ನ.28ಕ್ಕೆ ವಿ.ಪೇಟೆ ಡಿವೈಎಸ್ಪಿ ಕಛೇರಿಗೆ ಮುತ್ತಿಗೆ
ಕೊಡಗು

ನ.28ಕ್ಕೆ ವಿ.ಪೇಟೆ ಡಿವೈಎಸ್ಪಿ ಕಛೇರಿಗೆ ಮುತ್ತಿಗೆ

November 24, 2018

ಪೊನ್ನಂಪೇಟೆ:  ಟಿಪ್ಪು ಜಯಂತಿ ವಿರೋಧಿಸುತ್ತಿರುವ ಕೊಡಗಿನ ಹಿಂದೂ ಸಮು ದಾಯವನ್ನು ನಿಂದಿಸಿ, ಅವಹೇಳನ ಹಾಗೂ ಕೋಮು ಭಾವನೆಗೆ ಧಕ್ಕೆ ತಂದಿರುವ, ಪ್ರಚೋದನಕಾರಿ ಸಂದೇಶ ನೀಡಿರುವ ಆರೋಪದಡಿ ಕೊಡಗಿನ ನಾಪೊಕ್ಲು ನಿವಾಸಿ ಆಸೀಫ್ ವಿರುದ್ಧ ಮೊಕದ್ದಮೆ ದಾಖಲಾಗಿದ್ದರೂ ಇದುವರೆಗೆ ಬಂಧಿಸದೆ ಇರುವುದನ್ನು ಖಂಡಿಸಿ ನ.28 ರಂದು ವಿರಾಜಪೇಟೆ ಡಿವೈಎಸ್‍ಪಿ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ಹಿಂದೂ ಪರ ಸಂಘಟನೆಗಳು ನಿರ್ಣಯ ಕೈಗೊಂಡಿದೆ.

ಪೊನ್ನಂಪೇಟೆ ಕೊಡವ ಸಮಾಜ ರಿಕ್ರಿಯೆಷನ್ ಕ್ಲಬ್ ಸಭಾಂಗಣದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಅಧ್ಯಕ್ಷತೆಯಲ್ಲಿ ವಿವಿಧ ಹಿಂದೂ ಪರ ಸಂಘಟನೆ, ಸಂಘ ಪರಿವಾರ ಹಾಗೂ ಕೊಡವ ಸಮಾಜಗಳು ಸೇರಿ ಈ ನಿರ್ಣಯ ಕೈಗೊಂಡಿದ್ದು, ಪ್ರತಿಭಟನೆಯ ಸಂಘಟನೆಗಾಗಿ ಜಿಲ್ಲಾ ಬಿಜೆಪಿ ಮಾಜಿ ಅದ್ಯಕ್ಷ ಮಾಚಿಮಾಡ ಎಂ.ರವೀಂದ್ರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ.

ಈ ಸಂದರ್ಭ ಮಾತಾನಾಡಿದ ರಾಜೀವ್ ಬೋಪಯ್ಯ, ಟಿಪ್ಪುವಿನ ಕ್ರೌರ್ಯ ಹಾಗೂ ಹತ್ಯಾಕಾಂಡದ ಬಗ್ಗೆ ಮಾತನಾಡಿದ ಅಂಕಣಕಾರ ಸಂತೋಷ್ ತಮ್ಮಯ್ಯ ಅವರನ್ನು ತುಮಕೂರಿನಿಂದ ಡಕಾಯಿತಿ ಪ್ರಕರಣದಲ್ಲಿ ಬಂಧಿಸುವಂತೆ ಮಧ್ಯರಾತ್ರಿಯಲ್ಲಿ ಬಂಧಿಸಲಾಯಿತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮದ ಅವಹೇಳನ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿರುವ ಆಸೀಫ್ ಅನ್ನು ಇದುವರೆಗೂ ಬಂಧಿಸಿಲ್ಲ. ನಾಪೋಕ್ಲು ಠಾಣೆಯಲ್ಲಿ ಆಸೀಫ್ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಸಂಶಯ ಮೂಡುವಂತಾಗಿದೆ. ನ.27 ರೊಳಗೆ ಆಸೀಫ್‍ನನ್ನು ಬಂಧಿಸದಿದ್ದರೆ ನ.28ಕ್ಕೆ ಪ್ರತಿಭಟನೆಯನ್ನು ನಡೆಸಲು ಕರೆ ನೀಡಿದರು.

Translate »