ಇಂಜಿನಿಯರುಗಳಿಗೆ ಸರ್ ಎಂ.ವಿಶ್ವೇಶ್ವರಯ್ಯ ಕಳಸಪ್ರಾಯ: ಸಂಸದ ಪ್ರತಾಪ್‍ಸಿಂಹ ಅಭಿಮತ
ಮೈಸೂರು

ಇಂಜಿನಿಯರುಗಳಿಗೆ ಸರ್ ಎಂ.ವಿಶ್ವೇಶ್ವರಯ್ಯ ಕಳಸಪ್ರಾಯ: ಸಂಸದ ಪ್ರತಾಪ್‍ಸಿಂಹ ಅಭಿಮತ

September 16, 2018

ಮೈಸೂರು: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಎಲ್ಲಾ ಇಂಜಿನಿಯರುಗಳಿಗೆ ಕಳಸಪ್ರಾಯರು. ಅವರು ರಾಜ್ಯಕ್ಕೆ, ದೇಶಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿ, ಅವರಿಗೆ ನಾವೆ ಲ್ಲರೂ ಕೃತಜ್ಞರಾಗಿರಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.

ಸರ್ ಎಂ.ವಿಶ್ವೇಶ್ವರಯ್ಯರ 157 ಜಯಂತಿ ಅಂಗವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಶನಿವಾರ ಮೈಸೂರಿನ ಜೆಎಲ್‍ಬಿ ರಸ್ತೆ ಇಂಜಿನಿ ಯರುಗಳ ಸಂಸ್ಥೆ ಆವರಣದಲ್ಲಿ ಏರ್ಪಡಿ ಸಿದ್ದ ಕಾರ್ಯಕ್ರಮದಲ್ಲಿ ಸರ್ ಎಂ.ವಿಶ್ವೇ ಶ್ವರಯ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಬಳಿಕ ಮಾತನಾಡಿದರು.

ಸರ್ ಎಂ.ವಿಶ್ವೇಶ್ವರಯ್ಯ ಅವರು ಮೈಸೂ ರಿನ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿ ದ್ದಾರೆ. ಕನ್ನಂಬಾಡಿ ನಿರ್ಮಿಸುವ ಮೂಲಕ ಮೈಸೂರು, ಮಂಡ್ಯ, ಬೆಂಗಳೂರು ಜನರ ದಾಹ ತಣಿಸಿದ್ದಾರೆ. ಬೆಂಗಳೂರಿನಲ್ಲಿ ಕೈಗಾ ರಿಕೆಗಳ ಸ್ಥಾಪನೆ ಮೂಲಕ ಕೋಟ್ಯಾಂತರ ಜನತೆಗೆ ಬದುಕು ನೀಡಿದ್ದಾರೆ. ಅವರ ಕೊಡುಗೆ ಕೇವಲ ಮೈಸೂರು, ಬೆಂಗಳೂರಿಗಷ್ಟೇ ಸೀಮಿತವಾಗಿರದೆ ಇಡೀ ದೇಶದ ಜನ ಮೆಚ್ಚುವಂತಹ ಕೆಲಸಗಳನ್ನು ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.

ಕಲ್ಲು ಕುಟ್ಟಿ ಬೆಂಕಿ ತೆಗೆದ ಕಾಲದಿಂದ ಹಿಡಿದು ಇಂದಿನ ರೋಬೋಟಿಕ್ ತಂತ್ರಜ್ಞಾನ ದವರೆಗೆ ಇಂಜಿನಿಯರುಗಳ ಕೊಡುಗೆ ಯನ್ನು ಮೆಚ್ಚಲೇಬೇಕು. ಅದರಲ್ಲೂ ಸರ್ ಎಂ.ವಿ. ಅವರ ವಿಶೇಷ ಸಾಧನೆ ಸರ್ವ ಕಾಲಕ್ಕೂ ಸ್ಮರಣೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಒಬ್ಬ ವ್ಯಕ್ತಿ ತಾನು ಹೋದ ಮೇಲೂ ತನ್ನ ಆಡಳಿತ ಸೇವೆ ಮಾತನಾಡುತ್ತದೆ ಎಂದರೆ ಅದಕ್ಕೆ ದಿವಾನ್ ಸರ್ ಎಂ.ವಿಶ್ವೇಶ್ವರಯ್ಯ ಉದಾಹರಣೆಯಾಗಿದ್ದಾರೆ. ಮೈಸೂರಿನ ರಸ್ತೆಗಳು ಶತಮಾನಗಳ ಹಿಂದೆಯೇ ಇಂದಿನ ಜನಸಂಖ್ಯೆಗೆ ಆಧಾರಿತವಾಗಿ ಯೋಜಿಸಿ ಯುಜಿಡಿ ವ್ಯವಸ್ಥೆಯ ಸೇವೆ ಮನೆಬಾಗಿ ಲಿಗೆ ಬರುತ್ತದೆ ಎಂದರೆ ಸರ್ ಎಂ.ವಿ ಅವರ ಚಿಂತನಾ ಶಕ್ತಿ ಅಗಾಧವಾದುದು. ನೀರಿನ ಹನಿಯ ಮೌಲ್ಯತೆಯನ್ನು ವಿಶ್ವಕ್ಕೆ ಸಾರಿದವರು. ಅವರು ಯಾವುದೋ ಒಂದು ಜನಾಂಗಕ್ಕೆ ಅಥವಾ ಪ್ರದೇಶಕ್ಕೆ ಸೀಮಿತ ವಾದವರಲ್ಲ ಎಂದರು.

ವೆಂಗೀಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಕಾರ್ಪೊರೇಟರ್‍ಗಳಾದ ಮಾ.ವಿ. ರಾಮ್‍ಪ್ರಸಾದ್, ಸತೀಶ್, ಸುಬ್ಬಯ್ಯ, ನಿರ್ಮಲಾ, ಬಿಜೆಪಿ ಮುಖಂಡ ಎನ್.ಎಂ. ನವೀನ್‍ಕುಮಾರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್.ಎನ್. ಶ್ರೀಧರಮೂರ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನಾ ಕಾರ್ಯ ದರ್ಶಿ ನಂ.ಶ್ರೀಕಂಠಕುಮಾರ್, ಪರೀ ಕ್ಷಾಂಗ ಕುಲಸಚಿವ ಡಾ.ಶೆಲ್ವಪಿಳ್ಳೈ ಅಯ್ಯಂ ಗಾರ್, ಮುಳ್ಳೂರು ಗುರುಪ್ರಸಾದ್, ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ವರುಣಾ ಪ್ರಶಾಂತ್, ಎಸ್.ಜಯಸಿಂಹ, ಕೆ.ಎಂ.ನಿಶಾಂತ್, ಸಂದೀಪ್, ತೇಜಸ್ ಶಂಕರ್ ಇನ್ನಿತರರು ಭಾಗವಹಿಸಿದ್ದರು.

Translate »