ಆ.11, ಮಣ್ಣಿನ ಮಗನಿಂದ ನಾಟಿ : ಸೀತಾಪುರ ಗ್ರಾಮದ ಗದ್ದೆಯಲ್ಲಿ ನಾಟಿ ಮಾಡಲಿದ್ದಾರೆ ಮುಖ್ಯಮಂತ್ರಿ ಎಚ್ಡಿಕೆ!
ಮಂಡ್ಯ

ಆ.11, ಮಣ್ಣಿನ ಮಗನಿಂದ ನಾಟಿ : ಸೀತಾಪುರ ಗ್ರಾಮದ ಗದ್ದೆಯಲ್ಲಿ ನಾಟಿ ಮಾಡಲಿದ್ದಾರೆ ಮುಖ್ಯಮಂತ್ರಿ ಎಚ್ಡಿಕೆ!

August 8, 2018

ಮಂಡ್ಯ: ಗ್ರಾಮವಾಸ್ತವ್ಯ ಮಾಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದೀಗ ಗದ್ದೆಯಲ್ಲಿ ನಾಟಿ ಕೆಲಸ ಮಾಡುವ ಮೂಲಕ ಮತ್ತೊಂದು ಹೊಸ ಹೆಜ್ಜೆಯನ್ನಿಡುವುದ ರೊಂದಿಗೆ ಮಣ್ಣಿನ ಮಗನೆಂದು ಸಾಬೀತು ಮಾಡಲು ಹೊರಟಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆ.11 ರಂದು ಪಾಂಡವಪುರ ತಾಲೂಕಿನ, ಅರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಸೀತಾಪುರ ಗ್ರಾಮದ ಗದ್ದೆಯೊಂದರಲ್ಲಿ ನಾಟಿ ಕೆಲಸ ಮಾಡುವ ಮೂಲಕ ಮಣ್ಣಿನ ಮಗನಾಗಲಿದ್ದಾರೆ. ಅಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕುಮಾರಣ್ಣ ಗದ್ದೆಗಿಳಿದು ರೈತರ ಜೊತೆ ನಾಟಿ ಮಾಡಲಿದ್ದಾರೆ ಎಂದು ಸಣ್ಣ ನೀರಾ ವರಿ ಸಚಿವ ಸಿ.ಎಸ್.ಪುಟ್ಟರಾಜು ನಗರ ದಲ್ಲಿಂದು ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

ಕೇವಲ ತೋರಿಕೆಗೆ ಭತ್ತ ನಾಟಿ ಮಾಡದೇ ಬರೋಬ್ಬರಿ 3 ಗಂಟೆಗಳ ಕಾಲ ಗದ್ದೆ ಯಲ್ಲಿ ಕೆಲಸ ಮಾಡಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಜೊತೆ ತಾನು ರೈತನಾಗಲಿದ್ದಾರೆ. ರೈತರ ಜೊತೆ ನಾವಿದ್ದೇವೆ. ನಮ್ಮದು ರೈತ ಪರ ಸರ್ಕಾರ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಈ ಮೂಲಕ ರೈತರಿಗೆ ಆತ್ಮಸ್ಥೈರ್ಯ ತುಂಬಲಿದ್ದಾರೆ.

1980ರ ದಶಕದಲ್ಲಿ ಕುಮಾರಸ್ವಾಮಿ ಜಮೀನಿನ ಹುಡುಕಾಟದಲ್ಲಿದ್ದರು. ಕೊನೆಗೆ ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಜಮೀನು ಪಡೆದು ಪ್ರತಿದಿನ ಸುಮಾರು 8, 9 ಗಂಟೆ ಜಮೀನಿನಲ್ಲಿ ಎಚ್‍ಡಿಕೆ ಕೆಲಸ ಮಾಡುತ್ತಿದ್ದರು ಎಂದರು.

ಜಿಲ್ಲೆಯ ಅಭಿವೃದ್ದಿ ಬಗ್ಗೆ ಚರ್ಚೆ: ನಾಟಿ ಕೆಲಸದ ಬಳಿಕ ಸಂಜೆ 4 ಗಂಟೆಗೆ ಕೆಆರ್ ಎಸ್‍ನ ಹೊಟೇಲ್‍ನಲ್ಲಿ ಜಿಲ್ಲೆಯ 7 ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಮುಖ್ಯಮಂತ್ರಿಗಳು ಚರ್ಚೆ ನಡೆಸಲಿದ್ದಾರೆ. ಬಳಿಕ ಕೆ.ಆರ್.ನಗರದ ಚುಂಚನಕಟ್ಟೆ ಜಲ ಪಾತೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ವಿವರಿಸಿದರು.

ಜಲಪಾತೋತ್ಸವ ಮುಂದೂಡಿಕೆ: ಆ.26 ಮತ್ತು 27 ಕ್ಕೆ ನಿಗದಿಯಾಗಿದ್ದ ಗಗನಚುಕ್ಕಿ ಜಲಪಾತೋತ್ಸವವನ್ನು ಮುಂದೂಡಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸೆ.15 ಮತ್ತು 16ರಂದು ಗಗನಚುಕ್ಕಿ ಜಲಪಾತೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.

ಮೈಷುಗರ್ ಮತ್ತು ಪಿಎಸ್‍ಎಸ್‍ಕೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶಾಶ್ವತವಾಗಿ ಕೆಲಸ ನಿರ್ವಹಿಸುವ ಸಾಮಥ್ರ್ಯವಿರು ವಂತಹ ಅತ್ಯಾಧುನಿಕ ಯಂತ್ರಗಳನ್ನು ಅಳವ ಡಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಈಗಾಗಲೆ 150 ಕೋಟಿ ಅನುದಾನ ನೀಡಲು ಯೋಜಿಸಲಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಅಶೋಕ್ ಜಯರಾಂ ಸೇರಿದಂತೆ ಮತ್ತಿತರರಿದ್ದರು.

Translate »