಖಾತೆಯನ್ನು ಸ್ಥಗಿತಗೊಳಿಸಿಕೊಳ್ಳಿ ಎನ್ನುತ್ತಿದ್ದಾರೆ. ಆದರೆ ಇತ್ತೀಚೆಗೆ ಹೆಬ್ಬೆಟ್ಟು ಮತ್ತು ಬೆರಳಚ್ಚು ಪಡೆದು ನಿಮಗೆ ಕೇವಲ ಒಂದು ತಿಂಗಳ ವೇತನ ಬಂದಿದೆ ಎಂದು ಬ್ಯಾಂಕ್ ಪ್ರತಿನಿಧಿಗಳು ಹೇಳುತ್ತಿ ದ್ದಾರೆ. ಆದರೆ ನಾಲ್ಕೈದು ತಿಂಗಳಿನಿಂದ ವೇತನ ಪಾವತಿಸಿಲ್ಲ ದಿರುವುದರಿಂದ ಜೀವನ ನಿರ್ವಹಣೆ ಹಾಗೂ ಔಷಧೋಪಚಾರಕ್ಕೆ ತೀವ್ರ ತೊಂದರೆಯಾಗಿದೆ. ಕೆಲವರಿಗೆ ಒಂದು ಎರಡು ತಿಂಗಳ ವೇತನ ಪಾವತಿಸ ಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ವೇತನ ಪಾವತಿಸಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಮುಖಂಡ ಪ್ರಭು ಮಾತನಾಡಿ, ಗ್ರಾಮೀಣ ಪ್ರದೇಶದ ಮುಗ್ಧ ಜನರನ್ನು ಬ್ಯಾಂಕ್ ಪ್ರತಿನಿಧಿಗಳು ದಾರಿ ತಪ್ಪಿಸುತ್ತಿದ್ದಾರೆ. ಆದ್ದರಿಂದ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ವೇತನಗಳನ್ನು ಹಿಂದಿನಂತೆಯೇ ಆಯಾ ಗ್ರಾಮದ ಅಂಚೆ ಕಚೇರಿಗಳ ಮೂಲಕ ವಿತರಣೆ ಮಾಡಲು ಕ್ರಮಕೈಗೊಳ್ಳು ಎಂದು ಮನವಿ ಮಾಡಿದರು. ಈ ಬಗ್ಗೆ ವಿವರ ಪಡೆದ ತಹಶೀಲ್ದಾರ್ ಸಿ.ಭಾರತಿ ಪರಿಶೀಲಿಸುವ ಭರವಸೆ ನೀಡಿದರು.