ನೆರೆಯಲ್ಲಿ ಮರೆಯಾದಮಗಳ ಆತ್ಮಕ್ಕೆ ಮೋಕ್ಷ ಕಾಣಿಸಿದ ಮಾತಾಪಿತೃ!
ಕೊಡಗು

ನೆರೆಯಲ್ಲಿ ಮರೆಯಾದಮಗಳ ಆತ್ಮಕ್ಕೆ ಮೋಕ್ಷ ಕಾಣಿಸಿದ ಮಾತಾಪಿತೃ!

October 11, 2018

ಮಡಿಕೇರಿ:  ಭೂಕುಸಿತ ಮತ್ತು ಪ್ರವಾಹದಿಂದ ಸಂಪೂರ್ಣ ಧ್ವಂಸವಾಗಿರುವ ಜೋಡುಪಾಲ ಗ್ರಾಮ ಬುಧವಾರ ಮನ ಕಲಕುವ ಘಟನೆಗೆ ಸಾಕ್ಷಿಯಾಯಿತು. ಆಗಸ್ಟ್ 16 ಬೆಳಿಗ್ಗೆ 8.30ರ ಸಮಯದಲ್ಲಿ ಭಾರಿ ಕುಸಿದು ನದಿ ಪ್ರವಾಹ ಉಕ್ಕೇರಿ ಭೂ ಸಮಾಧಿಯಾದ ಮಂಜುಳಾ (15) ಮೃತದೇಹ ಇಂದಿಗೂ ಪತ್ತೆಯಾಗಿಲ್ಲ.

ಇದರಿಂದ ಮನನೊಂದಿರುವ ಆಕೆಯ ಪೋಷಕರು ಮಂಜುಳಾ ಅವರ ಪ್ರತಿ ರೂಪವನ್ನೇ ತಯಾರಿಸಿ ಅದಕ್ಕೆ ಅಂತ್ಯಕ್ರಿಯೆ ನೆರವೇರಿಸಿ ತಮ್ಮ ವಿಧಿವಿಧಾನ ನೆರವೇರಿಸಿದರು. ಅಡಿಕೆ ಹಾಳೆಯಲ್ಲಿ ಮಂಜುಳಾ ಪ್ರತಿ ರೂಪ ತಯಾರಿಸಿ, ಅದಕ್ಕೆ ರೇಷ್ಮೆ ಸೀರೆ ತೊಡಿಸಿ, ಆಕೆಯ ಇಷ್ಟದ ವ್ಯಾನಿಟಿ ಬ್ಯಾಗ್ ಹಾಗೂ ಆಕೆ ಥ್ರೋಬಾಲ್ ಕ್ರೀಡೆಯಲ್ಲಿ ಗೆದ್ದ ಪದಕ ತೊಡಿಸಿ, ಮಧುಮಗಳಂತೆ ಶೃಂಗರಿಸಿದರು. ತದನಂತರ ಕುಡಿಯ ಸಂಪ್ರ ದಾಯದಂತೆ ಮದುವೆ ಶಾಸ್ತ್ರವನ್ನು ನೆರವೇರಿಸಿದರು.

ಬಳಿಕ ತೆಂಗಿನಕಾಯಿ ಒಡೆದು ಆಕೆಯ ಬಾಯಿಗೆ ನೀರು ಕುಡಿಸಿ, ಮಂಜುಳಾ ಆತ್ಮ ವನ್ನು ಅವಗಾಹನೆ ಮಾಡಿದರು. ಮಂಜುಳಾ ಮೃತಪಟ್ಟ ಸ್ಥಳದಲ್ಲೇ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿದ ಮೃತಳ ತಂದೆ ಕುಡಿಯರ ಸೋಮಯ್ಯ ಮತ್ತು ತಾಯಿ ಜಯಂತಿ, ಮಗಳೇ ಎಲ್ಲಿದ್ದೀಯಾ..? ಒಮ್ಮೆ ಬಾ ಮಗಳೇ… ಎಂದು ತಮ್ಮ ಮುದ್ದಿನ ಮಗಳ ಆತ್ಮವನ್ನು ಆಹ್ವಾನಿಸಿದ ಸಂದರ್ಭ ಅಲ್ಲಿ ನೆರೆದಿದ್ದ ಮಂಜುಳಾ ಕುಟುಂಬಸ್ಥರು, ಮದೆಮಹೇಶ್ವರ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಬೆಟ್ಟತ್ತೂರು ಗ್ರಾಮಸ್ಥರು ಕಂಬನಿಗರೆದರು. ಈ ಮನಕಲಕುವ ಚಿತ್ರಣವಂತೂ ಕಲ್ಲು ಹೃದಯವನ್ನೂ ಹಿಂಡಿ ಹಿಪ್ಪೆಯಾಗಿಸುವಂತಿತ್ತು. ಆ ಬಳಿಕ ಮಂಜುಳಾ ಪ್ರತಿ ರೂಪವನ್ನು ಆಕೆಯ ಹುಟ್ಟೂರು ಬೆಟ್ಟತ್ತೂರಿಗೆ ಕೊಂಡೊಯ್ದು ಕುಟುಂಬಕ್ಕೆ ಸೇರಿದ ಸ್ಮಶಾನದಲ್ಲಿ ಮಣ್ಣು ಮಾಡಲಾಯಿತು.

ಮೂಲತಃ ಬೆಟ್ಟತ್ತೂರಿನ ನಿವಾಸಿ ಸೋಮಯ್ಯ ಅವರ ಪುತ್ರಿ ಮಂಜಳಾ, ಮದೆನಾಡಿನ ಮದೆಮಹೇಶ್ವರ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದಳು. ಬೆಟ್ಟತ್ತೂರಿನಿಂದ ಮದೆನಾಡು ಕಡೆಗೆ ಒಂದೇ ಬಸ್ ವ್ಯವಸ್ಥೆ ಇದ್ದ ಹಿನ್ನೆಲೆಯಲ್ಲಿ ಆಕೆಯನ್ನು ಜೋಡುಪಾಲದ ತನ್ನ ಸಂಬಂಧಿಕರಾದ ಬಸಪ್ಪ ಅವರ ಮನೆಯಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು.

ಮಂಜುಳಾ ಅತ್ಯುತ್ತಮ ಥ್ರೋಬಾಲ್ ಆಟಗಾರ್ತಿ. ಕಳೆದ ವರ್ಷ ಉಡುಪಿಯಲ್ಲಿ ನಡೆದ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿದ್ದಳು. ಈ ಬಾರಿಯ ಕ್ರೀಡಾಕೂಟಕ್ಕೂ ಈಕೆಯನ್ನು ಆಯ್ಕೆ ಮಾಡಲಾಗಿತ್ತು. ಆಗಸ್ಟ್ 16ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಭಾರೀ ಮಳೆಯಿಂದ ಸಂಭವಿಸಿದ ಜಲ ಪ್ರಳಯದಿಂದಾಗಿ ಬಸಪ್ಪ ಅವರ ಮನೆಗೆ ಸಂಪೂರ್ಣ ನೀರು ನುಗ್ಗಿತ್ತು. ಮನೆಯಲ್ಲಿದ್ದ ಬಸಪ್ಪ, ಗೌರಮ್ಮ, ಮೋನಿಶಾ ಸೇರಿದಂತೆ ಮಂಜುಳಾ ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಮಂಜುಳಾ ಹೊರತು ಪಡಿಸಿ ಮೂವರ ಶವಗಳು ಪತ್ತೆಯಾಗಿ ಅಂತ್ಯ ಸಂಸ್ಕಾರವೂ ನಡೆದಿದೆ. ಆದರೆ ಮಂಜುಳಾ ಜಲಪ್ರಳಯದಲ್ಲಿ ಕಣ್ಮರೆಯಾಗಿ ಇಂದಿಗೆ 56 ದಿನಗಳು ಕಳೆದರೂ ಪತ್ತೆಯಾಗಿರಲಿಲ್ಲ.

Translate »